ಆಪರೇಷನ್!

ಡಾಕ್ಟರರೇ ಏನು ಸುದ್ದಿ?
ಏನಿಲ್ಲ ಪುಷ್ಪಣ್ಣ, ಮಾಜಿಪ್ರಧಾನಿ ದೇವೆಗೌಡರು ಆಸ್ಪತ್ರೆಗೆ…. ಬಂದಿದ್ದರುzzzz..

ಹೋಯ್ ಪತ್ರಕರ್ತ ಪರಮೇಶಣ್ಣ ಯಾವ ಕಡೆ ಓಡ್ತಾ ಇದ್ದೀರಿ?
ಪುಷ್ಪಣ್ಣ, ಆಮೇಲೆ ಮಾತಾಡ್ತೇನೆ, ಒಂದು ಸ್ಟಿಂಗ್ ಆಪರೇಷನ್ ಅರ್ಜೆಂಟ್ ಉಂಟು!
———–

ಇಲ್ಲಿಗೆ ನಮ್ಮ ವಾರ್ತಾಪ್ರಸಾರ ಮುಗಿಯಿತು. ಮುಂದಿನ ಇಂಜೆಕ್ಷನ್ನೊಂದಿಗೆ ಮತ್ತೆ ಭೇಟಿಯಾಗೋಣ.

ಫ್ಲೇವರ್ಡ್ ನ್ಯೂಸ್ ಇನ್ ಫ್ಲವರ್ ಟಿವಿ.

Advertisements

ಸೋಲಿನ ಮೇಲೊಂದು ಸೋಲಿನ ಕತೆಯು!

ಅದು ದಕ್ಷಿಣಕನ್ನಡ ಜಿಲ್ಲೆ ಕಿನ್ನಿಗೋಳಿಯ ‘ರಾಜಾಂಗಣ’ವೆಂಬ ಸಭಾಂಗಣ. ಅಂದು ಎಪ್ರಿಲ್ ಇಪ್ಪತ್ತಮೂರು. ನಾನು ಮತ್ತು ನನ್ನ ಕೈಹಿಡಿದಾಕೆ ಆತ್ಮೀಯರೊಬ್ಬರ ಮದುವೆಗೆ ಹಾಜರಾಗಿದ್ದೆವು. ಸಭಾಂಗಣದಲ್ಲಿ ನನ್ನಾಕೆ ತನ್ನ ಚಿಕ್ಕಪ್ಪನ ಕೈಯನ್ನು ನೋಡುತ್ತ ನಿಮ್ಮ ಬ್ರೇಸ್ಲೆಟ್ ಎಲ್ಲಿ ಅಂಥ ಕೇಳಿದಳು. ಹುಡುಕಾಟ ಆರಂಭ. ತನ್ನ ನೆಚ್ಚಿನ ಕೈಖಡಗ ಕಳೆದುಕೊಂಡ ಪೂನಾದ ಚಿಕ್ಕಪ್ಪ ಗಣೇಶ್ ಶೆಟ್ಟಿಯವರೊಂದಿಗೆ ನಾವೂ ಹತ್ತು ಹಲವು ಮಂದಿ ಇಡಿಯ ಸಭಾಂಗಣದಲ್ಲಿ ಜಮಖಾನೆ, ಊಟದ ತಟ್ಟೆಗಳನ್ನು ಅಡಿಮೇಲು ಮಾಡಿ ಹುಡುಕಾಟ ನಡೆಸಿದರೂ ಉಹುಂ ಸುಳಿವಿಲ್ಲ. ಸವೆದದ್ದು ಎಲ್ಲರ ಶೂ ಸೋಲ್ ಮಾತ್ರ!

ಅದೇ ದಿನ ಸಂಜೆ ಮತ್ತೆ ಫೋಟೊಗ್ರಾಫಿ, ವಿಡಿಯೋಗ್ರಾಫಿಗಳನ್ನೆಲ್ಲ ತೊಳೆದು ತದಕಾಡಿದರೂ ಸುಳಿವೇ ಇಲ್ಲ. ಅವರಿಗೆ ಸಿಕ್ಕಿದೆ ಇವರಿಗೆ ಸಿಕ್ಕಿದೆಯೆಂದು ಅಲೆದಾಡಿದರೂ ನಮಗೆ ವಾಪಾಸು ದಕ್ಕಲೇ ಇಲ್ಲ ಆ ಚಿನ್ನದ ಆಭರಣ!

ಇದು ಎಪ್ರಿಲ್ ಇಪ್ಪತ್ತಮೂರರ ಒಂದು ಸೋಲಿನ ಕತೆ!

***
ಮೇ ಮೂವತ್ತು, ಎರಡುಸಾವಿರದ ಹದಿನಾಲ್ಕು. ಪುನರೂರಿನ ನಾಗವೀಣ ಸಭಾಂಗಣ. ಪಾತ್ರಧಾರಿ ಪುನಃ ಗಣೇಶ್ ಶೆಟ್ಟಿ, ಪೂನ. ಸೋಲಿನ ಕತೆಯೊಂದು ಮುಂದುವರಿದಿತ್ತು. ಅಂದು ರಾಜಾಂಗಣದಲ್ಲಿ ಅಷ್ಟೊಂದು ಓಡಾಡಿ ಶೂ ಸೋಲ್ ಸವೆಸಿಕೊಂಡಿದ್ದ ಚುರುಕು ಮನುಷ್ಯ ಇಂದು ನಿಂತಲ್ಲೇ ನಿಂತಿದ್ದಾರೆ. ಮದುಮಗ ನನ್ನಾಕೆಯ ಸೋದರಮಾವ ಪ್ರವೀಣ್ ಶೆಟ್ಟಿಯವರ ಬಲಪಕ್ಕದಿಂದ ಅತ್ತಿತ್ತ ಸರಿಯುತ್ತಿಲ್ಲ! ಎಲ್ಲ ಫೋಟೋಗಳಲ್ಲಿ ಗಣೇಶವದನ, ನನಗೋ ಆಶ್ಚರ್ಯ!.

ಇಲ್ಲೂ ಅವರಿಗೊಂದು ಸೋಲು ಕಾಡಿತ್ತು. ಮತ್ತೇನಲ್ಲ ಆ ಸೋಲು… ಅವರ ಶೂ ಸೋಲೊಂದು ಕಳಚಿ ಅವರು ನಿಂತಲ್ಲೇ ನಿಂತಿದ್ದರು ಅಷ್ಟೇ! ಅಲುಗಾಡುತ್ತಿಲ್ಲ! ಇದು ಎರಡನೇ ಸೋಲಿನ ಕತೆ!

ಒಂದರ ಮೇಲೊಂದು ಸೋಲು ಕಾಡುತ್ತಿದ್ದರೂ ಬಾಳಿನಲಿ ನಗು ಮಾಸದಿರಲಿ ಎಂಬ ಆಶಯದೊಂದಿಗೆ ಕತೆ ಮುಗಿಸುತ್ತಿದ್ದೇನೆ, ನಿಮಗೆ ಈ ಕತೆಯನ್ನು ಮುಟ್ಟಿಸುವಲ್ಲಿ ಸೋಲು ಕಾಡಲಿಲ್ಲವೆಂಬ ತೃಪ್ತಿಯಲ್ಲಿ!

ಜಗತ್ತು!

ಮೊನ್ನೆ ಕಬ್ಬನ್ ಪಾರ್ಕಿನ ಕಲ್ಲುಬೆಂಚಿನಲಿ ಮೊಲೆ ಹಾಲುಣಿಸುತ್ತಿದ್ದವಳ ಕಂಡು ಮೀಸೆಯಡಿಯಲ್ಲಿ ನೀರುಸುರಿಸಿಕೊಂಡಿದ್ದ ನೀಲಿಕಣ್ಣೊಂದು ಇಂದು ಅಮ್ಮನ ದಿನದಂದು ಪತ್ರ ಬರೆಯುತ್ತಿದೆ…

ಅಮ್ಮಾ, ನೀನೆಂದರೆ…

ನನಗೆ ಜಗತ್ತು!

‘ಪ್ಯಾರಾ’ಕ್ಕೊಂದೇ ವಾಕ್ಯವು – ಸುಮಧುರ ‘ಸರ್ವಸ್ವ’ದ ಛಾಯಾಗೀತವು’!

ಶಿಶಿರ ಋತು, ಕುಂಭ ಮಾಸದ ತೃತೀಯ ದಿನ, ಮಾಘ ಕೃಷ್ಣಪ್ಪಕ್ಷದ ಪಾಡ್ಯ, ಪ್ರೇಮಿಗಳ ದಿನದ ಮರುದಿವಸ ಅಂದರೆ ಫೆಬ್ರವರಿ ಹದಿನೈದರ ಅಪರಾಹ್ನ ಮೂರೂವರೆ ಘಂಟೆಯ ಸರಿಸುಮಾರಿಗೆ ಬೆಂಗಳೂರಿನ ಭಾಗವೇ ಎಂದೆನಬಹುದಾದ ವೈಟ್-ಫೀಲ್ಡಿನ ಇಮ್ಮಡಿಹಳ್ಳಿ ರಸ್ತೆಯಿಂದಾರಂಭಗೊಳಿಸಿದ ನನ್ನ ಮತ್ತು ನನ್ನ ಮಡದಿಯ ನ್ಯಾನೋ ಪಯಣವು, ಮಾರತಹಳ್ಳಿಯಲ್ಲಿ ಮಿತ್ರರಾದ ಅತ್ರಾಡಿ ಸುರೇಶ ಹೆಗ್ಡೆಯವರೊಡಗೂಡಿ ಮತ್ತು ಅವರ ಸೋದರಳಿಯ ಚಿನ್ಮಯರನು ಹಳೆವಿಮಾನ ನಿಲ್ದಾಣ ರಸ್ತೆಯಲಿ ಸೀಟಿಗೇರಿಸಿಕೊಂಡು, ಅರಿಯದ ದಾರಿಯಲೂ ಜಿಪಿಎಸ್ ಪರಮಾತ್ಮನ ಕೃಪಾಕಟಾಕ್ಷದಿಂದ ಹನುಮಂತನಗರದ ‘ಕೆಂಗಲ್ ಹನುಮಂತಯ್ಯ ಕಲಾಸೌಧ’ವನ್ನು ತಲುಪಿದಾಗ ಅದೇ ಸಂಜೆ ಐದು!

ಐದಾದರೂ ಸೂರ್ಯ ಮುಳುಗುತಿದ್ದನೋ ಇಲ್ಲವೋ ಆಕಾಶ ನೋಡುವ ಅವಕಾಶ ಸಿಗದಿದ್ದರೂ ಆ ಘಳಿಗೆಯಲ್ಲಿ ‘ಥಟ್ ಅಂತ’ ಸಿಕ್ಕ ಡಾ.ನಾ.ಸೋಮೇಶ್ವರರ ಜೊತೆ ಸೇರಿ ಪ್ರಿಯ ಮಿತ್ರ ಎಂ.ಎಸ್.ಪ್ರಸಾದ್ ಅವರ ಮುಂದಾಳತ್ವದಲ್ಲಿ ಪಕ್ಕದ ಕೋಟ ಶಿವರಾಮಕಾರಂತ ರಸ್ತೆಯಂಚಿನಲ್ಲಿರುವ ‘ಗಣೇಶ ಭವನ’ದೆಡೆಗೆ ಅಡಿಯಿಟ್ಟು ಚಹವೋ ಕಾಫಿಯೋ ಹೀರುವ ಮಹಾಯೋಜನೆಯು, ಶಟ್ಟರೆಳೆದು ಭವನವು ಬಂದಾಗಿದ್ದರಿಂದಾಗಿ, ತಿರುವು ಪಡೆದುಕೊಂಡು ಎಡಪಕ್ಕದ ಅ.ನ.ಸುಬ್ಬರಾಯ ರಸ್ತೆಯಂಚಿನ ‘ಸುಬ್ರಮಣ್ಯ ಸ್ಟೋರ್’ನ ಫ್ಲಾಸ್ಕ್ ಸ್ಟೋರ್ಡ್ ಚಹಾವನ್ನು ಸಣ್ಣ ಸಣ್ಣ ಕಪ್ಪುಗಳಲ್ಲಿ ಹೀರುವಲ್ಲಿಗೆ ಮುಕ್ತಾಯಗೊಂಡಿತ್ತು.

ತದನಂತರ ಮರಳಿ ಕಲಾಸೌಧದಾವರಣದಲಿ ಕೂರಲು ಜಾಗವಿರದಿದ್ದರೂ ಪಕ್ಕದ ದಂಡೆಗೋ, ಕಬ್ಬಿಣದ ದಂಡಿಗೋ ಒರಗಿ ನಿಂತು ಒಂದಷ್ಟು ಹರಟೆ, ಅರ್ಥ ಅನರ್ಥಕೋಶಗಳ ಅನಾವರಣವಾಗುತ್ತಿರುವಾಗ್ಗೆ, ಆಗಮಿಸ ಹತ್ತಿದ (ಹತ್ತಿದ ಬಳಸಲು ಕಾರಣವಿದೆ, ಅಲ್ಲಿನ ಮೆಟ್ಟಿಲು ಹತ್ತಿದವರಿಗೆ ಗೊತ್ತಾಗಬಹುದು) ಹತ್ತು ಹಲವು ಫೇಸ್ಬುಕ್ ಮಿತ್ರರು ಮಾತಿನಾಲಿಂಗನದೊಳೋ, ಕೈಯ್ಯಕುಲುಕುವಿಕೆಯೊಳೋ ಕಿಲಕಿಲನಾದವನೆಬ್ಬಿಸುತ್ತಿರಲು, ಕತ್ತಲಾಗುತ್ತಿರುವ ಕಾಲಮಾನದಲ್ಲೂ ನನ್ನಂತವರ ಹಲ್ಲುಗಳು ಅವರಿವರ ಕುತ್ತಿಗೆಗೆ ಜೋತುಬಿದ್ದ ಕ್ಯಾಮೆರಕ್ಕೋ, ಕಿಸೆಯೇರಿ ಬಿಸಿಯೋ, ಕಿವಿಯೇರಿ ಬ್ಯುಸಿಯೋ ಆಗಬೇಕಾಗಿದ್ದ ಮೊಬೈಲು ಕ್ಯಾಮೆರಕ್ಕೋ ಕ್ಲಿಕ್ಕೆಂದು ಪಾಡ್ಯದಾಗಸದಲ್ಲಿ ಬೆಳದಿಂಗಳಲಿಲ್ಲದಿದ್ದರೂ ಮಿತ್ರತ್ವದ ನಂಟುಗಳ ಹೊಳಪನೊಂದಿಷ್ಟು ಹೊರಸೂಸಿದ್ದವೆಂದರೆ ತಪ್ಪಾಗಲಾರದೇನೋ!
ಆ ಆವರಣದಲಿ ಏರ್ಪಾಡಾಗಿದ್ದ ಚಹಾ ಪಾನೀಯವನ್ನು ಮತ್ತೊಮ್ಮೆ ನಾಲಗೆಯೊಳು ಸವಿದು, ಗಂಟಲಲಿಳಿಸಿ ರಂಗದತ್ತ ಮುಖಮಾಡಿ ಅಡಿಯಿಡುತ ಏಳರ ಸವಿಸಮಯದಲಿ ”ಟಿಕೆಟಿಗೊಂದು ತೂತನು ಕೊರೆದು ಬಾಗಿಲನು ತೆರೆವವರನು’ ದಾಟಿ ಆಸೀನರಾಗಿ ಛಾಯಾಗೀತವನಾಲಿಸಲು ಸನ್ನದ್ಢವಾಗಿ ಕುಳಿತಿರಲು ವೇದಿಕೆಯೇರಿದ ಮೃದುಮನದ ಮಿತ್ರ ಸುನಿಲ ರಾಯರು ನಿರೂಪಣೆಯಾರಂಭಿಸಲು ಅಂತೂ ಕಾರ್ಯಕ್ರಮಕ್ಕೊಂದು ವಿದ್ಯುಕ್ತ ಚಾಲನೆ ಸಿಕ್ಕಿ ‘ಸರ್ವಸ್ವ’ದ ಸೋಮಯಾಜಿ ನಾಗರಾಜರ ಬೆರಳುಗಳಲಿ ಬೆಳಕುಗಳು ನರ್ತನಗೊಳ್ಳುವ ನಡುವಿನಲೂ, ‘ಗಾಯಕಿಯರ ನಿರುದ್ಯೋಗಿ ಗಂಡಂದಿರ ಸಂಘದ'(ಸ್ವ-ಬಿರುದು) ಸಂ-ಚಾಲಕ ಛಾಯಾ’ಪತಿ’ ಪದ್ಮಪಾಣಿ ಜೋಡಿದಾರರ ಮಧ್ಯಾಂತರ ‘ಪಂಚ್’ ಸಾಲುಗಳೊಂದಿಗೆ, ಇಂಡೋ ಚೈನಾ, ಟೈಟಾನಿಕ್ ಶಂಕರಾಭರಣಂ, ಮಂಡ್ಯ ಮೆಲೋಡಿ (ಮೇಲೋಡಿ?), ‘ಯಹ್ ಮೇರೇ ವತನ್ ಕೇ ಲೋಗೋ” ಗೀತೆಯ ಕನ್ನಡ ತುಣುಕು ಮೊದಲಾದ ವೈವಿಧ್ಯಮಯ ಗೀತೆಗಳ ಪ್ರಸ್ತುತಿ ಬಿ.ಆರ್.ಛಾಯ ಅವರ ಅತ್ಯದ್ಭುತ ಕಂಠಸಿರಿಯಲ್ಲಿ, ಅದರ ಜೊತೆಗೆ ಹೆಚ್.ಕೆ.ರಘು, ವಿಕ್ರಮ್, ಸಂದೀಪ್ ಇವರುಗಳ ಧ್ವನಿಲಾಲಿತ್ಯಗಳು ಶನಿವಾರದ ಸಂಧ್ಯಾಕಾಲಕ್ಕೆ ಕರ್ಣಾನಂದವನ್ನುಂಟು ಮಾಡಿದ್ದು ನಮ್ಮ ಪಾಲಿಗಂತೂ ಸತ್ಯ!

ಈ ಸುಂದರ ಆಯೋಜನೆಯ ನಡುವೆಯೂ, ತನ್ನ ಮೊಟ್ಟಮೊದಲ ಕೃತಿಯಾದ ‘ಮೈಕೆಲ್ ಕೆ ಕಾಲಮಾನ’ (ನೋಬೆಲ್ ಪುರಸ್ಕಾರ ಪಡೆದ ದಕ್ಷಿಣಾಆಪ್ರಿಕಾದ ಲೇಖಕ ಕುಟ್-ಸೀಯವರ ‘ದ ಲೈಫ್ ಅಂಡ್‌ ಟೈಮ್ಸ್‌ ಆಫ್‌ ಮೈಕೆಲ್ ಕೆ’ ಕಾದಂಬರಿಯ ಕನ್ನಡ ಅನುವಾದ)ವನ್ನು ಸುನಿಲ್ ರಾವ್ ಬಿಡುಗಡೆಗೊಳಿಸುವಾಗ ಅತೀ ಭಾವುಕರಾದಂತೆ ಕಂಡರೂ, ವೇದಿಕೆಯೇರಿದ ಇಂದಿರಾ ಲಂಕೇಶ್, ವೀಣಾ ಬನ್ನಂಜೆ, ಜಯಲಕ್ಷ್ಮಿ ಪಾಟೀಲ್, ರೇಖಾರಾಣಿ, ಬಿ.ಆರ್.ಛಾಯಾ ಪಂಚ-ಮಹಿಳಾಮಣಿಗಳ ಅಮೃತಹಸ್ತದಲಿ ಕೇವಲ ‘ಐದುನಿಮಿಷ’ ‘ಕಾಲಮಾನ’ದಲ್ಲಿ ಕಾಲ ಕೊಳ್ ಯಾ ಕಾಲ ಕೊಲ್ ಆಗದೆ, ಯಾರ ‘ಮೈಗೆಲ್ಲೂ’ ಇರಿದಂತೆಯೂ ಅನಿಸದೆ ಚೊಕ್ಕವಾಗಿತ್ತು!

ಕೊನೆಯದಾಗಿ ಒಂದೇ ವಾಕ್ಯದಲ್ಲಿ ಹೇಳುವುದಾದರೆ ಸುಮಧುರ ‘ಸರ್ವಸ್ವ’ದ ಛಾಯಾಗೀತವು’ ಕಳೆದ ಶನಿವಾರದ ಸವಿಗಾನವಾಗಿತ್ತು ಅನ್ನುತ್ತಾ ಇಂತಹ ಕಾರ್ಯಕ್ರಮಗಳು ಇನ್ನಷ್ಟು ಮೂಡಿಬರಲಿ ಎನ್ನುವ ಆಶಯದೊಂದಿಗೆ ಅದರ ಹಿಂದಿನ ಶ್ರಮಿಕರಿಗೆ, ಕೈಜೋಡಿಸಿದ ಎಲ್ಲರಿಗೂ ವಂದನೆಗಳು, ನಮನಗಳು!
=====
ಚಿತ್ರಕೃಪೆ: ರಾಘವ್ ಶರ್ಮ

chaya1

ಬೆಲೆ?

ಎಷ್ಟು ಬಾಡಿಗೆ?

ಒಂಬತ್ತೂವರೆ ಸಾವಿರಕ್ಕಿಂತ ಒಂದ್ರೂಪಾಯಿ ಕಡ್ಮೇನಾದ್ರೂ ಕೊಡಾಕಿಲ್ಲ!

ಆಯ್ತು ಸರ್, ತಗೊಳ್ಳಿ ಟೋಕನ್ ಅಡ್ವಾನ್ಸ್…

ನಿಮ್ಮ ಮ್ಯಾರೇಜ್ ಸರ್ಟಿಫಿಕೇಟ್-ನ ಒಂದು ಕಾಪಿ ಕೊಡಿ!

ಯಾಕ್ಸಾರ್, ಇಲ್ನೋಡಿ ಸರ್ ನನ್ ಹೆಂಡ್ತಿ ಇವ್ಳು, ಕುತ್ತಿಗೇಲಿ ತಾಳಿ ಇದೆ!

ಈಗೆಲ್ಲ ಮನಸಿಗ್ ಬಂದಂಗೆ ಎಲ್ರೂ ಕಟ್ಕೋತಾರೆ, ನೀವು ಮ್ಯಾರೇಜ್ ಸರ್ಟಿಫಿಕೇಟ್ ಕೊಡ್ದಿದ್ರೆ ಮನೆ ಕೊಡಾಕಿಲ್ಲ, ಸಾಮೀ…!

ಪೋಲಿ-ಟಿಕ್ಸ್!

ಸೊಂಟದ ಕೆಳಗಿನ ವಸ್ತುಗಳನ್ನೇ ಜೀವಾಳವನ್ನಾಗಿಸಿಕೊಂಡ ಕವಿವರ್ಯರ ಕವಿತೆ(?)ಗಳನ್ನು ಎರಡುವರ್ಷಗಳ ಹಿಂದೆ ತೀವ್ರವಾಗಿ ಖಂಡಿಸುತ್ತಿದ್ದ ನನ್ನಾತ್ಮೀಯ ಮಿತ್ರರೋರ್ವರು ಇಂದು ಅದೇ ರಚನೆಗಳನ್ನು ಉತ್ಕೃಷ್ಟವೆನ್ನುವಾಗ ನಾನು ಪ್ರಶ್ನಿಸಿದರೆ ನನ್ನ ‘ದೃಷ್ಟಿಕೋನ’ ಬದಲಾಯಿಸಿದ್ದೇನೆ ಎನ್ನುವವರು ಅರವಿಂದ ಕೇಜ್ರೀವಾಲರ ಇಂದಿನ ನಡೆಗಳ ಬಗ್ಗೆ ವಿರೋಧ ವ್ಯಕ್ತಪಡಿಸುತ್ತಾರೆ!

ನಾಲಗೆಯ ನೋವ-ನ(ನಾ)ಲಿಸುತಾ!

ಬದುಕೆಂದರೆ ಹಾಗೆ, ಕೆಲವೊಮ್ಮೆ ಮೌನವಾಗಿಸಿಬಿಡುತ್ತದೆ, ಮಾತೇ ಆಡದಂತೆ ಮೂಕನನ್ನಾಗಿಸಿ ಬಿಡುತ್ತದೆ, ಅಕ್ಷರಶಃ ನಿಜ!

ಹೀಗೆ ಒಮ್ಮೆ ಮೌನವಾಗುವ ಪರಿಸ್ಥಿತಿ ಬಂದಾಗ ದೂರದಲ್ಲಿರುವವರ ಜೊತೆ ವಾಟ್ಸ್ ಆಪ್, ಹ್ಯಾಂಗ್-ಔಟ್, ಚಾಟ್ ಆನ್ ಗಳಂಥ ಆಪ್-ಗಳ ಮುಖೇನವೋ ಅಥವಾ ಫೇಸ್ಬುಕ್ ಮೂಲಕ ಚಾಟ್ ಮಾಡಬಹುದಾದರೂ ಪಕ್ಕದಲ್ಲೇ ಇರುವ ಹೆಂಡತಿಯ ಜೊತೆ? ಈ ಸಂಭಾಷಣೆ…ನಮ್ಮ ಈ ಮೌನ ಸಂಭಾಷಣೆ, ಅತಿ ಮೌನ, ಕಡು ಸೈಲೆಂಟ್! ತುಟಿ ಬಿಚ್ಚದೆ , ಹಲ್ಲು ಕಿರಿಯದೆ ಬರಿ ಮೌನ ಸಂಭಾಷಣೆ! ಮದುವೆಯಾದ ತಿಂಗಳೊಂದರಲ್ಲಿ ಹೆಂಡತಿಯ ಪ್ರತೀ ಮಾತಿಗೆ ‘ಹ್ಮೂಂ’ಕಾರಗಳ ಜೊತೆ, ಅದು ಕೊಡಲೆ? ಇದು ತರಲೇ? ಎಂಬ ಪ್ರಶ್ನೆಗಳಿಗೆ ಕೋಲೇ ಬಸವನಾದ ಅತೀ ನೋವಿನ ಘಳಿಗೆಯಿದು. ಮೊನ್ನೆ ಜ್ವರ ಬಂದಾಗ ನನಗೆ ಸಿಕ್ಕ ಹೊಸ ಡಾಕ್ಟರೊಬ್ಬರು ಕೊಟ್ಟ ‘ಆಂಟಿಬಯೋಟಿಕ್’ಗೆ ಮಾತು ಹೊರಬಾರದಂತೆ ನಾಲಗೆಯೆಲ್ಲ ಬೆಂದು, ವಾಚಾಳಿಯಾಗಿದ್ದ ನನ್ನ ಬಾಯಿ ‘ಶಟರ್’ ಹಾಕಿ, ಲೋಕಪಾಲ್ ಮಸೂದೆಗೆ ಧರಣಿ ಕೂತಂತೆ ಕೂತಿತ್ತು! ಇದು ನನ್ನ ಮೌತಲ್ಸರೋಪಖ್ಯಾನದ ಅಲ್ಪ ಆರಂಭ!

ಮೊನ್ನೆ ಮೊನ್ನೆ ಅದಾರೋ ಫೇಸ್ಬುಕ್ ಆತ್ಮೀಯ ಮಿತ್ರರು ನನ್ನನ್ನು ‘ದೂರ್ವಾಸ’ ಮುನಿ ಎಂದು ನಾಮಕರಣ ಮಾಡಿದ ಮೇಲಂತೂ ನಾನು ಹೆಚ್ಚು ಕೆಂಪಾಗಿದ್ದೇನೆ ಅನಿಸಿತ್ತು, ಅದಕ್ಕನುರೂಪವೆಂಬಂತೆ ಈಗ ನಾಲಗೆ ಹೊರಹಾಕಿ ತಪ್ಪುತಪ್ಪಾಗಿ ಕನ್ನಡ ನುಡಿಯನು ಬರೆದು ಮೊಂಡಾಗಿಸಿದವರನು ಚೆಂಡಾಡಿ, ನುಂಗಿ, ನೀರು ಕುಡಿಯದೇ ಹಾಗೇ ಹೊರಚಾಚಿದರೆ ಹೇಗೆ ಕಾಣಬಹುದೋ ಹಾಗೇ ಹೊರಬೀಳುವ ರಕ್ತಸಿಕ್ತವಾದಂತ ಜಿಹ್ವೆ! ಅಮೇರಿಕಾ ರಕ್ಷಣಾ ಪಡೆಯವರು ಅದೆಲ್ಲೋ ಕ್ಷಿಪಣಿ ದಾಳಿ ಮಾಡಿದ ತರ ಅನ್ನುವುದಕ್ಕಿಂತಲೂ ಪರದೇಶದಲ್ಲಿ ನಮ್ಮ ಕ್ರಿಕೆಟಿಗರು ‘೦’ ಎಂಬ ರನ್ ಗಳಿಕೆ ಪಡೆದಾಗ ಕಾಣುವ ಸ್ಕೋರ್ ಬೋರ್ಡ್-ನಂತೆ ಅಲ್ಲಲ್ಲಿ ಒಂದಿಪ್ಪತ್ತೈದು ‘ತೂತು’ ಬಿದ್ದಿದ್ದವು ಸಾಲುಸಾಲಾಗಿ! ನೋವೂ ಅಷ್ಟೇ, ಆ ಶೂನ್ಯ ಗಳಿಸಿದವರಿಗಿಂತಲೂ, ಶೂನ್ಯವನು ಕಂಡು ಮರುಗುವ ಮನಸ್ಥಿತಿ ನನ್ನದು, ನಾಲಗೆಯದಲ್ಲ. ಅದಕ್ಕಿನ್ನೂ ಚಪಲ ಅಲ್ಲಿಲ್ಲಿ ಹೊರಳಾಡಬೇಕೆಂದು ಬಾಯೊಳಗೆ ನೀರೂರಿಸುತ!

ಚಪಲವೆಂದಾಗ ನೆನಪಾಯ್ತು, ಬೆಂದರೂ ಈ ನಾಲಗೆ ಸುಮ್ಮನಿರುತ್ತದೆಯೇ? ಹೇಮಂತದ ಚಳಿ ಬೇರೆ, ಕುರುಂಕುರುಂ ತಿಂಡಿ ಬೇಕೆಂದರೂ ತಿನ್ನುವುದು ಹೇಗೆ? ಮೌನದಲೇ ಒಂದು ಚಿಂತೆ! ಈ ಕಾಯಿಲೇಗೇನು ಮದ್ದು? ನಮ್ಮ ಮಿತ್ರ ಬಳಗದಲ್ಲೆಲ್ಲರೂ ‘ಸರ್ವರೋಗ ಚಿಕಿತ್ಸಕರು’ ಎನ್ನುವುದಂತೂ ದಿಟ! ಒಬ್ಬೊಬ್ಬರದು ಒಂದೊಂದು ಸಲಹೆ! ಆಯುರ್ವೇದಿಂದಾರಂಭಗೊಂಡು ಸೀಬೆ ಎಲೆ ಜಗಿತ, ಜೀರಿಗೆ ಕಷಾಯ, ದಾಳಿಂಬೆ ಸಿಪ್ಪೆ ಕಷಾಯ, ಎಳನೀರು, ಗುಲ್ಕಂದ್ ಸ್ವಾಹದಿಂದ ಹಿಡಿದು ಝೈಟೀ ಜೆಲ್, ಸ್ಮೈಲ್, ಬಿಕಾಂಪ್ಲೆಕ್ಸ್ ಕ್ಯಾಪ್ಸೂಲ್ಸ್-ಗಳ ತನಕ ಮದ್ದುಗಳನ್ನಿಡಲು ಒಂದು ಕಮರ್ಷಿಯಲ್ ಕಾಂಪ್ಲೆಕ್ಸೇ ಬೇಕಾದ ಪಟ್ಟಿ ಬೆಳೆದಿತ್ತು! ಇತ್ತಲಿಂದ ಗಸಗಸೆ ಪಾಯಸ, ರಾಗಿಗಂಜಿ, ಬಾರ್ಲೀ ನೀರು, ಒಣಕೊಬ್ಬರಿ ಜೊತೆ ಸಕ್ಕರೆ, ಕೊನೆಗೆ ಮಿತ್ರರೋರ್ವರು ‘ಬೀರುಕುಡಿಯಿರಿ ನೋವಮರೆಯಿರಿ’ ಎಂದು ‘ಸರ್ವರೋಗಕ್ಕೆ ಸಾರಾಯಿ ಮದ್ದು’ ಎಂದು ಪಠಿಸಿಯೇ ಬಿಟ್ಟರು! ಏನೇ ಅಗಲಿ ನೋವಿನಲೂ ಒಂದು ಸುಖ ಇದ್ದೇ ಇರುತ್ತದೆ ಅನ್ನುವುದಂತೂ ದಿಟ! ಸೀಬೆ ಎಲೆಯೋ, ಬಾರ್ಲೀ ನೀರೋ? ನೋವಿನಲೂ ಜಗಿಯುವ ಅಲಿಯಾಸ್ ನುಂಗುವ ಕ್ಷಣಕೆ ಬೀರಿನ ನೆನಪು, ಆಹಾ ಏನು ಸುಖ!

ಅಂತೂ ಮಾತನಾಡಲಾಗದ ಈ ಶುಭ ಸಂಜೆಯಲಿ ನಾಲಗೆಯ ನೋವ ನಾನಾಲಿಸುತಾ, ಸಿಹಿಸಿಹಿಯಾದ ಗಸಗಸೆಯ ಪಾಯಸವನ್ನು ಬಾಯಿಮುಚ್ಚಿಕೊಂಡು (ಅಂದರೆ ಹೆಂಡತಿಯೊಡನೆ ಏನೂ ಮಾತನಾಡದೇ) ಸವಿಯುತಾ ಅಲ್ಸರೋಪಖ್ಯಾನವನು ನಿಮ್ಮ ಮುಂದಿಡುತ್ತಿದ್ದೇನೆ.

ಸಿಹಿಯಾಗಿದ್ದರೆ ಸವಿಯಿರಿ. ನೋವಾದರೆ ಅದರೊಳಗೂ ಸುಖ ಪಡೆಯಿರಿ!