ನಡೆಯಂತಿರಲಿ ನುಡಿಯು, ನುಡಿದಂತಿರಲಿ ನಡೆಯು!

ನುಡಿದರೆ ಮುತ್ತಿನ ಹಾರದಂತಿರಬೇಕು, ಮಾಣಿಕ್ಯದ ದೀಪ್ತಿಯಂತಿರಬೇಕು, ಸ್ಫಟಿಕದ ಸಲಾಕೆಯಂತಿರಬೇಕು, ಲಿಂಗಮೆಚ್ಚಿ ಅಹುದಹುದೆನಬೇಕು ಎಂದು ಬಸವಣ್ಣನವರು ಅಂದು ಹೇಳಿದ್ದನ್ನು ನಾವು ಅಳವಡಿಸಿಕೊಂಡಿದ್ದೇವೆಯೇ ಎನ್ನುವ ಪ್ರಶ್ನೆಯೊಂದು ಎದುರಾಗಿದ್ದು ಇತ್ತೀಚಿನ ಹತ್ತು ಹಲವು ಬರಹಗಳನ್ನು ಓದಿದಾಗ ಮತ್ತು ಕೆಲವು ಬರಹಗಾರರ ನಡೆಗಳನ್ನು ಗಮನಿಸಿದಾಗ. ನುಡಿ ಎಂದರೆ ಅದು ಕೇವಲ ನಾಲಗೆಯನ್ನು ಬಳಸಿಕೊಂಡು ಬಾಯಿಯ ಮೂಲಕ ಹೊರಹಾಕುವ ಶಬ್ದಕ್ಕೆ ಮಾತ್ರ ಸೀಮಿತಗೊಳಿಸದೆ, ಬರಹಗಾರರೆಂಬ ಪಟ್ಟಗಿಟ್ಟಿಸಿಕೊಳ್ಳಲು ಕಾತುರರಾಗಿರುವ ನಾವು, ನಮ್ಮ ಬರಹಗಳಲ್ಲೂ ಮೂಡಿಬರುವ ಅಕ್ಷರಗಳೂ ಕೂಡ ನುಡಿಗಳು ಎಂಬುದನ್ನು ಮನವರಿಕೆ ಮಾಡಿಕೊಂಡಿಲ್ಲ ಎಂದರೆ ತಪ್ಪಾಗಲಾರದೇನೋ. ಹೌದು, ನಿಜವಾಗಿ ಹೇಳಬೇಕೆಂದರೆ ಬರಹಗಾರನ ಬರಹವು ಒಂದು ದಿಕ್ಕಾಗಿ, ಬದುಕು ಇನ್ನೊಂದು ದಿಕ್ಕಾಗಿ ಒಂದಕ್ಕೊಂದು ಸಾಮ್ಯವಿಲ್ಲದೆ, ನಾಣ್ಯದ ಎರಡು ಮುಖಗಳಿದ್ದಂತೆ ಒಂದನ್ನೊಂದು ಸಂದರ್ಶಿಸುವುದೇ ಇಲ್ಲದಂತಾಗಿದೆ. 

ಹಾಗಂತ ಎಲ್ಲರ ಬರಹಗಳೂ ಮೇಲಿನ ಪ್ರವರ್ಗದಲ್ಲಿವೆ ಎಂಬುದಾಗಿ ಹೇಳುತ್ತಿಲ್ಲ. ಅಥವಾ ಎಲ್ಲಾ ಬರಹಗಳೂ ಅದೇ ನಿಟ್ಟಿನಲ್ಲಿವೆ ಎಂಬ ವಾದವಲ್ಲ. ಕೆಲವೊಮ್ಮೆ ಬರಹದ ಮೂಲಕ ಕಾಲ್ಪನಿಕ ಸನ್ನಿವೇಶಗಳನ್ನು ಕೂಡ ಚಿತ್ರಿಸಬೇಕಾಗಿ ಬರುವುದರಿಂದ ಆ ಕಲ್ಪನೆಗಳನ್ನೇ ಬದುಕಿನಲ್ಲಿ ಅಳವಡಿಸಿಕೊಳ್ಳುವುದು ಅಸಾಧ್ಯ. ಅವು ಕಲ್ಪನೆಗಷ್ಟೇ ಸೀಮಿತ. ಆದರೆ ಇಂತಹ ಕಲ್ಪನೆಗಳನ್ನು ಓದಿದ ತಕ್ಷಣ ಇವು ವಾಸ್ತವದಿಂದ ದೂರವಿರುವುದನ್ನು ಮನಗಾಣಬಹುದು. ಈ ರೀತಿಯ ಭ್ರಮಾಲೋಕದ ಭಾವಗಳನ್ನು ಹೊರತುಪಡಿಸಿ ನುಡಿಯುವುದಾದರೆ, ಬರಹಗಾರನೊಬ್ಬ ಸಮಾಜವನ್ನು ತಿದ್ದುವ ಸಲುವಾಗಿ, ಪದೇ ಪದೇ ಸಮಾಜಕ್ಕೆ ಹಿತನುಡಿಯನ್ನು ಸಾರುವ ಅಂಶಗಳನ್ನೋ, ಉಪದೇಶಗಳನ್ನೋ, ತತ್ತ್ವಗಳನ್ನೋ ತನ್ನ ಬರಹದ ಮೂಲಕ ವ್ಯಕ್ತಪಡಿಸುವ ಮೊದಲು ಅಂತಹ ತತ್ತ್ವ, ಅಥವಾ ಸಾರ ತನ್ನೊಳಗೆಷ್ಟಿದೆ, ತಾನು ಎಷ್ಟರ ಮಟ್ಟಿಗೆ ಅವುಗಳನ್ನು ಪರಿಪಾಲಿಸುತ್ತೇನೆ ಎನ್ನುವುದು ಗಣನೀಯ ಪಾತ್ರವಹಿಸುತ್ತದೆ. 

ನಡೆದಂತೆ ನುಡಿವ, ನುಡಿದಂತೆ ನಡೆವ ವಿಷಯವನ್ನೆತ್ತಿಕೊಂಡಾಗ “ಶಂಖದಿಂದ ಬಂದರಷ್ಟೇ ತೀರ್ಥ” ಅನ್ನುವ ಮಾತು ನೆನಪಾಗುತ್ತದೆ. ಹೊರಪ್ರಪಂಚಕ್ಕೆ “ಶಂಖ” ಸುಂದರವಾಗಿ ಕಂಡರೂ, ಅದರೊಳಗೆ ತುಂಬಿರುವ ತೀರ್ಥ ಶುದ್ಧವಾಗಿದ್ದರೂ, ಶಂಖ ಶುಚಿಯಾಗಿರದಿದ್ದರೆ ಬರುವ ತೀರ್ಥವೂ ದುರ್ಗಂಧವೇ ತಾನೇ? ಆ ತೀರ್ಥ ಶುಚಿಯಾಗಿ ಇನ್ನೊಬ್ಬರ ಅಂಗೈ ಸೇರಿ ಪ್ರಸಾದ ರೂಪದಲ್ಲಿ ಸೇವನೆಗೆ ಕೊಡಬೇಕೆಂದರೆ ಮೊದಲು ಶುಚಿಯಾಗಿರಬೇಕಾದದ್ದು ಶಂಖ. ದಾನ ಧರ್ಮದ ಬಗೆಗೋ, ಮಾನವೀಯತೆಯ ಬಗೆಗೋ ತನ್ನ ಬರಹಗಳಲ್ಲಿ ಅರುಹಿ, ತನ್ನಲ್ಲಿರುವ ಅಪಾರ ಸಂಪತ್ತಿನಲ್ಲಿನ ಒಂದು ರೂಪಾಯಿಯನ್ನಾದರೂ ತನ್ನ ಜೀವಮಾನದಲ್ಲಿ ನೊಂದವರಿಗೆ/ಬಡಬಗ್ಗರಿಗೆ ಕೊಡಲು ಹಿಂಜರಿವವರ ಬರಹಗಳೆಲ್ಲವೂ ಯಾವ ಸಾರ್ಥಕ್ಯವನ್ನು ಪಡೆಯಬಹುದು? ತಾನು ಯಾರಿಗೂ ಕಾಣದಂತೆ ಒಳಗಿಂದೊಳಗೆ ಒಂದು ರೂಪದಲ್ಲಿದ್ದು, ಹೊರಜಗತ್ತಿಗೆ ‘ಬುದ್ಧ’ನಾಗಿ ತೋರ್ಪಡಿಸಿಕೊಳ್ಳುವ ಚಪಲವಿದ್ದರೆ ಅದು ಸಾಸಿವೆಕಾಳಿನಷ್ಟು ಗಾತ್ರದ ಮೌಲ್ಯವನ್ನೂ ಕೊಡಮಾಡದು. ಆ ಬರಹವು ಸತ್ವದಲ್ಲಿ, ತತ್ತ್ವದಲ್ಲಿ ‘ಶೂನ್ಯ’ ಸಂಪಾದನೆಯಾದೀತೇ ಹೊರತು ‘ಮೇರು’ ಎನಿಸಲಾರದು.

ಹಾಗಾಗಿ ಬರಹಗಾರ ತಾನು ಸಮಾಜದ ಸುಧಾರಣೆಗಾಗಿ, ಸಾಮಾಜಿಕ ಸನ್ನಿವೇಶಗಳ ಗೊಂದಲಗಳನ್ನೋ ಅಥವಾ ಸಮಾಜದ ದುರ್ನಡತೆಯನ್ನೋ ತಿದ್ದಬೇಕೆನ್ನುವ ಮನಸ್ಥಿತಿಯಲ್ಲಿ ಬರಹದ ಮೂಲಕ ತಾನು ವ್ಯಕ್ತಪಡಿಸುವ ‘ಉಕ್ತಿಗಳು’ ವಸ್ತುನಿಷ್ಠ ಹಾಗೂ ಯಾವುದೇ ಒಳಕಶ್ಮಲಗಳಿಲ್ಲದೇ ಸಜ್ಜನಿಕೆಯಿಂದ ಅರುಹಿದಂತವು ಎನ್ನುವ ಅಂಶವನ್ನು ರುಜುವಾತು ಪಡಿಸುವುದಾದಲ್ಲಿ ಅಂತಹ ಉಕ್ತಿಗಳು ‘ಮುತ್ತಿನ ಹಾರವೋ, ಮಾಣಿಕ್ಯದ ದೀಪ್ತಿಯೋ ಆದೀತು. ಸ್ಪಷ್ಟತೆಯನ್ನೂ ಹೊಂದಿ, ಸ್ಪಟಿಕದ ಸಲಾಕೆಯಂಥ ಗಾಂಭೀರ್ಯವನ್ನೂ ಹೊಂದೀತು. 

ಒಟ್ಟಿನಲ್ಲಿ ನಡೆಯೊಂದು, ನುಡಿಯುವುದಿನ್ನೊಂದಾಗದೆ, ಎರಡರ ನಡುವೆ ಸಾಮರಸ್ಯವಿದ್ದರೆ ಸಾರವಿದ್ದೀತು ಸಕಲ ಬರಹದೊಳಗೂ!

Advertisements

ಬರಹವೆಂಬ ನುಡಿತೋರಣಕೆ ‘ಶೀರ್ಷಿಕೆ ‘ಎಂಬ ಚಿತ್ತಾಕರ್ಷಕ ನಾಮದ ಬಲವೊಂದಿದ್ದರೆ ಸಾಕೇ?

ಇತ್ತೀಚೆಗೆ ಅಂತರ್ಜಾಲ ತಾಣದಲ್ಲಿಯೋ ಅಥವಾ ನಮ್ಮ ಇತರೇ ಮಾಧ್ಯಮಗಳಲ್ಲಿಯೋ ಕಂಡುಬರುತ್ತಿರುವ ಒಂದು ಸೂಕ್ಷ್ಮವನ್ನು ನಾವೆಲ್ಲರೂ ಗಮನಿಸಿರಬಹುದೆಂದಾದರೆ ಅದು ಶೀರ್ಷಿಕೆ. ಯಾವುದೇ ಸುದ್ದಿ ಅಥವಾ ಬರಹಗಾರನೊಬ್ಬನ ರಚನೆಗೆ ಅವರು ಕೊಡುವ ಶೀರ್ಷಿಕೆ ಹೆಚ್ಚು ಮಹತ್ವ ಪಡೆಯುತ್ತಿದೆಯೇನೋ ಎಂದನಿಸುತ್ತಿರಬಹುದು. ಶೀರ್ಷಿಕೆಗೆ ಇರುವ ಮಹತ್ವವನ್ನು ಅಲ್ಲಗಳೆಯದೇ ಮಾತು ಮುಂದುವರಿಸುವುದಾದಲ್ಲಿ, ಒಂದು ಸುದ್ದಿ ಇಲ್ಲವೇ ಬರಹದ ಆಕರ್ಷಣೆಯ ‘ಮುಂಡಾಸು’ ಅಥವಾ ಕಿರೀಟಪ್ರಾಯವೆಂದರೆ ಅದರ ತಲೆಬರಹ ಅಥವಾ ಶೀರ್ಷಿಕೆ ಯಾನೆ ಶಿರೋನಾಮೆ! ಆದರೆ ಅದು ಆದರ್ಶಪ್ರಾಯವೂ ಆಗಿರಲೇಬೇಕಾದುದು ಅನಿವಾರ್ಯವೂ ಕೂಡ. ಇಲ್ಲವೆಂದಾದಲ್ಲಿ ಕಟ್ಟಿದ ಆ ಮುಂಡಾಸಿನ ಮೌಲ್ಯ, ಬರಹದ ದೇಹಕ್ಕೆ ಒಪ್ಪಿತವಾಗದೆ ಆಭಾಸವಾದೀತು!

ಹಾಗಾದರೆ ಶೀರ್ಷಿಕೆ ಯಾವ ರೀತಿಯಲ್ಲಿರಬೇಕು ಎನ್ನುವ ಕಟ್ಟುಪಾಡೇನಾದರೂ ಇದೆಯೇ ಎಂಬ ಪ್ರಶ್ನೆಗಂತೂ ಉತ್ತರವಿಲ್ಲ. ಸುದ್ದಿಲೋಕವನ್ನು ಈ ನಿಟ್ಟಿನಲ್ಲಿ ಹೊರಗಿಟ್ಟು, ಕೇವಲ ಬರಹಲೋಕಕ್ಕೆ ಸೀಮಿತಗೊಳಿಸಿಕೊಂಡು ಮುಂದಿನ ಮಾತುಗಳನ್ನು ಆಡುವುದಾದರೆ, ಒಂದು ಲೇಖನ ಅಥವಾ ಬರಹದ ಒಳಗಿನ ಪ್ರಸ್ತಾಪ, ವಿಚಾರ, ಚಿಂತನೆಗಳಿಗೆ ಪ್ರತಿಬಿಂಬವಾಗಿ ನಿಲ್ಲಬೇಕಾಗುತ್ತದೆ ತಲೆಬರಹ. ಹನಿಯೋ, ಕವನವೋ, ಕವಿತೆಯೋ, ಕಾವ್ಯವೋ, ಪದ್ಯವೋ, ಹಾಸ್ಯವೋ, ಕಥೆಯೋ, ಗದ್ಯವೋ, ಲೇಖನವೋ, ಕಾದಂಬರಿಯೋ ಒಟ್ಟಿನಲ್ಲಿ ಎಲ್ಲ ಪ್ರಕಾರಗಳೂ ಕೂಡ, ಗುರುತಿಸಿಕೊಳ್ಳುವುದು ತಮ್ಮ ತಲೆಬರಹ, ಶೀರ್ಷಿಕೆಗಳಿಂದ! ಓದುಗ ಪ್ರಪಂಚದ ಮನದಾಳದಲ್ಲಿ ಯಾವುದೇ ಬರಹ/ಪುಸ್ತಕದ ನೆನಪನ್ನು ಅಚ್ಚಳಿಯದಂತೆ ಉಳಿಸುವುದೂ ನಮ್ಮ ನಿಮ್ಮೆಲ್ಲರಿಗಿರುವ ನಾಮದ ಬಲದಂತೆ ಅದರ ಶೀರ್ಷಿಕೆ.

ಮೇಲಿನ ಮಾತನ್ನು ಎತ್ತಿಹಿಡಿಯುತ್ತಾ ಬರಹಕೆ ಮೇರು ‘ತಲೆಬರಹ’ ಎನ್ನಬಹುದಾದರೂ; ತನ್ನ ಅತೀವ ಪ್ರಭಾವದಿಂದ ಕೆಲವೊಮ್ಮೆ ಬರಹಗಳೊಳಗಿನ ಅಂಶಗಳಿಗಿಂತಲೂ ಹೆಚ್ಚಿನ ಚಿಂತನೆಗೆ, ಒಳತೋಟಿಗೆ ಗ್ರಾಸವಾಗಿ, ಹಲವಾರೂ ಬಾರಿ ಚರ್ಚೆಗೂ, ವಾದ ವಾಗ್ವಾದಗಳಿಗೂ ಅನುವು ಮಾಡಿಕೊಡುವ ಸನ್ನಿವೇಶಗಳನ್ನು ಸೃಷ್ಟಿಸುತ್ತಿದೆಯೆಂದರೆ ತಪ್ಪಾಗಲಾರದು. ಇದಕ್ಕಿಂತಲೂ ಮಿಗಿಲಾಗಿ ಇಕ್ಕಟ್ಟು. ಮುಜುಗರ ಇಲ್ಲವೇ ಬೇಸರ ತರಿಸುವಂಥ ಇನ್ನೊಂದು ಅಂಶವೆಂದರೆ ಶೀರ್ಷಿಕೆ ಹಾಗೂ ಬರಹದ ನಡುವೆ ನಂಟು ಬೆಸೆಯದಿರುವುದು. 

ಪ್ರಸಕ್ತ ದಿನಗಳಲ್ಲಿ ಸರ್ವೇಸಾಮಾನ್ಯವಾದ ಒಂದು ಪ್ರವೃತ್ತಿ ಬೆಳೆದಿದೆ ಎಂದಾದರೆ ಅದು ಬಹು ಆಕರ್ಷಣೀಯವಾದ ಶೀರ್ಷಿಕೆಯೊಂದನ್ನು ಇಟ್ಟು ಎಲ್ಲರನ್ನೂ ಸೆಳೆಯಬಹುದೆಂಬ ಹುಸಿ ಜಾಯಮಾನ. ಬರಹದೊಳಗಿನ ಅಂಶಗಳಿಗೂ ಶಿರೋನಾಮೆಯ ಚೆಂದಕ್ಕೂ ಕುರಿಮಂದೆಯ ನಡುವೆ ಕೋಳಿಮರಿಯೊಂದನ್ನು ಬಿಟ್ಟಂತೆ ಆಗಿ, ಬರಹದ ಲೇಖಕ ಓದುಗನ ತೆಕ್ಕೆಯಲ್ಲಿ ಅಪಹಾಸ್ಯಕ್ಕೆ ಈಡಾಗುವುದು ಖಂಡಿತ. ಉದಾಹರಿಸುತ್ತಾ ಹೇಳುವುದಾದಲ್ಲಿ, ‘ನಾಗಾರಾಧನೆ ಮತ್ತು ತುಳುನಾಡು’ ಎಂಬ ಶೀರ್ಷಿಕೆಯೊಂದನು ಕೊಟ್ಟ ಲೇಖನವೊಂದರ ಒಳಗೆ “ಮೈಸೂರು ಪ್ರಾಂತ್ಯದಲ್ಲಿ ನಾಗರ ಪಂಚಮಿ”ಯನ್ನು ಹೇಗೆ ಆಚರಿಸುತ್ತಾರೆ ಎಂದು ಬರೆದರೆ, ಓದುಗನಾಗಿ ಯಾರೇ ಬಂದರೂ ಬಹುಶಃ ಬುಸುಗುಡುವ ಸಾಧ್ಯತೆಗಳೇ ಜಾಸ್ತಿ! ಅದಲ್ಲದೇ ಕುತೂಹಲದಿಂದ ಓದಲೂ ಬರುವವರಿಗೆ ನಿರಾಸೆಯೋ, ಅಥವಾ ನಾಗಾರಾಧನೆ ಮತ್ತು ತುಳುನಾಡನ್ನು ಅರಿಯದವನಿಗೆ ತಪ್ಪು ಮಾಹಿತಿ ಕೊಡುವ ತಪ್ಪೆಸಗಿದಂತಾಗುತ್ತದೆ ಬರಹಗಾರ. 

ಒಟ್ಟಿನಲ್ಲಿ, ಬರಹಗಾರ ತಾನು ಹೇಳಲಿಚ್ಚಿಸುವ ಮಾತುಗಳನ್ನು ಕ್ರೋಢೀಕರಿಸಿ, ಬರಹರೂಪಕ್ಕಿಳಿಸಿ ಅದಕ್ಕೊಂದು ಶಿರೋನಾಮೆ ಬಳಸಬೇಕೆನ್ನುವ ನಿರ್ಧಾರಕ್ಕೆ ಬಂದಾಗ ತನ್ನ ಬರಹದ ‘ದನಿ’ಯಾಗಿ ಅದನ್ನಾಯ್ದುಕೊಳ್ಳಬೇಕೇ ವಿನಃ, ಒಂದಕ್ಕೊಂದು ಸಂಬಂಧವಿಲ್ಲದ, ಅಜಗಜಾಂತರ ವ್ಯತ್ಯಾಸದ ಶೀರ್ಷಿಕೆಯ ಮೂಲಕವೇ ತನ್ನ ಬರಹಗಳಿಗೆ ಓದುಗ ಮಹಾಶಯನನ್ನು ಆಕರ್ಷಿಸುವ ಮನಸ್ಥಿತಿಗೆ ತಲುಪಬಾರದು. ಆ ದನಿಯೆನ್ನುವುದು ಓದುಗನ ಮನದಲ್ಲಿ ಅನುರಣನವಾಗುವಂತಿರಬೇಕು ಅನುದಿನವೂ, ಅನುಕ್ಷಣವೂ! 

ಹಾಗಾಗಿ ನಾಮದ ಬಲವೊಂದಿದ್ದರೆ ಸಾಕೇ? ಅನುಗುಣವಾದ ವಿಚಾರವೂ ಒಳಗಿರಬೇಕಲ್ಲವೇ?

ವಿಚಾರವಂತಿಕೆಯನ್ನು ರೂಢಿಸಿಕೊಳ್ಳುವಲ್ಲಿ ನಮ್ಮ ಚಿತ್ತವಿರಲಿ ಎನ್ನುತಾ…

ಪ್ರೀತಿಯಿಂದ,
ಪುಷ್ಪರಾಜ್ ಚೌಟ
ಬೆಂಗಳೂರು

ಓದಿನ ಸಾರ್ಥಕ್ಯವೂ, ಬರಹದ ಘಮವೂ!

ತಪ್ಪು ಮಾಡುವುದು ಮಾನವ ಸಹಜ ಗುಣ. ಎಲ್ಲರೂ ಒಂದಲ್ಲ ಒಂದು ರೀತಿಯಿಂದ ತಮ್ಮ ನಡೆಯಲ್ಲಿ ತಪ್ಪನ್ನು ಮಾಡಿಯೇ ಮಾಡಿರುತ್ತಾರೆ. ಹಾಗಂಥ, ಮಾಡಿದ ತಪ್ಪುಗಳನ್ನೇ ಪದೇ ಪದೇ ಮಾಡುವುದು ಮೂರ್ಖತನದ ಪರಮಾವಧಿಯಾಗುತ್ತದೆ. ಇದು ಕೇವಲ ಬಾಳಿನ ನಡೆಗಷ್ಟೇ ಸೀಮಿತವಲ್ಲ. ಮೇ ತಿಂಗಳ ಕನ್ನಡ ಬ್ಲಾಗ್ ಸಂಪಾದಕೀಯವನ್ನು ಬರೆಯಲು ಕೂತಾಗ, ಕಳೆದ ಒಂದು ತಿಂಗಳಿನಲ್ಲಿ ಈ ಫೇಸ್ಬುಕ್ ಬ್ಲಾಗಂಗಳದಲ್ಲಿ ಪ್ರಕಟವಾದ ಹತ್ತು ಹಲವು ರಚನೆಗಳನ್ನು ಓದಿದ ನಮಗೆ ಇದರ ಬಗ್ಗೆಯೇ ಒಂದು ಲೇಖನವನ್ನು ಬರೆಯಬಹುದಲ್ಲ ಎನ್ನುವ ಯೋಚನೆ ಬಾರದೇ ಇರಲಿಲ್ಲ. ಆದರೆ ನಾವು ಯಾರ ರಚನೆಯನ್ನೂ ವಿಮರ್ಶೆಯ ಕಟ್ಟುಪಾಡಿನೊಳಗೆ ಅಳವಡಿಸಿಕೊಂಡು ಬರೆಯುತ್ತಿಲ್ಲ. ದಿನನಿತ್ಯ ನಾವು ಬಳಸುವ ಭಾಷೆಯಲ್ಲಿ ಆಗುತ್ತಿರುವ, ಆಗುವ ತಪ್ಪುಗಳನ್ನು ನಾವೇ ತಿದ್ದಿಕೊಳ್ಳಬೇಕೆ ವಿನಃ , ಓದುಗರು ಅದನ್ನು ತಿದ್ದುಪಡಿ ಮಾಡುತ್ತಾರೆ ಎನ್ನುವ ದೃಷ್ಟಿಯಿಟ್ಟುಕೊಳ್ಳಬಾರದು. ಅದೇ ರೀತಿ ಓದುಗರು ಸೂಚಿಸುವ ತಪ್ಪುಗಳನ್ನು ಪರಿಶೀಲಿಸಿ, ನಮ್ಮ ಮುಂದಿನ ನಡೆಯಲ್ಲಿ, ಅಂದರೆ ನಮ್ಮ ರಚನೆಯಲ್ಲಿ ಈ ಹಿಂದೆ ಆದ ತಪ್ಪುಗಳೇ ಕಾಣಿಸಿಕೊಳ್ಳದಂತೆ ಎಚ್ಚರ ವಹಿಸುವುದು ಉತ್ತಮ ಬರಹಗಾರನ ನಡೆಯಾಗಬಹುದು. ಈ ನಿಟ್ಟಿನಲ್ಲಿ ನಮ್ಮ ಯೋಚನೆಯನ್ನು ಅಳವಡಿಸಿಕೊಳ್ಳಬೇಕಾದ ಆವಶ್ಯಕತೆ ಎದ್ದು ಕಾಣುತ್ತದೆ.

ಪದ ಪ್ರಯೋಗ, ಅಕ್ಷರ ಬಳಕೆ: ಇಲ್ಲಿನ ಹತ್ತು ಹಲವು ರಚನೆಗಳನ್ನೋದುವಾಗ ಗಮನಿಸಿರುವಂತೆ ಅಕ್ಷರ ಜೋಡಣೆ ಮತ್ತು ಪದಪ್ರಯೋಗಳಲ್ಲಿನ ವಿಪರೀತ ತಪ್ಪುಗಳು ರಚನೆಗಳಲ್ಲಿನ ಗಾಂಭೀರ್ಯವನ್ನು ಹದಗೆಡಿಸುವಷ್ಟರ ಮಟ್ಟಿಗಿರುತ್ತವೆ. ಈ ತಪ್ಪಿಗೆ ಕಾರಣವಾಗುವ ಅಂಶಗಳನ್ನು ಮೂಲವಾಗಿ ಪರೀಶೀಲಿಸುವ ಮನಸ್ಸು ಕೆಲವೊಮ್ಮೆ ಇರುತ್ತದೆಯಾದರೂ, ಎಲ್ಲಿ ಆ ಬರಹಗಾರ ತಪ್ಪು ಭಾವನೆ ತಳೆಯುತ್ತಾನೆ ಎನ್ನುವ ಭಯವೂ ಕೆಲವೊಮ್ಮೆ ಕಾಡುತ್ತದೆ. ಆದರೆ ಯುವಮಿತ್ರರೊಡನೆ ಹಲವು ಬಾರಿ ಈ ವಿಚಾರದಲ್ಲಿ ಸಂವಾದಕ್ಕಿಳಿದು ಪ್ರಶ್ನಿಸಿದಾಗ ಕಂಡುಬಂದ ಕಟುಸತ್ಯವೆಂದರೆ ತಾನು ಚಿಕ್ಕಂದಿನಿಂದ ಕಲಿತ ಭಾಷೆ ಮತ್ತು ಪದ ಪ್ರಯೋಗಗಳು. ತಾನು ಮಾಡುತ್ತಿರುವ ಆ ತಪ್ಪುಗಳನ್ನು ಯಾರೂ ಇಷ್ಟರತನಕ ಪ್ರಶ್ನಿಸಿಲ್ಲ, ತಾನದನ್ನು ಸರಿಯೆಂದೇ ಭಾವಿಸಿದ್ದೆ ಎನ್ನುವ ಅವರ ಮನಸ್ಸಿನಾಳದ ಉತ್ತರವೂ ದೊರೆಯುತ್ತದೆ ಕೆಲವೊಮ್ಮೆ. ಏನೇ ಇರಲಿ. ಆ ತಪ್ಪುಗಳನೊಪ್ಪಿ ತಮ್ಮ ಮುಂದಿನ ಬರಹಗಳಲ್ಲಿ ಸರಿಯಾದ ಪದಬಳಕೆಗೆ ಒತ್ತುನೀಡುತ್ತೇವೆ ಎನ್ನುವವರ ಸಂಖ್ಯೆ ಕಡಿಮೆಯಿದ್ದರೂ, ಕೆಲವರಾದರೂ ತಪ್ಪನೊಪ್ಪಿಕೊಳ್ಳುವ ಗುಣವನ್ನು ಮೆರೆಯುತ್ತಾರೆ ಅನ್ನುವುದೇ ಸಂತಸದ ವಿಚಾರ. ಇದು ಎಲ್ಲರೊಳಗೂ ಒಡಮೂಡಲಿ ಎನ್ನುವ ಆಶಯವೂ ನಮ್ಮದು.

ವಸ್ತು, ವಿಚಾರ: ಸಾಹಿತ್ಯ ಕ್ಷೇತ್ರದಲ್ಲಿ ಬಹಳ ಗಹನವಾದ ವಿಚಾರವೊಂದಿದೆ. ಅದು ಸೃಜನಾತ್ಮಕ ಸಾಹಿತ್ಯ. ಬರಹಗಾರನು ಸೃಜನಾತ್ಮಕ ಚಿಂತನೆಗಳತ್ತ ತನ್ನ ಬರಹದ ದಿಕ್ಕನ್ನು ಬದಲಿಸಿಕೊಂಡು ಸಾಗಿದರೆ ತನ್ನ ಬರಹಕ್ಕೆ ಬೇಕಾದ ವಸ್ತು, ವಿಷಯಗಳ ಕೊರತೆ ಬರದಿದ್ದೀತು. ನಮ್ಮ ಹೆಚ್ಚಿನ ಯುವ ಬರಹಗಾರರಿಗೆ ಅನಾಮತ್ತಾಗಿ ಸಿಗುವಂಥ ಒಂದೇ ಒಂದು ವಸ್ತುವೆಂದರೆ ಅದು ಪ್ರೇಮ ಅಥವಾ ಪ್ರೀತಿ. ತನ್ನ ಪ್ರತೀ ರಚನೆಯೂ ಒಂದೇ ಒಂದು ವಿಷಯದ ಸುತ್ತ ಗಿರಕಿ ಹೊಡೆಯುತ್ತಿದ್ದರೆ ಅಲ್ಲಿ ದಿನಗಳೆದಂತೆ ರಸಾನುಭವದ ಕೊರತೆ ಎದ್ದು ಕಾಣಬಹುದು. ಓದುಗನನ್ನು ಸೆಳೆಯದಿರಬಹುದು. ಆದರೆ ಒಂದೇ ವಿಷಯದ ಬಗ್ಗೆ ವೈವಿಧ್ಯಮಯ ರಚನೆ/ಬರಹಗಳನ್ನು ಬರೆದವರು ಇಲ್ಲವೆಂದೇನಿಲ್ಲ. ಪ್ರತಿ ರಚನೆಯಲ್ಲೂ ಭಿನ್ನ ಆಸ್ವಾದಗಳನ್ನೀಯುತ್ತಾ ಓದುಗರ ಮನವನ್ನೂ ತಣಿಸಿದವರಿದ್ದಾರೆ. ಒಂದು ಮಾತಂತೂ ನಿಜ; ‘ನೈಜವಲ್ಲದ ಅತಿಭಾವುಕ ಸನ್ನಿವೇಶವನ್ನು ಸೃಷ್ಟಿಸುವುದಕ್ಕಿಂತಲೂ ವೈಚಾರಿಕ ನೆಲೆಗಟ್ಟಿನಲ್ಲಿ ಬರವಣಿಗೆ ರೂಪುತಳೆದರೆ, ಆ ಬರಹ ಓದುಗನ ಮನದಾಳದಲ್ಲಿ ಧೀರ್ಘ ಕಾಲದವರೆಗೆ ಉಳಿಯುವುದರಲ್ಲಿ ಸಂಶಯವಿಲ್ಲ’.

ಪಂಗಡ, ವಿಂಗಡನೆ: ಕಲೆಯ ಅಭಿವ್ಯಕಿಗೆ ಕಲಾವಿದನ ಜೀವನನುಭವನೇ ಮೂಲದ್ರವ್ಯ ಎಂದಿದ್ದಾರೆ ಪೂರ್ಣಚಂದ್ರ ತೇಜಸ್ವಿ. ನಮ್ಮ ಅನುಭವಗಳನ್ನು ನಾವು ಒಂದು ಬರಹ, ಹನಿ, ಕವನ, ಕವಿತೆಯ ರೂಪದಲ್ಲಿ ಹಂಚಿಕೊಂಡರೆ, ಅದು ಜಗತ್ತಿನ ಅದಾವುದೋ ಮೂಲೆಯ ಓದುಗನ ತಲೆಯೊಳಗೆ ಒಂದು ವಿಶ್ಲೇಷಣೆಯನ್ನು ಹುಟ್ಟುಹಾಕಲಾರಂಭಿಸಬಹುದು. ಇದಕ್ಕೆ ಆ ಓದುಗನ ಮನಸ್ಸಿನಲ್ಲಿ ಸಂಯೋಜನೆಗೊಳ್ಳುವ ಸಂವಾದಿ ಮನೋಭಾವವೇ ಕಾರಣವಿರಬಹುದು. ಈ ಮನೋಭಾವ ಎನ್ನುವುದು ‘ಅದು ತನ್ನ ಪಂಗಡದವನು ಬರೆದ ರಚನೆ’ ಎನ್ನುವ ತಳಹದಿಯಲ್ಲಿ ಹುಟ್ಟುವುದಿಲ್ಲ. ಹಾಗೆ ಹುಟ್ಟಿದ್ದೇ ಆದಲ್ಲಿ ಅದು ‘ವಿಂಗಡಣೆ’ಯತ್ತ ಮುಖ ಮಾಡೀತೆ ಹೊರತು, ಸಂವಾದಶೀಲ ನೆಲೆಗಟ್ಟಿನಲ್ಲಿ ಇರಲಾರದು. ಈ ಪಂಗಡಗಳ ಸೃಷ್ಟಿಯೇ ಬಹುಶಃ ಸಾಹಿತ್ಯ ಲೋಕದಲ್ಲಿ ಪ್ರಸ್ತುತ ಹಲವಾರು ಗೊಂದಲಗಳಿಗೆ ಎಡೆಮಾಡಿಕೊಡುತ್ತಿರುವುದಂತೂ ಸತ್ಯ. ಹೀಗೆ ಮುಂದುವರಿದಲ್ಲಿ ನಾಯಿ ಸಾಕಿದವರು ಮಾತ್ರ ‘ಮಲೆಗಳಲ್ಲಿ ಮದುಮಗಳು’ ಕಾದಂಬರಿಯನ್ನು ಓದಬೇಕೆನ್ನುವ ಪಂಗಡ ಹುಟ್ಟಿಕೊಂಡರೂ ಆಶ್ಚರ್ಯವಿಲ್ಲವೆಂದಿದ್ದಾರೆ ತೇಜಸ್ವಿ. ಸಾಹಿತ್ಯವು ಸಂಸ್ಕೃತಿಯ ಅವಿಭಾಜ್ಯ ಅಂಗವಾಗಬೇಕೇ ಹೊರತು ಪಂಗಡಗಳಾಗಿ ವಿಂಗಡಣೆಗೊಂಡು ಸತ್ವ ಕಳೆದುಕೊಳ್ಳಬಾರದು.

ಓದು, ಬರೆ: ಇನ್ನು ನಮ್ಮ ಓದು. ಬರವಣಿಗೆ. ಎಲ್ಲದಕ್ಕೂ ಇಲ್ಲಿ ಅವಕಾಶವಿದೆಯೆಂದು ಎಲ್ಲವನ್ನೂ ಬರೆಯುವವರೇ ಜಾಸ್ತಿ. ಹೀಗಾದಲ್ಲಿ ಓದುವವರಾರು? ಬರಹವೆನ್ನುವುದು ಓದುಗನೆದೆ ತೆರೆಯುತ್ತದಾದರೂ ಎಲ್ಲ ಬರಹಗಳು ಆ ಕೆಲಸ ಮಾಡಲಾರವು. ಓದು ಮತ್ತು ಬರಹಕ್ಕೆ ಅದರದ್ದೇ ಆದ ಗುಣಮಟ್ಟಗಳು ಮುಖ್ಯವಾಗುತ್ತವೆ. ಬರಹಗಾರನಾದವನು ಓದುವ ಹವ್ಯಾಸವನು ಮೊದಲಾಗಿ ಬೆಳೆಸಿಕೊಳ್ಳಬೇಕು. ಓದುಗನಾದವನೂ ಕೇವಲ ಕಣ್ಣಾಡಿಸಿ ತಾನೆಲ್ಲವನೂ ಓದಿದ್ದೇನೆ ಅನ್ನುವ ಮನಸ್ಥಿತಿಗೂ ಬರಬಾರದು. ಅದಕ್ಕಿಂತಲೂ ಮಿಗಿಲಾಗಿ ಎಲ್ಲ ಬರಹಗಳನ್ನೂ, ಬರಹಗಾರರನ್ನೂ ಎಲ್ಲಾ ಸಂದರ್ಭಗಳಲ್ಲೂ, ಎಲ್ಲರನೂ ಮೆಚ್ಚಿಸುವ ಸಲುವಾಗಿ ಹೊಗಳಿಕೆಯ ಅತಿಶಯೋಕ್ತಿಗಳಲ್ಲೇ ಓದುಗನು ಮುಳುಗಿಸಬಾರದು. ಓದಿದ ಮೇಲೆ ತನ್ನ ಮನಸ್ಸಿನಾಳದಿಂದೆದ್ದ ಪ್ರಾಮಾಣಿಕ ಅನಿಸಿಕೆಗಳನ್ನು ದಿಟ್ಟತನದಿಂದ ಅರುಹಬೇಕು. ಹಾಗಾದಲ್ಲಿ ಮಾತ್ರ ಬರಹಗಾರನೂ, ಅವನ ಬರಹವೂ ಓದುಗನ ತೆಕ್ಕೆಯಲ್ಲಿ ಅರಳೀತು. ಘಮವನಿತ್ತೀತು. ಓದುಗನ ಓದಿನಲೂ ಸಾರ್ಥಕ್ಯವಿದ್ದೀತು.

ನಮ್ಮ ನಿಮ್ಮೆಲ್ಲರ ಪ್ರಯತ್ನವೂ ಸಾರ್ಥಕ್ಯದ ಸವಿಯನನುಭವಿಸುತ್ತಾ ಘಮವನರಳಿಸುವ ನಿಟ್ಟಿನಲ್ಲಿರಲಿ.

ಬನ್ನಿ ಜೊತೆಯಾಗೋಣ!

ಕನ್ನಡ ಬ್ಲಾಗ್ ಮಾರ್ಚ್ ತಿಂಗಳ ಸಂಪಾದಕೀಯ ಅನಿವಾರ್ಯವಾಗಿ ಕೊಂಚ ತಡವಾಗಿ ಪ್ರಕಟವಾಗುತ್ತಿದೆ. ಅತಿ ಬೇಸರದ ವಿಷಯವೊಂದನ್ನು ಮತ್ತೆ ನಾವು ಪ್ರಸ್ತಾಪಿಸಲೇ ಬೇಕಾದ ಸಂದರ್ಭ. ೨೦೧೦ರ ಸರಿ ಸುಮಾರಿನಲ್ಲಿ ಕನ್ನಡ ಬ್ಲಾಗ್ ಎಂಬ ಈ ಗುಂಪು ತನ್ನ ಮೊಗ್ಗರಳಿಸುತ್ತಿರುವಾಗ ಅದನ್ನು ಪೋಷಿಸಿ, ಬೆಳೆಸುವ ಮಹದಾಸೆ ಹೊತ್ತು, ನಿರ್ವಾಹಕರೆಲ್ಲರಿಗೆ ಬೆನ್ನೆಲುಬಾಗಿ ನಿಂತು, ಮನದಾಳದ ಅರುಹುಗಳ ಮೂಲಕ ಬರಹಗಾರರಿಗೆ ಮಾರ್ಗದರ್ಶನ, ಸ್ಪೂರ್ತಿಯಾದಂತವರು ರವಿ ಮೂರ್ನಾಡ್. ಅಗಲಿದ ಆ ಕನ್ನಡ ಕುವರರಿಗೆ ಕುಸುಮಾಂಜಲಿಯನ್ನು ಅರ್ಪಿಸುತ್ತಾ ಈ ಸಂಪಾದಕೀಯವನ್ನು ನಿಮ್ಮ ಮುಂದಿಡುತ್ತಿದ್ದೇವೆ. ಅವರು ಕನ್ನಡ ಬ್ಲಾಗ್ ಬಗ್ಗೆ ಹೊತ್ತ ಕನಸುಗಳನ್ನು ನನಸುಗೊಳಿಸುವ ನಿಟ್ಟಿನಲ್ಲಿ ನಮ್ಮ ಹೆಜ್ಜೆಗಳನ್ನಿಡುವ ಮುಖಾಂತರ ಆ ಚೇತನದ ಆತ್ಮಕ್ಕೆ ಶಾಂತಿ ಕೋರುತ್ತಿದ್ದೇವೆ.

ಅಂದು ಮಾರ್ಚ್ ಹದಿನೇಳು ಭಾನುವಾರ. ಕನ್ನಡದ ಭಗವದ್ಗೀತೆಯೆಂದೇ ಪ್ರಸಿದ್ಧವಾದ ‘ಮಂಕುತಿಮ್ಮನ ಕಗ್ಗ’ವನು ಸಾಹಿತ್ಯ ಲೋಕಕ್ಕಿತ್ತ ಧೀಮಂತ ದೇವನಹಳ್ಳಿ ವೆಂಕಟರಮಣಪ್ಪ ಗುಂಡಪ್ಪನವರ ೧೨೬ನೇ ಜನ್ಮದಿನಾಚರಣೆಯ ಸುದಿನ. ವರುಷದ ಹಿಂದೆ ಕಂಡ ಕನಸೊಂದು ನನಸಾಗಿ ನಿಂತು ಅಭೂತಪೂರ್ವ ಕ್ಷಣವೊಂದು ಸಾರ್ಥಕ್ಯವನ್ನು ಕಂಡದ್ದು ಬೆಂಗಳೂರಿನ ಚಾಮರಾಜಪೇಟೆಯಲ್ಲಿನ ಕನ್ನಡ ಸಾಹಿತ್ಯ ಪರಿಷತ್ತಿನಲ್ಲಿ. ತನ್ನ ಜೀವನದನುಭವಗಳನ್ನು ಡಿ.ವಿ.ಜಿ ಯವರ ಪ್ರತೀ ಮುಕ್ತಕಕ್ಕೂ ಅಳವಡಿಸಿಕೊಂಡು, ಆ ಮುಕ್ತಕಗಳ ವ್ಯಾಖ್ಯಾನ ಮಾಡಿ ನಮಗೆ ಉಣಬಡಿಸಿದವರು ಶ್ರೀಯುತ ರವಿ ತಿರುಮಲೈ. ಇದೇ ವ್ಯಾಖ್ಯಾನ ಇದೀಗ ಕಗ್ಗರಸಧಾರೆಯೆಂಬ ಮೊದಲ ಸಂಪುಟ.

ನಟರತ್ನಾಕರ ಮಾಸ್ಟರ್ ಹಿರಣ್ಣಯ್ಯ, ಸನ್ಮಾನ್ಯ ವಿಶುಕುಮಾರ್, ಚಂದ್ರಮೌಳಿ, ಸುಬ್ಬಕೃಷ್ಣ, ಪಿ ಎಸ್ ರಾಜ್ ಗೋಪಾಲ್, ಪ್ರೊ.ಎಚ್ ಎಸ್ ಲಕ್ಷ್ಮೀನಾರಾಯಣ ಭಟ್ ಇವರ ಉಪಸ್ತಿತಿಯ ಮೆರುಗಿತ್ತು ಈ ಕಾರ್ಯಕ್ರಮದಲ್ಲಿ. ಡಿ.ವಿ.ಜಿಯವರ ಜೀವನದ ಮೇಲೆ ಬೆಳಕು ಚೆಲ್ಲುವ ಕಿರುಚಿತ್ರದ ಮುಖೇನ ಗಮನಸೆಳೆದ ಈ ವಿನೂತನ ಕಾರ್ಯಕ್ರಮದ ಮುಖಾಂತರ ಕನ್ನಡ ಬ್ಲಾಗ್ ಫೇಸ್ಬುಕ್ ಪ್ರಪಂಚದಿಂದ ತನ್ನಡಿಯಿಟ್ಟದ್ದು ಹೊರಜಗತ್ತಿಗೆ.ಕಾರ್ಯಕ್ರಮದ ರೂವಾರಿಗಳ ಕಾರ್ಯದಕ್ಷತೆಗೆ ನಮ್ಮ ನಮನ ತನ್ಮೂಲಕ. ವೇದಿಕೆಯ ಮೇಲೆ ಉಪಸ್ಥಿತರಿದ್ದ ಅನುಭವಿಗಳ ಹಿತನುಡಿ ಕಾರ್ಯಕ್ರಮದಲ್ಲಿ ಪಾಲ್ಗೊಂಡ ಸಹೃದಯರನ್ನೂ ರೋಮಾಂಚನಗೊಳಿಸಿತ್ತು ಅನ್ನುವುದಕ್ಕೆ ಬಂದ ಮೆಚ್ಚುಗೆಗಳೇ ಸಾಕ್ಷಿಯೆಂದು ಕೊಳ್ಳುತ್ತೇವೆ.

ಏನೇ ಇರಲಿ, ಕಾರ್ಯಕ್ರಮವೊಂದು ಉತ್ತಮರೀತಿಯಲಿ ಸಂಘಟಿತವಾಗಬೇಕಾದರೆ ಅದರ ಹಿಂದೆ ಕಾರ್ಯನಿರ್ವಹಿಸುವ ನಿಸ್ವಾರ್ಥ ಮನಸುಗಳು ಪ್ರಮುಖ ಪಾತ್ರವಹಿಸುತ್ತವೆ. ಈ ನಿಟ್ಟಿನಲ್ಲಿ ಕ್ರಿಯಾಶೀಲವಾಗಿ ಅತ್ಯದ್ಭುತ ಕಾರ್ಯಕ್ರಮದ ರೂವಾರಿಯಾದವರು ಎಮ್. ಎಸ್ ಪ್ರಸಾದ್. ಅವರನ್ನು ಅಭಿನಂದಿಸದಿದ್ದರೆ ಬಹುಷಃ ನಮ್ಮೀ ಸಂಪಾದಕೀಯಕ್ಕೆ ಮೆರುಗು ಸಿಗಲಾರದು. ಪ್ರತಿಯೊಬ್ಬರ ಹೆಸರನ್ನೂ ಪ್ರಸ್ತುತ ಪ್ರಸ್ತಾಪಿಸಲಾಗದಿದ್ದರೂ, ಈ ಕಾರ್ಯಕ್ರಮದ ಯಶಸ್ಸಿಗೆ ಕಾರಣೀಭೂತರಾದ ಪ್ರತಿಯೋರ್ವರಿಗೂ ಕನ್ನಡ ಬ್ಲಾಗ್ ತಂಡ ಚಿರಋಣಿ.

ಹಾಗಂಥ ಈ ಕಾರ್ಯಕ್ರಮವನ್ನು ಕೇವಲ ಕಗ್ಗರಸಧಾರೆಯ ಮಟ್ಟಿಗೆ ಸೀಮಿತಗೊಳಿಸಲಾಗುತ್ತಿಲ್ಲ ಮಿತ್ರರೇ. ಕನ್ನಡ ಬ್ಲಾಗ್ ಕೇವಲ ಒಂದು ಗುಂಪಾಗದೇ, ಕೇವಲ ಸಾಹಿತ್ಯಕ್ಕಷ್ಟೇ ಮೀಸಲಾಗಿದೆಯೆಂದರೆ ಅದು ತಪ್ಪು, ಮುಂದಿನ ದಿನಗಳಲ್ಲಿ ಕಲೆ, ಸಂಸ್ಕೃತಿ, ಸಾಮಾಜಿಕ ಕಳಕಳಿಯನ್ನು ಹೊತ್ತು ತರುವ ಕಾರ್ಯಕ್ರಮಗಳ ಇಂಗಿತವನ್ನೂ ಹೊಂದಿದೆ. ತನ್ನ ಕಾರ್ಯಕ್ಷೇತ್ರದ ವ್ಯಾಪಿಯನ್ನು ವಿಸ್ತರಿಸುವ ನಿಟ್ಟಿನಲ್ಲಿ ಹಲವು ಸದಸ್ಯರಿಂದ ಬಂದ ಮನವಿ, ಪ್ರೋತ್ಸಾಹವನ್ನು ಸದ್ಯದಲ್ಲೇ ಕಾರ್ಯಗತಗೊಳಿಸುವ ಇರಾದೆಯೂ ಕೂಡ. ಇದು ಕೇವಲ ನಿರ್ವಾಹಕರು, ಕನ್ನಡ ಬ್ಲಾಗ್ ಸದಸ್ಯರಲ್ಲದೇ ಅನೇಕ ಸಹೃದಯರ ಸಲಹೆ, ಸೂಚನೆಯ ಮೇರೆಗೆ ಮುಂದುವರಿಯುತ್ತಿದ್ದೇವೆ. ಕನಸುಗಳನ್ನು ನನಸುಗೊಳಿಸುವ ದಿಟ್ಟ ಹೆಜ್ಜೆ ನಮ್ಮ-ನಿಮ್ಮೆಲ್ಲರದು.

ಆ ಕನಸುಗಳನ್ನು ನನಸುಗೊಳಿಸುವ ಪ್ರಪ್ರಥಮ ಹೆಜ್ಜೆಯಾಗಿ ಕಗ್ಗರಸಧಾರೆಯಂಥ ಕಾರ್ಯಕ್ರಮಗಳ ಆಯೋಜನೆ. ಪುಸ್ತಕ ಬಿಡುಗಡೆ, ಸಂಗೀತ ಕಾರ್ಯಕ್ರಮ, ಕಲೋಪಾಸನೆಯಂಥ ಕಾರ್ಯಕ್ರಮಗಳನ್ನು ಆಯೋಜನೆ ಮಾಡುವುದರ ಮುಖೇನ ನಮ್ಮ ತರುಣ ಹೃದಯಗಳನ್ನು ಸೆಳೆಯುವ ಪ್ರಯತ್ನ . ಎತ್ತೆತ್ತಲೋ ಸಾಗುತ್ತಿರುವ ನಮ್ಮ ಯುವ ಮನಸ್ಸುಗಳ ದಾರಿಯಲ್ಲಿ ಈ ಸೆಳೆತಗಳ ಮೂಲಕ ನಮ್ಮ ಕಲೆ, ಸಂಸ್ಕೃತಿಗೆ ಅಳಿಲು ಸೇವೆಗೈವ ತವಕ.

ಪ್ರಿಯ ಸದಸ್ಯರೇ, ಇದು ನಿಮ್ಮದೇ ಕಾರ್ಯಕ್ರಮ. ನಿಮ್ಮ ಕೃತಿಗಳ ಬಿಡುಗಡೆಗೂ ನಾವಿದ್ದೇವೆ. ನಿಮ್ಮೊಳಗಿನ ಕಲೆ,ಸಾಹಿತ್ಯ, ಸಂಗೀತದೊಲವಿಗೂ ನಾವು ಜೊತೆಗಿರುತ್ತೇವೆ. ನೀವು ನಾವಾಗುತ್ತೇವೆ. ನಿಮ್ಮ ಕಾರ್ಯಕ್ರಮ ನಮ್ಮದಾಗಲಿ. ನಮ್ಮ ನಿಮ್ಮೆಲ್ಲರದಾಗಲಿ. ಬನ್ನಿ ಕೈ ಜೋಡಿಸೋಣ. ಡಿ.ವಿ.ಜಿ, ಜೀಪಿ ರಾಜರತ್ನಂ, ಕುವೆಂಪು, ಬೇಂದ್ರೆ, ಪು.ತಿ.ನ, ಕೆ.ಎಸ್.ನ ಒಬ್ಬಿಬ್ಬರಲ್ಲ, ಎಲ್ಲರನೂ ಮತ್ತೆ ಕರೆತರೋಣ. ಅವರೊಳಗಿನ ತುಡಿತವನು ಮತ್ತೆ ಅರಿಯೋಣ ಬನ್ನಿ, ಮೆರೆಯೋಣ ಬನ್ನಿ.

ಅರುಹುಗಳ ಅರಿತು ಅರಗಿಸಿಕೊಂಡು ಬರೆಯೋಣ ಬನ್ನಿ!

ಕಾಲ ಬದಲಾಗಿದೆ ನಿಜ. ನವೋದಯ, ನವ್ಯ, ನವ್ಯೋತ್ತರ, ಪ್ರಗತಿಶೀಲ, ಬಂಡಾಯ ಹೀಗೆ ನಿನ್ನೆ ಮೊನ್ನೆ ಇದ್ದಂತೆ ಇಂದಿಲ್ಲ ಈ ಸಾಹಿತ್ಯ ಯುಗ. ನಾಳೆ ಮತ್ತೊಂದು ಹೊಸ ಪ್ರಕಾರಕ್ಕೂ ಅಡಿಗಲ್ಲಿಡಲೂಬಹುದು. ಕಾಲ ಬದಲಾದಂತೆ ಬದಲಾವಣೆಯ ಗಾಳಿ ಬೀಸುವುದು ಅನಿವಾರ್ಯ. ನಿಂತ ನೀರಲ್ಲ ಈ ಸಾಹಿತ್ಯಕೃಷಿ. ಹರಿವ ನದಿಯಂತೆ ಅನುದಿನವೂ ಹೊಸಹೊಸ ಹರಿವನ್ನು ಈ ಸಾಹಿತ್ಯಕಡಲಿನ ಒಡಲಿಗೆ ಹರಿಯಗೊಡುತ್ತಿದೆ ಎಂದರೆ ತಪ್ಪಾಗಲಾರದು. ಅದಕ್ಕೆ ಕಾರಣೀಭೂತರು ನಮ್ಮ ಬರಹಗಾರ ಬಳಗ. ಕಾಲ ಬದಲಾದಂತೆ ಪ್ರಾಯಃ ಬರಹಗಾರರಿಗೇನೂ ಕೊರತೆಯಾದಂತಿಲ್ಲ. ಬರಹವನ್ನೇ ವೃತ್ತಿ ಮಾಡಿಕೊಂಡವರು ಹಲವರಾದರೆ, ಇನ್ನೂ ಪ್ರವೃತ್ತಿಯಾಗಿ ಮಾಡಿಕೊಂಡವರದು ಮತ್ತೊಂದು ಬಳಗ. ಈ ಎರಡೂ ಪಂಗಡಗಳು ಬರಹಕ್ಷೇತ್ರಕ್ಕೆ ಅಪಾರವಾದ ಅಷ್ಟೇ ಅಪೂರ್ವವಾದ ಕೊಡುಗೆಗಳನ್ನಿತ್ತದ್ದು ದಿಟ.

ಈ ಉದಾರ ಕೊಡುಗೆಗಳ ಹಿಂದಿನ ಬೆಳಕು ಬರಹಗಾರರೆನ್ನುವುದು ನಿಜ. ಆದರೆ ಕೇವಲ ಬರಹಗಾರ ತನ್ನ ಕೊಡುಗೆಗಳನ್ನು ಕೊಟ್ಟು ಸುಮ್ಮನೇ ಕೂತರೆ ಅದು ಬೆಳಕಿಗೆ ಬರುವುದಾದರೂ ಹೇಗೆ? ತನ್ನ ಅಪೂರ್ವತನವನ್ನು, ಅದರೊಳಗಿನ ಸುಗಂಧವನ್ನು ಹೊರಸೂಸುವುದಾದರೂ ಹೇಗೆ? ಆ ಸುಗಂಧವನ್ನು ಹೀರಲು ಬರುವ ದುಂಬಿ ಓದುಗ ಮಹಾಶಯ. ಈ ಓದುಗ ಮಹಾಶಯರನ್ನು ಸೃಷ್ಟಿಸುವುದಾದರೂ ಹೇಗೆ?ಬರಹಗಾರ ತನ್ನ ಬರಹಗಳನ್ನು ಪ್ರಕಟಿಸುವಾಗ ಆ ಬರಹಕ್ಕೆ ಓದುಗರಿರುತ್ತಾರೆ ಎನ್ನುವ ಆಶಯವನಿಟ್ಟುಕೊಂಡೇ ಪ್ರಕಟಿಸುತ್ತಾನೆ. ಹೌದು. ಯಾವುದೇ ಬರಹಕ್ಕಾದರೂ ಓದುಗನಿರಲೇಬೇಕು. ಅವನಿಲ್ಲದಿದ್ದರೆ ಬರಹದ ಉದ್ದೇಶ ಸಾರ್ಥಕವಾಗದು. ಮೂಲಭೂತವಾಗಿ ಪ್ರತಿಯೊಬ್ಬ ಬರಹಗಾರನ ಮನದಲ್ಲಿ ಮೂಡಬಹುದಾದ ಪ್ರಶ್ನೆ “ಓದುಗನ ಸೃಷ್ಟಿ ಹೇಗೆ” ಅನ್ನುವುದು. ಈ ಅಂಶಕ್ಕೆ ಯಾವ ಲೇಖಕನೂ ಹೊರತಾಗಿರಲಾರ, ಅದಂತೂ ಸತ್ಯ. ಆದರೆ ಓದುಗ ಪ್ರಪಂಚದ ಸೃಷ್ಟಿ ಸಾಧ್ಯವೇ? ಹೇಗೆ ಎನ್ನುವ ಪ್ರಶ್ನಾರ್ಥಕ ಚಿಹ್ನೆಗೂ ಉತ್ತರವಿರದಿರದು. ಪ್ರತಿಯೊಬ್ಬ ಲೇಖಕನು ತನ್ನ ಬರಹಗಳ ಮೂಲಕ ಸೆಳೆದು ತನ್ನದೇ ಆದ ಓದುಗ ಪ್ರಪಂಚವನ್ನು ಸೃಷ್ಟಿಸಿಕೊಳ್ಳುವ ಕಾತರ ಹೊಂದಿರುತ್ತಾನೆ. ಬಹುಷಃ ಈ ಪ್ರಕ್ರಿಯೆಗೆ ಆತ ತನ್ನ ಬರಹಗಳನ್ನು ಮಾರಬೇಕಾದ ಸನ್ನಿವೇಶ ಬಂದರೂ ಅಚ್ಚರಿಯಿಲ್ಲ. ಇಲ್ಲಿ ಮಾರಾಟ ಪದವೆನ್ನುವುದು ಅದು ದುಡ್ಡಿಗೆ ಕೊಂಡುಕೊಳ್ಳು ಎಂಬರ್ಥದಲ್ಲಿ ಇಲ್ಲ. ಹೊಸಬರಹಗಾರನಾಗಿ ತಾನು ಅರಳುವ ಸಮಯದಲ್ಲಿ ಆತ ಬರಹದ ಘಮವನ್ನು ಬಿತ್ತಲೇ ಬೇಕಾಗುತ್ತದೆ. ತನ್ಮೂಲಕ ಬರಹಕ್ಕೆ ಓದುಗನನ್ನು ಎಳೆದು ತರಬೇಕಾದ. ಸಕಲ ಸಾಹಸವನ್ನು ಮಾಡಲೇಬೇಕಾಗುತ್ತದೆ. ಈಗಾಗಲೇ ಬರಹ-ಮಾರುಕಟ್ಟೆಯಲ್ಲಿ ನೆಲೆಯೂರಿರುವ ಅತಿರಥ ಮಹಾರಥರ ಎದುರಿಗೆ ತನ್ನ ಬರಹವನ್ನು ವಾಣಿಜ್ಯಕರಣಗೊಳಿಸಬೇಕಾದ ಸಂದರ್ಭವೂ ಎದುರಾದರೆ ಅದು ಅಚ್ಚರಿಯೇನಲ್ಲ.

ಮೇಲೆ ಉಲ್ಲೇಖಿಸಿದಂತೆ, ವಾಣಿಜ್ಯಕರಣಗೊಳಿಸುವ ಉದ್ದೇಶದಿಂದಲೇ ಬರಹಗಾರ ಸನ್ನದ್ಧನಾಗಿ ನಿಂತು ಪ್ರತಿಯೊಬ್ಬ ಓದುಗರನ್ನೂ ಆಕರ್ಷಿಸುವ ಆತುರಕ್ಕೊಳಗಾದರೆ ಕಷ್ಟ. ಮತ್ತದು ಸರಿಯೂ ಅಲ್ಲ. ಆಯಾಯ ಬರಹಕ್ಕೆ ಆಯಾಯ ಓದುಗರಿರುತ್ತಾರೆ ಎನ್ನುವ ಸತ್ಯ ಆರಿಯಬೇಕಾದದ್ದು ಬರೆಯುವವನ ಧರ್ಮ. ಒಬ್ಬರಿಗೊಂದು ರುಚಿಸಿದರೆ, ಇನ್ನೊಬ್ಬರಿಗೊಂದು. ಮಳೆಗಾಲದಲ್ಲಿ ಹಪ್ಪಳವೇ ಗತಿಯಾದರೆ, ಬೇಸಗೆಯಲ್ಲೂ ಅದನ್ನೇ ಮುಂದುವರಿಸುವ ಪರಿಪಾಠ ಓದುಗನದಲ್ಲ. ವೈವಿಧ್ಯಮಯವಿದ್ದರೆ ಬೆಲ್ಲಕ್ಕಿರುವೆ ಮುತ್ತಿದಂತೆ ಮುತ್ತುವುದು ಸಹಜವಾಗಬಹುದು. ಹಾಗಂಥ ಎಲ್ಲವನ್ನೂ ಸಿಹಿಯಾಗಿಯೇ ಬರೆಯಲೂ ಅಸಾಧ್ಯ. ಪ್ರಸ್ತುತ ಸನ್ನಿವೇಶ, ಸಾಮಾಜಿಕ ನಡವಳಿಕೆ, ರಾಜಕೀಯ ವಿದ್ಯಮಾನಗಳ ಸಮ್ಮಿಳನವಲ್ಲಿರಲೇಬೇಕು. ಕೆಲವೊಮ್ಮೆ ಕಹಿ ಎನಬಹುದಾದ ಖಡಕ್ ಚಹಾದಂತ ಒಗರುಗಳನ್ನೂ ಓದುಗನೆದೆಗೆ ಇಳಿಸುವಂಥ ಪ್ರಯತ್ನವನ್ನೂ ಮಾಡಲೇಬೇಕು. ಆದರೆ ಓದುಗನು ಎಲ್ಲಾ ಬರಹದೊಳಗೆ ಇಳಿಯಲೇಬೇಕೆನ್ನುವ ಹಕ್ಕೊತ್ತಾಯ ಸಲ್ಲ.

ಇನ್ನುಳಿದಂತೆ ಬರವಣಿಗೆಯ ಸಂಖ್ಯೆ, ಅಂಕಿಅಂಶಗಳು. ಲೇಖಕ ಜೋಗಿಯವರು ತನ್ನ ‘ಹಲಗೆ ಬಳಪ’ ಎನ್ನುವ ಹೊತ್ತಗೆಯಲ್ಲಿ ಒಂದು ಕಡೆ ಅತಿವೃಷ್ಟಿ ಸಾಹಿತ್ಯಕ್ಕೆ ಶತ್ರು ಎನ್ನುತ್ತಾರೆ. ಇದನ್ನು ಲೇಖಕರೆನಿಸಿಕೊಂಡವರೆಲ್ಲರೂ ಗಮನಿಸಲೇಬೇಕು. ಏನನ್ನಾದರೂ ಬರೆದೇ ತೀರುವೆ ಎನ್ನುವ ‘ಹಠಮಾರಿ’ ಧೋರಣೆಯಲ್ಲಿ ಬರೆವ ಸಾಲುಗಳು ಬಹುಶಃ ಹೆಚ್ಚಿನ ಓದುಗರನ್ನು ತಲುಪದಿರಬಹುದು. ದಿನಕ್ಕೆ ಹತ್ತು ಹಲವು ಬರೆವ ಬರವಣಿಗೆಗಾರ ತಾನು ಏನನ್ನು ಮೊದಲು ಹೇಳಹೊರಟಿದ್ದೇನೆ ಎನ್ನುವುದನ್ನು ಅರಿತುಕೊಳ್ಳುವುದು ಮುಖ್ಯವಾಗಬೇಕು. ನಿನ್ನೆ ಬಳಸಿದ ಪದ, ಅಕ್ಷರಗಳೇ ಇಂದಿನ ಬರಹದಲ್ಲೂ, ಅದರ ಭಾವವೇ ಇಂದಿನದರಲ್ಲೂ ಪದೇ ಪದೇ ಮರುಕಳಿಸಬಾರದು. ಬರೆದುದದನ್ನು ಮತ್ತೆ ಓದಿ. ಮಗದೊಮ್ಮೆ ಓದಿ, ಈ ಪ್ರಕ್ರಿಯೆ ಮರುಕಳಿಸಿ ಆ ಬರಹವೆನ್ನುವುದು ಕುಲುಮೆಯದ್ದಿದ ಲೋಹದ ಹೊಳಪಿನಂತನಿಸಿದರೆ ಓದುಗ ಮಹಾಶಯನ ತೆಕ್ಕೆಗೆ ಹರಿಯಬಿಡಬಹುದು. ಅದು ಮುಂಜಾವ ಚಿನ್ನವರ್ಣದ ರವಿರಶ್ಮಿಯಂತೆ ಕಂಗೊಳಿಸದರೆ ಸಾರ್ಥಕತೆ ಪಡೆಯಬಹುದು. ಆ ನಿಟ್ಟಿನಲ್ಲಿ ಬರಹಗಾರರು ತಮ್ಮ ಪ್ರಯತ್ನ ಮುಂದುವರಿಸಬೇಕಾದದ್ದು ಅನಿವಾರ್ಯ.

ಬನ್ನಿ ಒಂದಷ್ಟು ಓದೋಣ ಮೊದಲು… ಅರಿತು, ಅರಗಿಸಿಕೊಂಡು, ಅರುಹೋಣ ನವಿರಾಗಿ ಬರಹರೂಪದಲಿ!

ಗತವರ್ಷದ ಮೆಲುಕು ಹೊಸವರ್ಷದಾಗಮನಕೆ!

ಯುಗವೊಂದು ಉರುಳಿ ಮಗದೊಂದು ಯುಗ ನಗಲು ಅಣಿಯಾಗುತ್ತಿದೆ. ಎರಡು ಸಾವಿರದ ಹನ್ನೆರಡರ ಅಂತಿಮ ಕ್ಷಣಗಣನೆ ಆರಂಭವಾಗಿದೆ. ಕಂಡ ಕನಸುಗಳೆಷ್ಟೋ, ನನಸುಗಳಾದವೆಷ್ಟೋ? ಅವಲೋಕನ ಮಾಡಬೇಕಾದ ಅವಶ್ಯಕತೆ ಇದ್ದೇ ಇದೆ ಪ್ರತಿಯೊಬ್ಬರಿಗೂ. ಹೌದು ವರ್ಷದ ಮೊದಲಿಗೆ ರೂಪಿಸಿಕೊಂಡ ಹಲವು ಯೋಜನೆಗಳಲ್ಲಿ ಕೆಲವು ಕಾರ್ಯರೂಪಕ್ಕಿಳಿದು, ಇನ್ನೂ ಹಲವೂ ತಣ್ಣನೆ ಮನದೊಳಗೆ ಹಾಗೆ ಮಲಗಿರಲೂಬಹುದು. ಮತ್ತೆ ಎಚ್ಚರಿಸುವ ಕಾಲ ಬಂದಿದೆ. ಅದು ಈ ವರ್ಷದ ಕೊನೆ. ಕಳೆದ ಸಂವತ್ಸರದಲಿ ನೆನೆಗುದಿಗೆ ಬಿದ್ದವುಗಳನ್ನು ಮತ್ತೊಮ್ಮೆ ಆರಿಸಿ, ವಿಶ್ಲೇಷಿಸಿ, ಹದಗೊಳಿಸಿ ಹೊಸವರುಷಕೆ ಹೊಸತನ ಕೊಡಬೇಕು. ಹಾಗೆಯೇ ನನಸುಗೊಂಡವುಗಳು ಯಾವ ದಿಕ್ಕಿನಲ್ಲಿ ಸಾಗುತ್ತಿವೆ ಎನ್ನುವ ಸಿಂಹಾವಲೋಕನ ಕೂಡ ಅವಶ್ಯ. ಬನ್ನಿ ಸಣ್ಣದೊಂದು ದೃಷ್ಟಿ ಹಾಯಿಸೋಣ ಕಳೆದೊಂದು ವರ್ಷದಿಂದ ಕನ್ನಡ ಬ್ಲಾಗ್ ಕುಂಟುತ್ತಾ, ತೆವಳುತ್ತ, ನಲಿಯುತ್ತಾ ಸಾಗಿಬಂದ ಪರಿಯನ್ನು ನಾವು ನೀವು ಜೊತೆಯಾಗಿ, ಹಿತವಾಗಿ!

ಹಲವು ನೀತಿ-ನಿಯಮ, ರೂಪುರೇಷೆಗಳ ಅಡಿಯಲ್ಲಿ ನೆಲೆನಿಂತು ತನ್ನೆಲ್ಲಾ ಸದಸ್ಯರ ಕ್ರಿಯಾಶೀಲತೆಗಳನ್ನು ಬೆಳಕಿಗೆ ತರುವ ಪ್ರಯತ್ನದತ್ತ ಮುಂದಡಿ ಇಟ್ಟಿತ್ತು ಕನ್ನಡ ಬ್ಲಾಗ್. ೨೦೧೨ರ ಆದಿಯಲ್ಲಿ, ಇತರೆ ಗುಂಪುಗಳಿಗಿಂತ ಭಿನ್ನವಾಗಿ ನಿಂತು ಎಲ್ಲರ ಪ್ರೋತ್ಸಾಹದೊಂದಿಗೆ ತನ್ನ ಸಂಪಾದಕೀಯ ಸರಣಿ ಆರಂಭಿಸಿತ್ತು. ತನ್ಮೂಲಕ ಫೇಸ್ಬುಕ್ ಗುಂಪುಗಳಲ್ಲೇ ವಿಶಿಷ್ಟ ಸಂಪ್ರದಾಯವೊಂದನ್ನು ಹುಟ್ಟುಹಾಕಿದ್ದು ನಮ್ಮ ಈ ತಂಡ. ಸಫಲತೆಯ ಹಾದಿಯಲ್ಲಿ ಸಾಗುತ್ತಿದೆ ಈ ಪ್ರಯತ್ನ. ಜನವರಿ ೨೦೧೨ರ ಮೊದಲ ಸಂಪಾದಕೀಯದಿಂದ ಮೊದಲ್ಗೊಂಡು ಎಲ್ಲ ಲೇಖನಗಳಿಂದ ಆಯ್ದ ಸದಾಶಯದ ತುಣುಕುಗಳನ್ನು ಸಂಕಲನಗೊಳಿಸಿ ಪ್ರಸ್ತುತ ಸಂಪಾದಕೀಯವಾಗಿ ನಿಮ್ಮೆದುರು ಅರ್ಪಿಸುತ್ತಿದ್ದೇವೆ.

ಸಾಗುವ ದಾರಿಯಲ್ಲಿ ಎಡರು ತೊಡರುಗಳು ಸಹಜ. ಈ ಎಲ್ಲದಕೂ ಕಾಲವೇ ಉತ್ತರ ನೀಡುತ್ತದೆ. ಯುಗಯುಗಗಳು ಕಳೆದರೂ ಯುಗಾದಿ ಮರಳಿ ಬರುತ್ತಿದೆ ಅನ್ನುವಂತೆ ಹಳೆಯದ್ದೆಲ್ಲ ಹಳತಾಗಿ ಕಳಚಿ ಹೊಸಚಿಗುರುಗಳು ವಸಂತನಾಗಮನದಿ ಸತ್ಯಸಹಜ. ನಿರಂತರ ಸಂಕ್ರಮಣವದು. ಆದರೆ ಈ ಕಾಲ ಕಳೆಯುತ್ತಾ ಸಾಗಿದಂತೆ ನಮ್ಮ ಭಾಷಾಭಿಮಾನವನ್ನು ನಶಿಸಲು ಬಿಡದೇ, ನಮ್ಮ ಭಾಷೆಯ ಬೆಳವಣಿಗೆಯ ಬಗ್ಗೆ ನಮ್ಮ ನಿಮ್ಮೆಲ್ಲರ ಪ್ರಾಮಾಣಿಕ ಮತ್ತು ನಿಸ್ಪೃಹವಾದ ಪ್ರಯತ್ನ ಇರಲಿ. “ಕನ್ನಡದಲ್ಲಿ ಅಪಾರ ಸಂಪತ್ತಿದೆ. ಮುತ್ತು ರತ್ನ ವಜ್ರ ಸಮಾನ ಸಾಹಿತ್ಯ ಗಣಿಯಿದೆ. ಅದಮ್ಯ ಪ್ರತಿಭೆಗಳಿದ್ದಾರೆ. ಆದರೆ ಇವೆಲ್ಲ ಕಣ್ಣಿಗೆ ಕಾಣದೆ ಮಸುಕಾಗಿ ಬಿಟ್ಟಿದೆ. ಇವನ್ನು ಹೊರಕ್ಕೆ ತಂದು ಪೋಣಿಸಿ ಸುಂದರ ಹಾರ ಮಾಡಿ ಕನ್ನಡಾಂಬೆಯ ಕೊರಳಿಗೆ ಹಾಕಿ ನಮ್ಮ ಶ್ರೀಮಂತ ಸಂಸ್ಕೃತಿ,ಪರಂಪರೆಯನ್ನು ಮೆರೆಯುವ ಅಭಿಮಾನ,ಪ್ರೀತಿ ಪ್ರತಿಯೊಬ್ಬ ಕನ್ನಡಿಗನಲ್ಲೂ ಚಿಗುರಬೇಕು. ಕನ್ನಡ ಕಳೆದು ಹೋಗುತ್ತಿದೆ ಎಂದು ವ್ಯಾಕುಲವಾಗಿ ಮಾತನಾಡುವ ಬದಲು, ನಮ್ಮ ಬಳಿಯೇ ಇರುವ ಸಿರಿಗನ್ನಡದ ಸಿರಿಯನ್ನು ಜಗತ್ತಿಗೆ ತೋರಿಸುವ ಸದಾಶಯ ಪ್ರತಿಯೊಬ್ಬನಲ್ಲೂ ಮೂಡಿ ಬರಬೇಕು ಎನ್ನುವ ಕರೆಯನ್ನು ಮತ್ತೊಮ್ಮೆ ನೆನಪಿಸಿಕೊಳ್ಳುವುದು ನಮ್ಮ ಆದ್ಯ ಕರ್ತವ್ಯ ಕೂಡ.

ಬರಹ/ಕವಿತ್ವ ನಮ್ಮೊಳಗಿನ ಶಕ್ತಿ. ಬರಹ ಸ್ವಂತವಾಗದ ಹೊರತು ನಮ್ಮೊಳಗಿನ ಬರಹಗಾರ ಹೊರ ಬರಲಾರ. ಬದುಕಿಗೆ ವರ್ಣ ಪೇರಿಸಿ ಉಸಿರಾಡಿಸುವ ಬಗೆ ಈ ಕವಿತ್ವಕ್ಕೆ ಗೊತ್ತು. ಅದು ದೇಹ ಗೋರಿ ಸೇರಿದರೂ ಕವಿಯನ್ನು ಜೀವಂತವಾಗಿರಿಸುತ್ತದೆ! ಹೌದು, ಯಾರೂ ಹುಟ್ಟುತ್ತಾ ದೊಡ್ಡ ಕವಿಯಾಗಿ ಹುಟ್ಟಲಿಲ್ಲ.ಕೆಲವೊಮ್ಮೆ ತನ್ನ ಮೇಲಿನ ಅಪನಂಬಿಕೆಯಿಂದಲೊ ಅಥವಾ ಯಾವುದಾದರೂ ವಿಮರ್ಶೆಗಳು ತನ್ನಸ್ಥಿತ್ವವನ್ನು ಪ್ರಶ್ನಿಸುವ ಭಯದಲ್ಲಿ ಕವಿತ್ವ ಕಾಡಬೆಳದಿಂಗಳಾಗುತ್ತದೆ. ಅದು ಜೀವ ರಾಶಿಗಳಿಗೆ ಶಕ್ತಿಯಾಗಬೇಕು. ಅವರ ಪರಿಶ್ರಮದ ಫಲವಾಗಿ ಒಂದು ಕಾಲಘಟ್ಟ ಅವರನ್ನು ಆದರಿಸಿ ಗೌರವಿಸಿರುತ್ತದೆ. ಎಲ್ಲಾ ಕವಿ-ಕಲಾವಿದರ ಬದುಕಿನಲ್ಲೂ ಆ ಕಾಲ ಬರುತ್ತದೆ. ಕಾಯಬೇಕಷ್ಟೇ. ಮೊದಲು ಜನಿಸಿದರೇನು, ಕೊನೆಯಲಿ ಜನಿಸಿದರೇನು, ಎಲ್ಲರೂ ಶಾರದಾಂಬೆಯ ಗರ್ಭಸಂಜಾತರೇ! ಪ್ರತಿಭೆಗೆ ತಕ್ಕ ಪ್ರತಿಫಲ ದೊರೆಯುತ್ತದೆ. ನಂಬಿಕೆಯಿರಬೇಕಷ್ಟೆ. ಅವಕಾಶ ಅದೃಷ್ಟಗಳು ಕೆಲವರನ್ನು ಅರಸಿ ಬರುತ್ತವೆ. ಇನ್ನೂ ಕೆಲವರು ತಾನಾಗಿಯೇ ಅದನ್ನು ಅರಸಿ ಹೋಗಬೇಕು. ಎಂದಾದರೂ ಅವಕಾಶ-ಅದೃಷ್ಟಗಳು ನಂಬಿದವರ ಕೈ ಹಿಡಿಯುತ್ತದೆಂಬುದು ನಿತ್ಯಸತ್ಯ! ಈ ಸತ್ಯದ ಸ್ಪೂರ್ತಿ ನಮ್ಮೊಳಗೂ ಬರಲಿ ಉದ್ದೀಪನವಾಗಲಿ. ಹೀಗೆ ಸಾಹಿತ್ಯವನ್ನು ನಿಂತ ನೀರಾಗಿಸದೆ ಹರಿಯುವ ನದಿಯಂತೆ ನಿರಂತರತೆಯನ್ನು ಮುಂದುವರೆಸುವ ವೇಗವರ್ಧಕಗಳಾಗಿವೆ ಎಂಬ ತಿಳುವಳಿಕೆ ಮುಖ್ಯ. ನಿಜವಾದ ಕೃತಿಯ ನಿರ್ಮಾಣವಾಗುವುದು ಬರಹಗಾರನೊಬ್ಬನ ಸತ್ವ ಹಾಗೂ ವ್ಯಕ್ತಿ ಪ್ರತಿಭೆಯ ಪರಿಣಾಮ. ಸಾಹಿತ್ಯ ಚಳುವಳಿಗಳು ಸ್ವರೂಪತಃ ಸಾಮೂಹಿಕ, ಆದರೆ ಸಾಹಿತ್ಯ ನಿರ್ಮಾಣ ವೈಯಕ್ತಿಕವಾಗಿ ರೂಪುಗೊಳ್ಳುವುದು . ಸಾಹಿತ್ಯದಲ್ಲಿ ಮೂಲಭೂತ ಬದಲಾವಣೆ ಹೊರತರುವ ಸಲುವಾಗಿ ರೂಪುಗೊಳ್ಳುವ ಸಾಹಿತ್ಯವು ಒಂದು ಗಟ್ಟಿಯಾದ ಪರಂಪರೆಯನ್ನು ನಿರ್ಮಿಸುವಂತಿರಬೇಕು ಆ ನಿಟ್ಟಿನಲ್ಲಿ ಸಾಹಿತ್ಯ ಚಳುವಳಿ ಮಹತ್ವದ್ದಾಗಿದೆ ಎಂದು ವಿಷದೀಕರಿಸುತ್ತಾ ಇಂಥ ಮಹೋನ್ನತವಾದ ಸಾಹಿತ್ಯ ಸೃಷ್ಟಿಯ ತಿಳಿವಳಿಕೆಯೊಂದಿಗೆ ಇಂದಿನ ನಮ್ಮ ಬರಹಗಾರರು ತಮ್ಮ ಸುಂದರ ಸೃಷ್ಟಿಗಳಿಗೆ ಕಾರಣೀಭೂತರಾಗಲಿ ಎನ್ನುವ ಆಶಯ ಕೂಡ ನಮ್ಮೆಲ್ಲರಲ್ಲಿದೆ. ಹೀಗೆ ಅಂತರ್ಜಾಲ ಲೋಕದಲ್ಲಿ ನಮ್ಮ-ನಿಮ್ಮೆಲ್ಲರ ಕ್ರಿಯಾಶೀಲತೆ. ಅದು ಬರವಣಿಗೆಯ ಮುಖೇನವಾಗಿರಬಹುದು, ಅಥವಾ ಸಹೃದಯರಾಗಿ ಇರಬಹುದು. ಓದುಗರಾಗಿ ಉತ್ತಮ ವಿಚಾರಗಳನ್ನು ಪ್ರೋತ್ಸಾಹಿಸುವ, ಬಾಲಿಶತನಕ್ಕೊಂದಷ್ಟು ತಿದ್ದುಪಡಿ, ಸಲಹೆ, ಮಾತಿನ ಏಟು ಕೊಟ್ಟರೂ ಬರಹಗಾರನಾಗಿ ಸ್ವೀಕರಿಸಿ ಅದು ತನ್ನ ಮುಂದಿನ ಬರವಣಿಗೆಯನ್ನು ಪಕ್ವಗೊಳಿಸುತ್ತದೆ ಎನ್ನುವ ಮನೋಭಾವ ನಮ್ಮೆಲ್ಲರಲ್ಲೂಒಡಮೂಡಿದೆ ಅನ್ನುವುದು ಸಂತಸದ ವಿಚಾರ ಕೂಡ. ಈ ನಿಟ್ಟಿನಲ್ಲಿ ಇನ್ನಷ್ಟು ಎತ್ತರದ ಮೆಟ್ಟಿಲುಗಳನ್ನು ನಾವು ಏರಬೇಕಾದ ಅವಶ್ಯಕತೆಯೂ ಇದೆ. ಅದಕ್ಕಾಗಿ ನಮ್ಮೆಲ್ಲರ ಪ್ರಯತ್ನವಿರಲಿ ಕೂಡ. ಅದಲ್ಲದೇ ವೈಶಿಷ್ಟ್ಯಪೂರ್ಣ ಸಾಹಿತಿಗಳ ಅಭೂತಪೂರ್ವ ರಚನೆಗಳನ್ನು ನಮ್ಮ ಸ್ವಂತ ಪುಸ್ತಕ ಸಂಗ್ರಹಗಳಲ್ಲಿ ಹೊಂದಿರದಿದ್ದರೆ ಅದೊಂದು ಬಹುದೊಡ್ಡ ಕೊರತೆಯಾದೀತು. ಕನ್ನಡಿಗರಾಗಿ ಕನ್ನಡ ಸಾಹಿತ್ಯಕೃತಿಗಳನ್ನು ಕೊಂಡು ಓದುವ ಪರಿಪಾಠ ಬೆಳೆಸಿಕೊಳ್ಳೋಣ ತನ್ಮೂಲಕ ಕನ್ನಡ ಸಾಹಿತ್ಯಕ್ಕೂ ನಮ್ಮದೇ ಹೃದಯಸ್ಪರ್ಷಿ ಕೊಡುಗೆಯನ್ನೂ ನೀಡೋಣ.

ಮುಂದುವರಿಸಿದಂತೆ, ಒಂದು ಬರಹದ ಬಗೆಗಿನ ವಿಮರ್ಶೆ ಮತ್ತು ಟೀಕೆ ಎಷ್ಟೇ ಕಾರಣಬದ್ಧವಾಗಿದ್ದರೂ ಚುಚ್ಚುವ, ವ್ಯಂಗ್ಯ ಅಥವಾ ಪೂರ್ವಗ್ರಹಪೀಡಿತವಾಗಿರಬಾರದು. ಕನ್ನಡಬ್ಲಾಗ್ ನಲ್ಲಿ ಯಾವುದೇ ವಿಮರ್ಶೆಯೂ ಆ ನಿಟ್ಟಿನಲ್ಲಿ ಹಾದಿ ತಪ್ಪಿಲ್ಲವೆಂಬ ಭರವಸೆಯಿದೆ. ವೈಯುಕ್ತಿಕ ನಿಂದನೆಗಿಳಿದವರನ್ನು, ವಿಚಾರ ಸಂಬಂಧವಿಲ್ಲದ ತುಂಟು ಓತಪ್ರೋತ ಮಾತುಗಾರರನ್ನು ನಿರ್ದಾಕ್ಷೀಣ್ಯವಾಗಿ ಕನ್ನಡಬ್ಲಾಗ್ ನ ನಿಯಮಕ್ಕನುಸಾರವಾಗಿ ಬ್ಲಾಗ್ ನಿಂದ ಅನರ್ಹಗೊಳಿಸಿದ್ದೇವೆ. ಒಬ್ಬರನ್ನೊಬ್ಬರು ಪ್ರೋತ್ಸಾಹಿಸಿ, ತಪ್ಪುಗಳನ್ನು ತಿದ್ದಿ, ತೀಡಿ ಒಂದು ಸತ್ವ ಬೆಳವಣಿಗೆಗೆ ಪ್ರತಿಯೊಬ್ಬರೂ ಸಾಕ್ಷಿಯಾಗಿದ್ದಾರೆ. ಇಲ್ಲಿನ ವಿಮರ್ಶೆಗಳ ಅಂತರ್ ಶಕ್ತಿಯಿಂದ ಲೇಖಕ ಮತ್ತೊಂದು ಬರವಣಿಗೆಗೆ ಕೂಡಲೇ ಅನುವಾಗಿ ನಿಧಾನವಾಗಿ ಸಾಹಿತ್ಯದ ಆಯಾಮಗಳಿಗೆ ಒಗ್ಗಿಕೊಳ್ಳುತ್ತಿದ್ದಾನೆ. ಎಲ್ಲರೂ ಸಂಪೂರ್ಣರಲ್ಲ, ಎಲ್ಲಾ ಬರಹಗಳು ಪಕ್ವವಲ್ಲ. ನಮ್ಮ ಕೊರತೆಗಳನ್ನು ಓದುಗರು ತೋರಿಸಿಕೊಡುವಾಗ ಮನಃಪೂರ್ವಕವಾಗಿ ಒಪ್ಪಿಕೊಳ್ಳುವ ತಾಳ್ಮೆಯಿರಬೇಕು. ಬೆಳವಣಿಗೆ ಹಂತ ಹಂತವಾಗಿ ಸಾಗುತ್ತದೆ, ಹೂ ಮೃದು ಅರಿವಾಗಬೇಕಾರೆ, ಮುಳ್ಳಿನಿಂದ ಒಮ್ಮೆ ಚುಚ್ಚಿಸಿಕೊಂಡಿರಬೇಕು. ಕಹಿ ಸಿಹಿಗೆ ಶುದ್ಧ ಕನ್ನಡಿ. ಬರಹದ ಪ್ರಕಾರಗಳನ್ನು ತಿಳಿದುಕೊಂಡವರೊಬ್ಬರು ನಮ್ಮಲ್ಲಿರುವ ಯಾವುದೋ ಕೊರತೆಯನ್ನು ನೀಗಿಸಲು ಪ್ರಯತ್ನ ಪಟ್ಟಾಗ ನಾವು ಗೌರವಿಸಿ ಮುಂದುವರೆಯುವುದು ಕಲಿಯಬೇಕು ಎನ್ನುವ ಜಿಜ್ಞಾಸೆ ಸಾರ್ವಕಾಲಿಕ. ಎಂದೆಂದಿಗೂ ಪ್ರಸ್ತುತ.

ಇನ್ನುಳಿದಂತೆ ಸಾಹಿತಿಗಳು ಸಾಮಾಜಿಕ ಸೇವೆಯಲ್ಲಿ ತೊಡಗಿಸಿಕೊಂಡು ತಮ್ಮ ತಮ್ಮ ಬರಹದಂತೆ ನಡವಳಿಕೆಯಲ್ಲೂ ಜನ ಸಾಮಾನ್ಯರಿಗೆ ಸಾಹಿತಿಗಳು ಪ್ರೇರಣೆಯಾಗಿದ್ದಾರೆ. ನಮ್ಮ ಬರವಣಿಗೆಗಳು ಕೇವಲ ಪುಸ್ತಕ, ಬ್ಲಾಗು, ನೆಟ್ಟುಗಳಿಗೆ ಸೀಮಿತವಾಗಿರದೆ, ಸಾಮಾಜಿಕ ಜವಾಬ್ದಾರಿಯಿಂದ ಕೂಡಿ, ಪ್ರಗತಿಶೀಲ ವಿಷಯಗಳ ಮೂಲಕ ಜನರಲ್ಲಿ ಜಾಗೃತಿ ತರುವ ಮೂಲಕ ಸಮಾಜದಲ್ಲಿ ಪರಿವರ್ತನೆಯ ಗಾಳಿ ಬೀಸುವತ್ತ ಅನುವು ಮಾಡಿಕೊಡಲಿ. ಕನ್ನಡದ ಮೇಲಿನ ಪ್ರೀತಿ, ಒಲವು ಸಾಮಾಜಿಕ ಅಭಿವೃದ್ಧಿಯತ್ತ ಮುಖ ಮಾಡುವುದು ಮುಖ್ಯ ಅಂಶ. ಹಾಗಾಗಿ ಸಾಹಿತಿಯಾದವನು ಚಿತ್ರಿಸಬೇಕಾದದ್ದು ಇದ್ದುದನ್ನಲ್ಲ, ಇರಬೇಕಾದುದನ್ನು! ವಾಸ್ತವವಾದ ಎಂದರೆ ಸುತ್ತಣ ಬದುಕು ಹಾಗೂ ಪರಿಸರವನ್ನು ಪ್ರಾಮಾಣಿಕವಾಗಿ ಯಥಾವತ್ತಾಗಿ ಚಿತ್ರಿಸಬೇಕೆನ್ನುವ ಒಂದು ಮನೋಧರ್ಮ. ಸಾಹಿತಿಯಾದವನು ಕಂಡದ್ದನ್ನು ಕಂಡ ಹಾಗೆ ಚಿತ್ರಿಸಬೇಕೆನ್ನುವ ಈ ಭಾವ, ಎಲ್ಲ ಕಾಲದ ಸಾಹಿತ್ಯದ ಉದ್ದೇಶಕ್ಕೆ ಹೊರತಾದುದಲ್ಲ ಎಂಬುದು ನಿರ್ವಿವಾದವಾದ ಅಂಶ. ಕಾವ್ಯ ಅಥವಾ ಸಾಹಿತ್ಯದ ವಸ್ತು ಉದಾತ್ತವಾಗಿರಬೇಕು, ಉಳಿದವರಿಗೆ ಉದಾತ್ತ ವ್ಯಕ್ತಿಗಳ ನಡವಳಿಕೆ ಮಾದರಿಯಾಗುವಂತಿರಬೇಕು. ಸಾಹಿತಿಯಿಂದ ಹೊಮ್ಮುವ ಸಾಹಿತ್ಯ ಮಾಡುವ ಕೆಲಸವೆಂದರೆ ಕಂಡದ್ದರ ಅನುಕರಣೆಯಲ್ಲ, ಕಾಣಬಹುದಾದ್ದರ ಅಥವಾ ಸಂಭಾವ್ಯವಾದ ಸಂಗತಿಗಳ ಆದರ್ಶ ರೂಪಗಳನ್ನು ನಿರ್ಮಿಸುವುದು. ಸಾಹಿತ್ಯದಿಂದ ರಾಷ್ಟ್ರಜೀವನ ಹಸನಾಗಬೇಕೆಂಬ, ಜನರ ಮನಸ್ಸು ಸಂಸ್ಕಾರಗೊಳ್ಳಬೇಕೆಂಬ, ಸಮಾಜವನ್ನು ಶ್ರೇಯಸ್ಸಿನ ಕಡೆಗೆ ಕೊಂಡೊಯ್ಯಬೇಕೆಂಬ ಮಾತು ಹಾಗೂ ಮನಸ್ಸು ಸಾಹಿತಿಯದಾಗಿರುತ್ತದೆ. ಇದು ಎಲ್ಲಾ ಸಾಹಿತಿಗಳ ಸಾಹಿತ್ಯದ ಧೋರಣೆಯೂ ಆಗಿರುತ್ತದೆ ಎಂದರೆ ತಪ್ಪಾಗಲಾರದು.

ಅಂತಿಮವಾಗಿ ಒಂದು ಮಾತಂತೂ ಸತ್ಯ. ಬರೆದ್ದದ್ದೆಲ್ಲವೂ ಸಾಹಿತ್ಯವಲ್ಲ.ಎಲ್ಲಾ ಕವಿತೆಗಳೂ ಗೀತೆಗಳಾಗುವುದಿಲ್ಲ, ಎಲ್ಲಾ ಹಾಡೂಗಳೂ ಕವಿತೆಗಳಾಗುವುದಿಲ್ಲ,ಸತ್ವಶಾಲಿಯಾದ ಬರಹದೊಂದಿಗೆ ಬರಹಗಾರರು ಬದ್ಧತೆಯೊಳಗಿದ್ದು ರಚಿಸುವಷ್ಟು ಪ್ರಬುದ್ಧ ಹಾಗೂ ಚಿಂತನಾಶೀಲರಾಗಬೇಕು. ಬರಹಗಾರರೆಲ್ಲ ಈ ಅಂಶಗಳತ್ತ ಚಿತ್ತಹರಿಸಿ ತಮ್ಮ ಲೇಖನಿಗೆ ಶಕ್ತಿ ತುಂಬುವುದರ ಜೊತೆಗೆ, ಜೀವನ ಮೌಲ್ಯಗಳನ್ನು ಅತ್ಯಂತ ಬದ್ಧವಾಗಿ ಎತ್ತಿ ಹಿಡಿದು ಭಾವತೀವ್ರತೆಯಿರುವ ಅರ್ಥಪೂರ್ಣ, ಸಂದೇಶವನ್ನು ಸಾರುವಂತಹ ಸಾಹಿತ್ಯವನ್ನು ರಚಿಸುವತ್ತ ಮುಂದಡಿ ಇಡಲೆಂದು ಆಶಿಸುತ್ತಾ….

ಹೊಸವರ್ಷವನು ಸಂಭ್ರಮದಿ ಆದರಿಸಲು ಮುಂದಡಿಯಿಡೋಣ.

ಬರಹಗಾರನ ಹೃದಯಕ್ಕೆ ಸ್ಫೂರ್ತಿಯ ಸಿಂಚನಗರೆವ ನಮ್ಮ ಓದುಗರು ಸಹೃದಯಿಗಳು

ಕನ್ನಡ ಬ್ಲಾಗ್ ಗುಣಮಟ್ಟ ಕಾಯುವಲ್ಲಿ ನೀವುಗಳು ತೋರುತ್ತಿರುವ ಉತ್ಸಾಹ ಕನ್ನಡ ಬ್ಲಾಗಿನ ಸಾಹಿತ್ಯ ಸಂಪಿಗೆಯ ಈ ಸುಂದರ ಅಂಗಳವನ್ನು ಫೇಸ್ಬುಕ್-ನಂಥ ಸಾಮಾಜಿಕ ತಾಣದಲ್ಲಿ ಅತಿ ಎತ್ತರದಲ್ಲಿ ನಿಲ್ಲಿಸಿವೆ ಎಂದರೆ ಅತಿಶಯೋಕ್ತಿಯಾಗದು. ನಿಮ್ಮ ಕ್ರಿಯಾಶೀಲತೆ, ತಾಳ್ಮೆ, ನಿಮ್ಮಲ್ಲಿನ ಸಾಹಿತ್ಯ ಅಭಿರುಚಿಗಳು, ಓದುವ ಹಂಬಲ ಇಲ್ಲಿನ ಹಲವು ಬರಹಗಾರರಿಗೆ ದಾರೀದೀಪವಾಗುತ್ತಿದೆ ಅನ್ನುವುದರಲ್ಲಿ ಎರಡು ಮಾತಿಲ್ಲ. ಕಚೇರಿಯ ಅತೀವ ಒತ್ತಡದ  ಕಾರ್ಯ, ವ್ಯಯುಕ್ತಿಕ ಜಂಜಡಗಳ ನಡುವೆಯೂ ನಮ್ಮೀ ತಾಣಕ್ಕೆ ಬಂದು ನಿಮ್ಮ ಬರಹಗಳನ್ನು ಪ್ರಕಟಿಸಿ, ತನ್ಮೂಲಕ ಖುಷಿ ಪಡೆದು ಅಥವಾ ಇತರ ಬರಹಗಾರರನ್ನು ಓದಿ ಪ್ರೋತ್ಸಾಹಿಸುವ ಉದಾರ ಮನಸು ನಿಮ್ಮದು. ಖಂಡಿತವಾಗಿಯೂ ಇಲ್ಲಿನ ಎಲ್ಲರಿಗೂ ಇದೊಂದು ತೃಪ್ತಿ ಕೊಡುವ ವಿಚಾರ.

ಅಂತರ್ಜಾಲ ಅಂದಾಕ್ಷಣ ಬಹುಶ ಒಳ್ಳೆಯದಕ್ಕಿಂತ ಹಾಳು ಪ್ರವೃತ್ತಿಗೆ ಮುಖ ಮಾಡುವುದು ಸಹಜವಾಗಿದೆ. ಅದಕ್ಕೆ ಅಪವಾದವೆಂಬಂತೆ ಹಲವು ಉತ್ತಮತೆಗಳು ಇಲ್ಲಿ ಇಲ್ಲವೆಂದೇನಿಲ್ಲ. ತಮ್ಮ ಕೆಲಸಕಾರ್ಯಗಳ ಬಿಡುವಿನಲ್ಲಿ ತಮ್ಮಲ್ಲಿನ ಕ್ರಿಯಾಶೀಲತೆಗಳನ್ನು ಬ್ಲಾಗ್ ರೂಪಗಳಲ್ಲಿ ಸಂಗ್ರಹಿಸಿಡುವ ಒಂದು ಹವ್ಯಾಸವನ್ನು ರೂಢಿಸಿಕೊಂಡ ಸಾವಿರಾರು ಮಂದಿ ನಾವುಗಳು ಇಲ್ಲಿದ್ದೇವೆ. ಈ ಬ್ಲಾಗ್ ಲೋಕದಲ್ಲಿ ಹಲವಾರು ಅದ್ಭುತ ರಚನೆಗಳನ್ನು ಕಂಡಿದ್ದೇವೆ. ಬಹುಶಃ ಈ ಬ್ಲಾಗ್ ಪ್ರಪಂಚ ಅತೀ ಕ್ರಿಯಾಶೀಲತೆಯನ್ನು ಮೈಗೂಡಿಸಿಕೊಂಡಿದೆ ಎಂಬುದೇ ಸೋಜಿಗದ ವಿಷಯ. ಇದು ಕ್ಷಣಕ್ಷಣಕೆ ವಿವಿಧ ಬರಹದ ಸರಂಜಾಮುಗಳನ್ನು ನಮ್ಮ ಮುಂದೆ ತೆರೆದಿಡುತ್ತವೆ. ಬರವಿಲ್ಲದ ಮತ್ತು ಬರಡಾಗದ ಬರಹ ಪ್ರಪಂಚವಿದು ಎಂದು ಬಣ್ಣಿಸಬಹುದಾಗಿದೆ. ಹಲವಾರು ಅದ್ಭುತ ಬರಹಗಳನ್ನು, ಸಾಹಿತ್ಯ ಕೃಷಿಗಳನ್ನೂ, ವಿಭಿನ್ನ ವಿಚಾರಧಾರೆಗಳನ್ನು ಮನಸಿಗೆ ಮುದಕೊಡುವಂತೆ ನಮ್ಮ ಮುಂದೆ ತೆರೆದಿಡುವ ಚತುರರು ಇಲ್ಲಿದ್ದಾರೆ. ಹನಿ, ಕತೆ, ಕವಿತೆ, ಕಾವ್ಯ, ಆತ್ಮಕಥನ, ಹರಟೆ, ಹಾಸ್ಯ, ಪ್ರಬಂಧ, ತತ್ವ ಹೀಗೆ ಯಾವ ಪ್ರಕಾರವೂ ಇಲ್ಲದಿಲ್ಲವೆಂಬಂತೆ ಸಕಲವನ್ನೂ ನಾವಿಲ್ಲಿ ಕಾಣಬಹುದು. 

ಬ್ಲಾಗ್ ಪ್ರಪಂಚದಲ್ಲಿ ಎಲ್ಲವೂ ಹಿತವಾದುದೆಂದು ನಾನೂ ಹೇಳುತ್ತಿಲ್ಲ. ಇಲ್ಲಿ ಬಾಲಿಶತನಗಳು, ಮನಸಿಗೆ ಬಂದಂತೆ ಗೀಚುವ ಸ್ವೇಚ್ಚಾಚಾರ, ಯಾವುದೇ ಅಥವಾ ಯಾರದೇ ಕರಡು ತಿದ್ದುಪಡಿಯಿಲ್ಲದೆ ಪ್ರಕಟಿಸಬಹುದಾದ ಸ್ವಾತಂತ್ರ್ಯಇರುವುದರಿಂದ ಕೆಲವೊಮ್ಮೆ ಓದುಗನನ್ನು ಮುಜುಗರಕ್ಕೆ ಒಳಪಡಿಸಬಹುದು. ಅಥವಾ ಮುಖ್ಯವಾಹಿನಿಯ ಎದುರು ಬ್ಲಾಗ್ ಬರಹಗಾರರು ಅಪಹಾಸ್ಯಕ್ಕೆ ಒಳಗಾಗಬಹುದಾದ ಸನ್ನಿವೇಶ ಸೃಷ್ಟಿ ಆಗಿದ್ದೂ ಇದೆ, ಆಗುತ್ತಿರಲೂ ಬಹುದು. ಅದು ಒತ್ತಟ್ಟಿಗಿರಲಿ. ಈ ಎಲ್ಲ ಕುಂದು ಕೊರತೆಗಳನ್ನು ಮೀರಿ ನಿಂತು, ಮುಖ್ಯವಾಹಿನಿಯಲ್ಲಿನ ಬರಹಗಳಿಗಿಂತ ಮೇಲುಗೈ ಸಾಧಿಸುವ ಸಾಮರ್ಥ್ಯ ಕೂಡ ಬ್ಲಾಗಿಗರಲ್ಲಿದೆ. ಈ ಸಾಮರ್ಥ್ಯಕ್ಕೆ ಬಲಕೊಟ್ಟಿದ್ದು ಅಂತರ್ಜಾಲ ವ್ಯವಸ್ಥೆ. ಎಲ್ಲೋ, ಯಾವುದೋ ದೇಶದ ಮೂಲೆಯಲಿ ಕೂತ ಸಮಾನ ಮನಸ್ಕರನು ಒಗ್ಗೂಡಿಸುವ, ತನ್ಮೂಲಕ ಬರಹ ಪ್ರಪಂಚಕ್ಕೊಂದು ಕೊಡುಗೆ ನೀಡುವ ಅವಕಾಶ ಇತ್ತು ತನ್ಮೂಲಕ ಅಂತರ್ಜಾಲ ಓದುಗರ ಹಸಿವನ್ನು ತಣಿಸುವ ಕಾರ್ಯವನ್ನೂ ಅವ್ಯಾಹತವಾಗಿ ಮಾಡುತ್ತಿದೆ.

ಇನ್ನು ಓದುಗ ಮಹಾಶಯರು. ಸಹೃದಯರು ಎನ್ನುವದಕ್ಕೆ ಸಮಾನಾಗಿ ಬರಹಗಾರನ ಹೃದಯಕ್ಕೆ ಸ್ಪೂರ್ತಿಯ ರಕ್ತ ನೀಡುವವರು ಇವರು. ಈ ಬ್ಲಾಗ್ ಲೋಕದಲ್ಲಿ ಇವರ ಸಂಖ್ಯೆಗೇನೂ ಕಮ್ಮಿಯಿಲ್ಲ. ಓದಿನ ಆಸ್ವಾದನೆಯ ಬೆನ್ನು ಹತ್ತಿದ ಇವರುಗಳಲ್ಲೂ ವಿವಿಧತೆಯಿದೆ. ಪ್ರೋತ್ಸಾಹದ ಮೇರುಗಳು, ಮಾರ್ಗದರ್ಶಕರೂ, ಉತ್ತಮ ವಿಮರ್ಶಕರೂ ಹೀಗೆ ಪಟ್ಟಿ ಬೆಳೆಯುತ್ತದೆ. ಬರಹಗಾರನ ಬರಹಕ್ಕೆ ಮೆಚ್ಚುಗೆ, ಟಿಪ್ಪಣಿ, ವಿಮರ್ಶೆಗಳ ಮೂಲಕ ಬರಹದ ಜೀವನಾಡಿಯನ್ನು ಜೀವಂತವಾಗಿರಿಸುವ ಕಾಯಕ ಈ ಓದುಗರು ಮಾಡುತ್ತಲೇ ಇರುವುದನ್ನು ಕಾಣಬಹುದು. ಅಷ್ಟರ ಮಟ್ಟಿನ ತೃಪ್ತಿ ಕೂಡ ಬರಹಗಾರನಿಗೆ ಈ ಓದುಗರಿಂದ. ಇಲ್ಲೂ ಕೂಡ ಒಂದು ಕೊರತೆ ಎದ್ದು ಕಾಣುತ್ತದೆ.ಅದು ಅಂತರ್ಜಾಲ ಓದುಗರು ಸಹ ಕ್ಷೀಣಿಸುತ್ತಿರುವ ಅಂಶ. ಅದಕ್ಕೆ ಕಾರಣವೂ ಇಲ್ಲದಿಲ್ಲ. ಇಲ್ಲಿ ಹೆಚ್ಚಿನ ಓದುಗರು ಮೂಲತಃ ಸ್ವತ ಬರಹಗಾರನಾಗಿರುವುದು. ಆತ ತನ್ನ ಬರಹಕ್ಕೆ ಮಾತ್ರ ಹೆಚ್ಚಿನ ನಿರೀಕ್ಷೆ ಸಹ-ಓದುಗರಿಂದ ಇಟ್ಟುಕೊಳ್ಳುವುದು ತದ್ವಿರುದ್ಧವಾಗಿ ತಾನೂ ಒಬ್ಬ ಓದುಗನಾಗಬೇಕು ಎನ್ನುವುದನ್ನು ಮರೆಯುವುದು. ಇದು ಸಲ್ಲ. ಅನ್ಯರೂ ತನ್ನಂತೆ ಪ್ರೋತ್ಸಾಹದ ಕಿರು ಕಾಣಿಕೆಯನ್ನು ಬಯಸುವುದು ಸಹಜ ಅನ್ನುವ ಭಾವನೆ ಪ್ರತಿಯೊಬ್ಬನಿಗೂ ಇರಬೇಕು. ಹೀಗಾದಲ್ಲಿ ಮಗದಷ್ಟು ಉತ್ತಮ ಕೃತಿಗಳು ಹೊರಬರಬಹುದು.

ಮೊದಲೇ ಹೇಳಿದಂತೆ ಬ್ಲಾಗ್ ಪ್ರಪಂಚದ ಕ್ರಿಯಾಶೀಲತೆ ಮೆಚ್ಚಲೇ ಬೇಕಾದ ಅಂಶ. ಅದು ಬರಹಗಾರನದ್ದಾಗಿರಬಹುದು ಅಥವಾ ಓದುಗನೇ ಆಗಿರಬಹುದು . ಎರಡೂ ವರ್ಗಗಳು ತಮ್ಮದೇ ಆದ ಕೊಡುಗೆ ನೀಡುತ್ತವೆ. ಇದಕ್ಕೆ ತಧ್ವಿರುದ್ಧವೆಂಬಂತೆ ವ್ಯರ್ಥಾಲಾಪ ಮಾಡುವ ಹಲವಾರು ಮನಸುಗಳಿಗೂ ಇಲ್ಲಿ ಕೊರತೆಯಿಲ್ಲ. ಧರ್ಮ, ಜಾತಿ, ಪಂಗಡ, ಪಕ್ಷ, ಆಸ್ತಿಕ, ನಾಸ್ತಿಕರ ಬಡಿದಾಟ ಕಚ್ಚಾಟಗಳೂ ಕೂಡ ಇಲ್ಲವೆಂದಿಲ್ಲ. ಒಂದು ವಾದಕ್ಕೋ, ತತ್ವಕ್ಕೋ ನೆಚ್ಚಿಕೊಂಡು ಕಚ್ಚಾಡುವ ಮನೋಭಾವ ಇಲ್ಲಿ ಮರೆಯಾಗಬೇಕು. ಆ ವಾದಗಳು ಆರೋಗ್ಯಕರವಾಗಿ ಸಾಮಾಜಿಕ ಸ್ವಾಸ್ಥ್ಯವನ್ನು ಕಾಪಾಡಿಕೊಳ್ಳುವ ನಿಟ್ಟಿನಲ್ಲಿ ಸಾಗಬೇಕು. ಪ್ರತಿಯೊಬ್ಬನೂ ಹುಟ್ಟಿದಾಗಲೇ ಪಕ್ವವಾಗಿರುವುದಿಲ್ಲ. ಉತ್ತಮ ವಿಚಾರಗಳನ್ನು ಪ್ರೋತ್ಸಾಹಿಸುವ, ಬಾಲಿಶತನಕ್ಕೊಂದಷ್ಟು ತಿದ್ದುಪಡಿ, ಸಲಹೆ, ಮಾತಿನ ಏಟು ಕೊಟ್ಟರೂ ಬರಹಗಾರನಾಗಿ ಸ್ವೀಕರಿಸಿ ಅದು ತನ್ನ ಮುಂದಿನ ಬರವಣಿಗೆಯನ್ನು ಪಕ್ವಗೊಳಿಸುತ್ತದೆ ಎನ್ನುವ ಮನೋಭಾವ ನಮ್ಮೆಲ್ಲರಲ್ಲೂ ಮೂಡಬೇಕು. ಮನದ ತರಲೆಗಳನ್ನು ಬದಿಗೊತ್ತಿ, ವ್ಯರ್ಥ ಕಾಲಹರಣವನ್ನು ಸದ್ವಿಚಾರಗಳಿಗೆ ವಿನಿಯೋಗಿಸೋಣ. ಬ್ಲಾಗ್ ಲೋಕದಲೊಂದು ಸಂಚಲನ ಮೂಡಿಸೋಣ.

ಕಳೆದ ಹಲವಾರು ದಿನಗಳಿಂದ ನಮ್ಮ ಕನ್ನಡ ಬ್ಲಾಗಿನ ಹಲವು ಸದಸ್ಯರ ಬರಹಗಳು ಅಲ್ಲಲ್ಲಿ ಪ್ರಕಟವಾಗುತ್ತಿರುವ ಸುದ್ದಿಗಳು ಸಂತಸ ಕೊಡುತ್ತಿವೆ. ಇದು ದ್ವಿಗುಣವಾಗಲಿ. ಪ್ರತಿಯೊಬ್ಬರಿಗೂ ಅಭಿನಂದನೆಗಳು. ಹೀಗೆಯೇ ಸಾಗಲಿ ನಮ್ಮ ಪಯಣ. ಎಲ್ಲರಿಗೂ ಶುಭವಾಗಲಿ.