ವಿಜ್ಞಾನ!

ಮುಂದೇನು ಅನ್ನುವುದನ್ನು ವಿಜ್ಞಾನ ಕೆಲವೊಮ್ಮೆ ನಮಗೆ ಬಹಳ ಮುಂಚಿತವಾಗಿ ತಿಳಿಸಿಕೊಡುತ್ತದಾದರೂ, ಮುಂದಾಗಬಹುದಾದ ಅನಾಹುತಗಳನ್ನು ಇಂದೇ ತಿಳಿಸಿ ಇಂದು-ನಾಳೆಯ ಅಂದಚೆಂದದ ಮಂದಹಾಸವನ್ನು ಮಣ್ಣುಪಾಲಾಗಿಸಬಹುದು.

—–>
ಚೌ…

ಅಭಿಮಾನ!

ಹುಟ್ಟಿದ ಊರಿನ ಮೇಲಿರುವ ಅಭಿಮಾನಕ್ಕೂ ದೇಶದ ಬಗೆಗಿರುವ ಅಭಿಮಾನಕ್ಕೂ ಹೆಚ್ಚು ವ್ಯತ್ಯಾಸವಿಲ್ಲ.ಯಾವ ಪರಿಸ್ಥಿತಿಯಲ್ಲಿದ್ದರೂ ಎಂದಿಗೂ ಓಡಿಹೋಗುವ ಮನಸು ಬರುವುದಿಲ್ಲ.
ಉದರನಿಮಿತ್ತ ಇತರೇ ಊರುಗಳನ್ನು ಅವಲಂಬಿಸಬೇಕಾದದ್ದು ಅನಿವಾರ್ಯತೆ.

ಹೂವು!

ಹೂದೋಟದಲ್ಲಿ ಅರಳುವ ಎಲ್ಲ ಹೂವುಗಳನ್ನು ಕಣ್ಣಿನಲ್ಲಿ ತುಂಬಿಸಿಕೊಳ್ಳಲಾಗದು. ಮನಸೂರೆಗೊಂಡ ಒಂದೋ ಎರಡೋ ಸಂಜೆ ಮಲಗುವಾಗ ಮತ್ತೆ ಮತ್ತೆ ಕಾಡುತ್ತವೆ.

—> ಹೂವ-ರಸ!

ಉರಿ!

ಉರಿಯು ಜಾಸ್ತಿಯಾದಾಗ ಕರಿಯ ಕಾವಲಿಯೂ ಕೆಲವೊಮ್ಮೆ ತೊಳೆಯುವಾಗಲೂ ಕಳೆಯದ ಕೊಳೆಯನ್ನು ಕಳಚಿಕೊಳ್ಳಬಹುದು.

ಹಾಗಾಗಿ, ಉರಿ ಒಳ್ಳೆಯದೇ. ಎಲ್ಲ ಸಲವೂ ಅಲ್ಲ, ಕೆಲವೊಮ್ಮೆ.

—-> ಚೌ….

ಸ್ನಾನ!

ನಿನ್ನೆ ನಡೆದ ರಸ್ತೆಯೇ ಇರಬಹುದು ಇಂದು ಕೂಡ. ಆದರೆ ಮೆತ್ತಿಕೊಳ್ಳುವ ಧೂಳು ನಿನ್ನೆಯ ತೆರನಾದದ್ದೇ ಎಂಬುದನ್ನು ಖಚಿತವಾಗಿ ಹೇಳಲಾಗದು.

ದೈನಂದಿನ ‘ಸ್ನಾನ’ ಮುಕ್ತಿಯ ಸಾಧನ!

—>ಚೌ…