‘ಸಾಕ್ಷಿ’ ಕತೆಗಳು!

ಜಗತ್ತಿನ ಪ್ರತಿಯೊಂದನ್ನೂ ಪ್ರೀತಿಸಬೇಕು, ದ್ವೇಷ ನಿರ್ಮೂಲನೆ ಮಾಡಬೇಕು ಎಂದು ಪ್ರವಚನ ಮಾಡುತ್ತಿದ್ದ ಪ್ರವಾದಿಯೊಬ್ಬರು ಮೊನ್ನೆ ಬೆಂಗಳೂರು ನ್ಯಾಯಾಲಯದ ಅಂಗಳದಲ್ಲಿ ಸಿಕ್ಕಾಗ ‘ಮಠದ ಆಸ್ತಿ ವಿವಾದ’ದ ವಿವರಣೆ ಕೊಟ್ಟರು.

Advertisements

ಸೆಕೆಂಡ್ ‘ಹ್ಯಾಂಡ್’ ಕತೆಗಳು!

ರಾಜಕಾರಣಿಯೊಬ್ಬರ ಎರಡನೇ ಸಂಬಂಧದ ಬಗ್ಗೆ ವಿಸ್ತ್ರತ ಚರ್ಚೆ ನಡೆಸಿ ಆ ವಾಹಿನಿಯ ವಾರ್ತಾವಾಚಕರು ಮನೆ ತಲುಪಿದಾಗ ಅವರ ಹೆಂಡತಿಯರಿಬ್ಬರು ಜುಟ್ಟು ಎಳೆದಾಡುವುದರಲ್ಲಿ ತಲ್ಲೀನರಾಗಿದ್ದರು!

ಅರ್ಥ ಮಾಡಿಕೊಂಡವರ ಕತೆಗಳು!

ಈ ಕತೆಯ ಪ್ರಧಾನಪಾತ್ರ ಪಕ್ಕದ ಮನೆಯ ನಾಯಿ. ದಿನಾಲು ಸಂಜೆ ನಾನು ಕಚೇರಿಯಿಂದ ಮನೆ ತಲುಪುವಾಗೆಲ್ಲ ಕಾದು ಕೂತು ನನ್ನೊಡನೆ ನನ್ನ ಮನೆ ಬಾಗಿಲಿನ ತನಕ ಬಂದು ಬಾಲವಲ್ಲಾಡಿಸುತ್ತ ನಿಲ್ಲುತಿತ್ತು. ನಾನೆಸೆಯುವ ಒಂದೆರಡು ಬಿಸ್ಕತ್ತುಗಳನ್ನು ಕೆಲವೊಮ್ಮೆ ತಿಂದು, ಕೆಲವು ಸಲ ತಿನ್ನದೆಯೇ ತೆರಳುತಿತ್ತು.

ಕಾಲ ಉರುಳಿದೆ! ಅದು ನಿಲ್ಲುವುದಿಲ್ಲ ಯಾರೂ ಬಾಲ ಅಲ್ಲಾಡಿಸದಿದ್ದರೂ, ಯಾರೂ ಬಿಸ್ಕತ್ತೆಸೆಯದಿದ್ದರೂ!

ಈಗೆಲ್ಲ ಮೊದಲಿನಂತೆ ಬಿಸ್ಕತ್ತು ಖಾಲಿಯಾಗುತ್ತಿಲ್ಲ. ಬಾಲವಲ್ಲಾಡಿಸುತ್ತ ನಾಯಿಯೂ ನಿಲ್ಲುವುದಿಲ್ಲ. 

ನನಗೂ ಬೇಸರವಿಲ್ಲ! ದುಃಖವೂ ಇಲ್ಲ.
ಆ ನಾಯಿಯ ಬಗೆಗಿನ ಪ್ರೀತಿ ಇನ್ನಷ್ಟು ಹೆಚ್ಚಿದೆ. 

ಕಾರಣವಿಷ್ಟೆ, ಹಸಿವಾದಾಗ ಮಾತ್ರ ಆ ನಾಯಿ ಮನೆ ಬಾಗಿಲಿಗೆ ಬರುತ್ತದೆ ಈಗೀಗ!

ಅವರಿವರು ‘ಹರಿವ’ ಕತೆಗಳು!

ಅವರೊಬ್ಬ ಪ್ರಖ್ಯಾತ ಬರಹಗಾರ. 
ಬರೆಯುತ್ತಲೇ ಇರುತ್ತಾರೆ. 
ಆದರೆ ಕೈಹಿಡಿದವಳ ಕೈಯಲ್ಲಿ ಅವರ ಕವಿತೆಗಳೆಲ್ಲ ಚಿಂದಿಯಾಗುತ್ತವೆ!

ಮರುದಿವಸ ಹರಿದ ಚೂರುಗಳನ್ನೆಲ್ಲ ಹಿಡಿದು ‘ಅವಳ’ ಮನೆಗೆ ಹೋಗುತ್ತಾರಂತೆ,
ಒಂದುಗೂಡುತ್ತವಂತೆ, 

ಮತ್ತೆ ಭಾವಗಳೆಲ್ಲವೂ…

ಚಿಂದಿಯಾಗುತ್ತಾರೆ ಮರಳಿ ಮನೆಗೆ ಬಂದು!

ಖಾಲಿ ಆದ ಕತೆ!

ಕಾರು ನಿಂತಿತು.
ಆ ಕಾಡುದಾರಿಯ ಮಧ್ಯೆಯೂ ದೂರದ ಪೆಟ್ರೋಲ್ ಬಂಕಿನ ಬೋರ್ಡೊಂದು ಮಿನು ಗುವುದು ಕಾಣುತಿತ್ತು.
ಕಾರಿನೊಳಗಿದ್ದ ಬಾಟಲೂ ನೀರಿಲ್ಲದೇ ಒಣಗಿತ್ತು!

ಏನೋ ನೋವು…
ಸ್ಟಿಯರಿಂಗಿಗೆ ತಲೆಯಾನಿಸಿ ಮಲಗಿದನವ…

ಮತ್ತೆ ಏಳಲೇ ಇಲ್ಲ!

ಭವಿಷ್ಯದ ಕತೆಗಳು!

ಆ ಹುಡುಗ ರಸ್ತೆಯಲಿ ಹೋಗುತ್ತಿದ್ದ ಕಾರುಗಳ ಗಾಜುಗಳನ್ನು ಬಡಿಯುತ್ತಿದ್ದ!

ಆ ರಸ್ತೆಯ ಪಕ್ಕದ ಮುರುಕು ಮನೆಯೊಂದರೊಳಗೆ ಆ ಹುಡುಗನ ಅಪ್ಪ ಅದ್ಯಾರದ್ದೊ ಭವಿಷ್ಯ ಹೇಳುತ್ತಿದ್ದ!