ರಸಧಾರೆಯೊಳಗೆ ತೇಲಿ…

ಚಿತ್ತದನುಭವ ಭಾವ ಸಂಭಾವನೆಗಳೆಲ್ಲ |
ಬತ್ತವದನು ವಿಚಾರಯುಕ್ತಿಗಳು ಕುಟ್ಟೆ ||
ತತ್ವತಂಡುಲ ದೊರೆಗುಮುದು ವಿವೇಚಿತತತ್ವ |
ನಿತ್ಯ ಭೋಜನ ನಮಗೆ – ಮಂಕುತಿಮ್ಮ ||

ಈ ಮೇಲಿನ ಸಾಲುಗಳೆಲ್ಲ ಡಿ.ವಿ.ಜಿಯವರ ‘ಮಂಕುತಿಮ್ಮನ ಕಗ್ಗ’ದಿಂದ ಆಯ್ದು ಈ ಮುಕ್ತಕವನ್ನು ನಾನು ಆರಿಸಿಕೊಂಡಿದ್ದು ನನ್ನ ಚಿತ್ತದೊಳಗಿನ ಒಂದು ಆಶಯವನ್ನು ವ್ಯಕ್ತಪಡಿಸುವುದಕ್ಕಾಗಿ. ಎರಡುಸಾವಿರದ ಹನ್ನೆರಡನೇ ಇಸವಿ ಫೆಬ್ರವರಿ ತಿಂಗಳಲ್ಲಿ ನಮ್ಮ ಫೇಸ್ಬುಕ್ ಗುಂಪುಗಳಲ್ಲೊಂದಾದ “ಕನ್ನಡ ಬ್ಲಾಗ್”ನಲ್ಲಿ ಶ್ರೀಯುತ ರವಿ ತಿರುಮಲೈ ಅವರದೊಂದು ಮನವಿಯಿತ್ತು. ಗುಂಪಿನ ನಿರ್ವಾಹಕರು ಒಪ್ಪಿಗೆ ಕೊಡುವುದಾದರೆ, ತಾನು ದಿನಕ್ಕೊಂದು ಮುಕ್ತಕಕ್ಕೆ ತನ್ನ ಚಿತ್ತದನುಭವಗಳನು ಬೆರೆಸಿ, ವಿಚಾರಯುಕ್ತಿಗಳನ್ನು ಸಮ್ಮಿಳನಗೊಳಿಸಿ ಈ ಕಗ್ಗಗಳಿಗೆ ವ್ಯಾಖ್ಯಾನ ಬರೆಯುತ್ತೇನೆ ಎಂಬ ಮನವಿಯದು. ಬಹುಶಃ ಶ್ರೀಯುತರು ಅಂದಿನಿಂದ ಇಂದಿನವರೆಗೆ ಓದುಗ ಪ್ರಪಂಚಕ್ಕೆ ತತ್ವದ ನಿತ್ಯಭೋಜನವನ್ನೇ ಉಣಬಡಿಸುತ್ತಿದ್ದಾರೆ ಎಂದರೆ ತಪ್ಪಾಗಲಾರದು. 

ಆಧುನಿಕ ಓದುಗ ಪ್ರಪಂಚದಲ್ಲಿ ನನ್ನಂಥ ಬಾಲಿಶ ಓದುಗನಿಗೆ ಹೆಚ್ಚಿನ ಸನ್ನಿವೇಶಗಳಲ್ಲಿ ಅರ್ಥವಾಗದ ಕಗ್ಗದ ‘ಗ್ರಾಂಥಿಕ’ ಪ್ರಯೋಗಗಳನ್ನು, ಸರಳ ಅಂದರೆ ನಾವು ಬಳಸುವ ದಿನನಿತ್ಯದ ಭಾಷೆ, ಪದಗಳಲ್ಲಿ ವಿವರಿಸಿ ಪ್ರತಿಯೊಂದು ಮುಕ್ತಕಕ್ಕೂ, ತನ್ನದೇ ಆದ ಧಾಟಿಯಲ್ಲಿ, ತನ್ನ ಜೀವನದಲ್ಲಿ ಅನುಭವಿಸಿದ, ತಾನು ಕಂಡರಿತ ಸಾದೃಶ್ಯ ಉದಾಹರಣೆಗಳನ್ನೆತ್ತಿಕೊಂಡು, ವ್ಯಾಖ್ಯಾನಗಳನ್ನು ಹೊಸೆಯುತ್ತಾ ಇದೀಗ ಐನೂರರ ಗಡಿದಾಟುವಲ್ಲಿ ಬಂದು ನಿಂತಿದ್ದಾರೆ. ಇದು ಸುಲಭದ ಮಾತಲ್ಲ. ಕನ್ನಡ ಸಾರಸ್ವತ ಲೋಕದ ಪ್ರಭೆ, ದಿವಂಗತ ಗುಂಡಪ್ಪನವರ ಮೇರು ರಚನೆಗಳನ್ನು ಮನನ ಮಾಡಿಕೊಂಡು, ಅವುಗಳ ಬಗ್ಗೆ ತನ್ನ ಅನುಭವದ ಮೂಸೆಗಳಿಂದ ಭಾವಗಳನ್ನು ಸೆಳೆದು, ಎಲ್ಲೂ ಮೂಲತತ್ವಕ್ಕೆ ಧಕ್ಕೆಯಾಗದಂತೆ ದಿನವೂ ಬರೆಯುವ ಸಹನಾಶೀಲ ಗುಣ, ತಾಳ್ಮೆ ಮೆಚ್ಚತಕ್ಕದ್ದು. 

ಮೇಲಿನ ಮುಕ್ತಕಕ್ಕೆ ವ್ಯಾಖ್ಯಾನವಾಗಿ ವ್ಯಾಖ್ಯಾತರೇ ಹೇಳುವಂತೆ, ನಮ್ಮ ಮನಸ್ಸುಗಳಲ್ಲಿ ಬರುವ ಅನುಭವಜನ್ಯವಾದ ಭಾವನೆಗಳು ಮತ್ತು ಆ ಭಾವನೆಗಳಿಗನುಗುಣವಾಗಿ ಬರುವ ಆಲೋಚನೆಗಳನ್ನು ಆ ಮಿತ ವಿಚಾರ ಶಕ್ತಿಯ ಮಥನಕ್ಕೆ ಒಳಪಡಿಸಬೇಕು. ಬತ್ತವನ್ನು ಕುಟ್ಟಿದ ಹಾಗೋ, ಮೊಸರನ್ನು ಕಡೆದ ಹಾಗೋ ಮಾಡಿದರೆ ಅದರಿಂದ ನಮಗೆ ಜ್ಞಾನ ಉಂಟಾಗುತ್ತದೆ. ಸಾಧ್ಯಾಸಾಧ್ಯತೆಗಳ, ಯುಕ್ತಾಯುಕ್ತತೆಗಳ, ಮಥನವಾಗಿ ಅನವಶ್ಯಕವಾದ ವಿಷಯಗಳನ್ನು ದೂರ ತಳ್ಳಿ ನಮಗೆ ಏನು ಒಳ್ಳೆಯದೋ ಅಥವಾ ಒಳ್ಳೆಯದನ್ನು ಮಾಡಲು ಯಾವುದು ಅವಶ್ಯವೋ ಅದನ್ನು ಮಾತ್ರ ಉಳಿಸಿಕೊಳ್ಳಬಹುದು. ಹಾಗೆ ಉಳಿಸಿಕೊಂಡರೆ ಅದು ಜ್ಞಾನ” ಬಹುಶಃ ಪ್ರಸ್ತುತದಲ್ಲಿ ಈ ‘ಮಥನ’ ಕ್ರಿಯೆಗೆ ಅನುಕೂಲವಾದ ವಿಚಾರ ಕ್ರಿಯೆ ನಮ್ಮಂಥವರ ಮನದೊಳಗೆ ನಡೆಯುತ್ತಿಲ್ಲವಾದ್ದರಿಂದ ಈ ಕಗ್ಗಗಳ ತಾತ್ಪರ್ಯ ಮತ್ತು ಗುಂಡಪ್ಪನವರು ಅರುಹಿದ್ದ ತತ್ವಗಳು ಎಲ್ಲರನ್ನೂ ತಲುಪುತ್ತಿಲ್ಲವೆಂಬ ಕೊರಗಂತೂ ನನ್ನೊಳಗೆ ಇದೆ. ಆ ಕೊರಗನ್ನು ನೀಗಿಸುವ ನಿಟ್ಟಿನಲ್ಲಿ ನಮಗೆ ನೆರವು ನೀಡುವಂಥ ಒಂದು ಅಪೂರ್ವ ವಿಚಾರಧಾರೆಯೆಂದರೆ ರವಿಯವರ ಬರಹ ಬತ್ತಳಿಕೆಯಿಂದ ಹರಿಯುತ್ತಿರುವ ‘ಕಗ್ಗ ರಸಧಾರೆ’.

ಸಂಪೂರ್ಣ ಒಂಬೈನೂರ ನಲವತ್ತೈದು ಮುಕ್ತಕಗಳಿಗೂ ವ್ಯಾಖ್ಯೆ ಬರೆಯುವ ಇಂಗಿತದಲ್ಲಿರುವ ರವಿಯವರ ಇನ್ನೂರು ಮುಕ್ತಕಗಳ ಮೇಲಿನ ವ್ಯಾಖ್ಯಾನದ ಮೊದಲ ಸಂಪುಟ ‘ಕನ್ನಡ ಬ್ಲಾಗ್’ ಬಳಗದ ಹತ್ತು ಹಲವು ಸದಸ್ಯರ ಹಾಗೂ ಮಿತ್ರರನೇಕರ ನೆರವು ಮತ್ತು ಪ್ರೋತ್ಸಾಹದಿಂದ, ಕಳೆದ ಮಾರ್ಚ್ ಹದಿನೇಳರಂದು(ಡಿ.ವಿ.ಜಿಯವರ ಜನ್ಮದಿನ) ಹೊರಬಂದಿದ್ದು, ಮುಂಬರುವ ಜನವರಿಯ ಸುಮಾರಿಗೆ ಎರಡನೇ ಸಂಪುಟವು ಮತ್ತೆ ಇನ್ನೂರೈವತ್ತು ಮುಕ್ತಕಗಳನ್ನು ಹೊಂದಿ ಕನ್ನಡ ಸಾಹಿತ್ಯಲೋಕಕ್ಕೆ ಸಮರ್ಪಣೆಯಾಗಲಿದೆ. 

ಈ ರೀತಿ ವ್ಯಾಖ್ಯಾನಗಳ ಸತ್ವದ ನಿತ್ಯಭೋಜನ ನಮಗಿತ್ತು, ಬಿಡುವಿಲ್ಲದ ದೈನಂದಿನ ಜೀವನದ ನಡುವೆಯೂ ಈ ಕಗ್ಗಗಳನ್ನು ಓದುವತ್ತ ನಮ್ಮ ಚಿತ್ತವನ್ನು ಆಕರ್ಷಿಸಿದ ಕಗ್ಗರಸಧಾರೆಗಳೆಲ್ಲವನೂ ಅರಗಿಸಲಾಗದೆಯೋ, ಅಳವಡಿಸಿಕೊಳ್ಳಲಾಗದ ನಡುವೆಯೂ ಕೊಂಚವಾದರೂ ಅರಿವನ್ನು ಮೂಡಿಸಿಕೊಳ್ಳುವ, ತನ್ಮೂಲಕ ‘ತರು ತಳೆವ ಸುಗಂಧ ಪುಷ್ಪ’ದಂತಾಗುವ ಕಿಂಚಿತ್ ಪ್ರಯತ್ನ ನಮ್ಮದಾಗಲಿ!

Advertisements

ಸಂಕಲ್ಪ, ನಾನು ಮತ್ತು ಅದಕ್ಕೊಂದೆರಡು ಮಾತು

ಅವತ್ತು ಭಾನುವಾರ, ಒಂದು “ಸಂಕಲ್ಪ”ವನ್ನು ಮನದೊಳಗಿಟ್ಟುಕೊಂಡು ಕೂತೆ. ಕಾದಂಬರಿಯೊಂದ ಓದಿಮುಗಿಸಿಬಿಡುವುದಾಗಿತ್ತು ಆ ಸಂಕಲ್ಪ.

ಮೂಲತಃ ಕರಾವಳಿಯವನಾದರೂ ಉತ್ತರಕರ್ನಾಟಕದ ನನ್ನ ನಂಟು ಸರಿ ಸುಮಾರು ಎರಡು ಸಾವಿರನೇ ಇಸವಿ ಜನವರಿ ಒಂದರಿಂದ ಮುಂದುವರಿದಿದೆ. ಅಲ್ಲಿ ಇಲ್ಲಿ ಸಿಕ್ಕಲ್ಲೆಲ್ಲ “ಏನ್ರಿ ಸರ್ರ ಆರಾಮದಿರೇನ್” ಎಂದು ಕೇಳುವ ನನ್ನ ಧಾಟಿ “ಎಂಥಾ ಮಾರಾಯ” ಅಂಥಾ ಮಂಗಳೂರು ಕನ್ನಡ ಮಾತನಾಡುವ, ಜೊತೆಗೊಂದಿಷ್ಟು ಬೆಂಗಳೂರಿನ “ಏನ್ ಗುರು ಕಾಫಿ ಆಯ್ತಾ?” ಗಳ ನಡುವೆ ನಾನು ಮರೆತಿಲ್ಲ ಎಂದರೆ ನನಗಿನ್ನೂ ಆ ಗ್ರಾಮ್ಯ ಭಾಷೆಯ ಸೊಗಡಿನ ಪ್ರೀತಿ ಹೋಗಿಲ್ಲ ಎಂಬ ಹೆಮ್ಮೆಯಿದೆ. ಹೊಟ್ಟೆಪಾಡಿಗಾಗಿ ಬೆಂಗಳೂರಿನ ಹೊಗೆ ತಿನ್ನುತ್ತಿದ್ದರೂ, ಆಕಸ್ಮಿಕವಾಗಿ ಹುಬ್ಬಳ್ಳಿಯಲ್ಲೇ ಕೂತು ಈ ತುಣುಕನ್ನು ಬರೆಯುವ ಭಾಗ್ಯ ಸಿಕ್ಕಿದೆ ಎಂದಾದರೆ ಬಹುಷಃ ಈ ಗಂಡು ಮೆಟ್ಟಿದ ನಾಡಿನ ನಂಟು ನನ್ನನ್ನು ಬಿಡಲಾರದು ಎಂಬುದು ಮತ್ತೆ ನಾನು ಪ್ರಚುರಪಡಿಸಬೇಕಾಗಿಲ್ಲ. ನಾನಿದನ್ನು ಯಾಕೆ ಹೇಳುತ್ತಿದ್ದೇನೆ ಎಂದರೆ ನಾನು ಕೈಗೆತ್ತಿಕೊಂಡ ಸಂಕಲ್ಪವನ್ನು ನಾನು ಓದುವಾಗ ಆ ಭಾಷೆಯ ‘ರಗಡ್’ ಪರಿಚಯವಿಲ್ಲವಾದರೂ, ಕಿಂಚಿತ್ ಅರಿವಿರಲೇ ಬೇಕು.

ಸಾಮಾನ್ಯವಾಗಿ ನಾನು ಈ ಲವ್-ಮ್ಯಾರೇಜ್-ಗಳನ್ನು ಇಷ್ಟಪಟ್ಟವನಲ್ಲ!.
ಏನ್ರೀ ಸರ್ರ್ ಅಸಂಬದ್ಧ ಪ್ರಲಾಪವಿದು? ಉತ್ತರಕರ್ನಾಟಕದಿಂದ ನೇರವಾಗಿ ಪ್ರೀತಿ-ಪ್ರೇಮ-ಮದುವೆ ಬಗ್ಗೆ ಹೊರಟ್ಟಿದ್ದೀರಿ ಎನದಿರಿ. ಹೌದು ನಾನು ಹೇಳಹೊರಟಿರುವ ವಿಷಯಕ್ಕೂ ಉತ್ತರಕರ್ನಾಟಕಕ್ಕೂ ಸಂಬಂಧವಿದೆ ಎನ್ನುವುದು ನಿಮಗೆ ತಿಳಿದಿರಬೇಕಾದ ಸತ್ಯ. ಹಾಗಂತ ಈ ಲವ್ ಮ್ಯಾರೇಜ್ ಒಳಗಿನ ಅಂಶಗಳು ಕೇವಲ ಉತ್ತರಕರ್ನಾಟಕಕ್ಕೆ ಸೀಮಿತವಲ್ಲ. ನಾನು ಹೇಳಹೊರಟಿರುವ ಸಂಕಲ್ಪದ ಕತೆಯೊಳಗಿನ ಬಹುತೇಕ ‘ಮಂದಿ’ ಆ ಕಡೆಯವರು ಎನ್ನುವುದು ನಿಮಗೆ ಗೊತ್ತಿರಲಿ.

ಇನ್ನು ಜಾತಿ ಮತ್ತು ಈ ಪ್ರೀತಿ, ಪ್ರೇಮ. ಒಂದು ಗಂಡು-ಹೆಣ್ಣು ಪ್ರೀತಿಯ ತೆಕ್ಕೆಗೆ ಸಿಕ್ಕಾಗ ಅಲ್ಲಿ ಜಾತಿ ನಗಣ್ಯವಾಗುತ್ತದೆ. ಜಾತಿಯ ಕಂದಕಗಳನ್ನು ಒಂದುಗೂಡಿಸುವ ಬಹುದೊಡ್ಡ ಅಂಟು ಕಂಪನಿಯೆಂದರೆ ಅದು “ಪ್ರೀತಿ” ಅಂಟು!. ಇಲ್ಲಿ ಪ್ರೀತಿ ಎಂದಾಗ ನಮ್ಮ ಹೆಚ್ಚಿನ ಯುವಮನಸುಗಳಲ್ಲಿ ಮೂಡುವ ಭಾವನೆಯೆಂದರೆ ಅದು ಹೆಣ್ಣು-ಗಂಡಿನ ನಡುವಿನ ಆಕರ್ಷಣೆ. ಆದರೆ ಅದಕ್ಕೆ ಮಿಗಿಲಾದ ಒಂದು ಭಾವವಿದೆ ಎನ್ನುವುದನ್ನು ನಾನು ಸ್ವಂತ ಅನುಭವವಿಲ್ಲವಾದರೂ ಈ ಸಂಕಲ್ಪದೊಳಗೆ ಕಂಡಿದ್ದೇನೆ. ಆದರೆ ಜಾತಿ ಎನ್ನುವುದು ದೊಡ್ಡದಾಗಿ ನಿಲ್ಲುವುದು ಆ ಕಟ್ಟುಪಾಡಿಗೆ ಗಂಟುಬಿದ್ದ ಕೆಲವು ಮನಸುಗಳು ಈ ಪ್ರೀತಿ ಎಂಬ ಎರಡಕ್ಷರದೊಳಗಿನಂಟಿಗೆ ತಣ್ಣೀರು ಎರಚಿ ಬಿಡುವ ಪ್ರವೃತ್ತಿಯವರಾದಾಗ ಆ ಪ್ರೀತಿಯೊಳಗೆ ಬೇರುಬಿಟ್ಟ ಜೀವಗಳು ಉಸಿರು ಹಿಡಿದು ಹೋರಾಟ ನಡೆಸಬೇಕಾದ ಪ್ರಮೇಯ ಬರುವುದು ಎಲ್ಲಿ ನೈಜತೆಯ ಪ್ರೇಮವಿದೆಯೋ ಅಲ್ಲಿ ಮಾತ್ರವೇ ಹೊರತು ನಾನು ಈ ಮೊದಲೇ ಹೇಳಿದ ಆಕರ್ಷಣೆಯ ಎರಡು ಘಳಿಗೆಯ ವಾಂಛೆಯಲ್ಲಲ್ಲ. ಈ ನಿಟ್ಟಿನಲ್ಲಿ ನಾನು ಹೇಳಹೊರಟಿರುವ ‘ಸಂಕಲ್ಪ’ದಲ್ಲಿನ ಎರಡು ಜೀವಗಳು ಅಲ್ಲಲ್ಲಿ ಜಾತಿಯ ಹೊಗೆಯಲ್ಲಿ ಬೆಂದಂತೆ ಕಂಡರೂ, ಚತುರ ವಿವರಣೆಯಲ್ಲಿ ಅದನ್ನು ಒತ್ತಿಹೇಳುವಲ್ಲಿ ಸಫಲತೆಯಿದೆ ಎಂದರೆ ತಪ್ಪಾಗಲಾರದು. ಇಲ್ಲಿ ಜಾತಿ ಧರ್ಮದ ವಿಷಯ ಬಂದಾಗ ಮಾನವಧರ್ಮವನ್ನು ಕಡೆಗಣಿಸಿ ಅನ್ಯಧರ್ಮೀಯ ಎಂದು ಕರೆಸಿಕೊಳ್ಳಲ್ಪಡುವ ಒಂದು ಹೆಣ್ಣನ್ನು ಪ್ರೀತಿಸಿದ ಯುವಕ, ತಾನು ಕೈಗೊಂಡ ಸಂಕಲ್ಪವನ್ನು ನೆರವೇರಿಸಿಯೇ ತೀರುತ್ತೇನೆ ಎಂಬ ಪಣ ಕಂಡುಬಂತಾದರೂ ಎಲ್ಲೋ ಒಂದೆರಡು ಕಡೆ ಅವನ ಮನಸೂ ಕೂಡ ಅವಳ ಜೊತೆ ಬಿರುಕಿನೆಡೆಗೆ ತೆರಳಿದ್ದೂ ಇದೆ. ಈ ಭಾವ ಪ್ರೀತಿಯೊಳಗೆ ಮಾಮೂಲು ಎಂದೆಣಿಸಿಕೊಳ್ಳುವುದಾದರೆ ನನ್ನ ಮನಸಿನಲ್ಲಿ ಕೂಡ ಅಂಥಹ ಈ ವಿಷಯದ ಬಗ್ಗೆ ಅಭ್ಯಂತರ ಹುಟ್ಟುವುದಿಲ್ಲ.

ಹೀಗೆ ಕತೆ ಸಾಗುವುದು ಕೇವಲ ‘ಒಂದು ಪ್ರೀತಿಯ ಸುತ್ತ’ ಎಂದರೆ ಅದು ನನ್ನ ಶಾಣೇ ತಪ್ಪಾದೀತು. ಅಲ್ಲಿ ಮಮತೆ ಎನ್ನುವ ಬಳ್ಳಿಯ ಅರಳುವಿಕೆಯಿದೆ. ಸ್ನೇಹ ಎನ್ನುವ ಒಂದು ಆವರಣವಿದೆ. ಆ ಆವರಣದೊಳಗೆ ಬೆಲೆ ಕಟ್ಟಲಾಗದ ಅಂಶಗಳನ್ನು ಎತ್ತಿಹಿಡಿಯಲಾಗಿದೆ. ತದ್ವಿರುದ್ಧವಾಗಿ ಸಮಾಜಸೇವೆ ಎನ್ನುವ ಮುಖವಾಡಗಳ ಬಣ್ಣಕಳಚುವ ಕಿರಿಯ ಪ್ರಯತ್ನ ಕೂಡ ಸಂಕಲ್ಪದ ಸರದಾರ ತೋರಿಸಿದ್ದಾರೆ. ಇದಕ್ಕೆಲ್ಲಕಿಂತಲೂ ಮುಖ್ಯವಾಗಿ ಒಂದು ಕಡೆ ಹೆತ್ತವರ ಅಳಲು, ಹೆತ್ತವರ ಮೇಲಿನ ಮಮಕಾರಗಳನ್ನೂ ಸೂಕ್ಷ್ಮವಾಗಿ ಗಮನಿಸಿದೆ ಈ ಸಂಕಲ್ಪ. ಮಿಗಿಲಾಗಿ ಹೆತ್ತವರೆಂದು ಕರೆಸಿಕೊಳ್ಳುವ ಪಾತ್ರಗಳೂ ಕೂಡ ತಮ್ಮ ಬದಲಾಗದ ಮನಸ್ಥಿತಿಯೊಂದಿಗೆ ಮುಗ್ಧತೆಗಳನ್ನು ತುಳಿಯುವ ಮನಸು ಮಾಡುವುದು ಇಲ್ಲಿನ ವಿಪರ್ಯಾಸ.

ಇನ್ನು ಈ ಮೊದಲೇ ಹೇಳಿದಂತೆ ಇಲ್ಲಿ ಬಂದು ಹೋಗುವ ಪಾತ್ರಗಳು. ಯಾವ ಪಾತ್ರಗಳು ಕೂಡ ಸುಮ್ಮನೇ ಕೂತಿಲ್ಲ!. ಹಾಗೇ ಬಂದು ಹೀಗೆ ಹೋದಂತಿಲ್ಲ. ಎಲ್ಲವನ್ನೂ ಮಾತನಾಡಿಸುವ ಯೋಜಿತ ಬರಹ ರೂಪುರೇಷೆ ಸಂಕಲ್ಪದ ಪ್ರಮುಖದ ಅಂಶ. ಆದರೆ ಎಲ್ಲಾ ಪಾತ್ರಗಳನ್ನು ಮಾತಾನಾಡಿಸುವ ಗೋಜಿನಲ್ಲಿ ಸಂಕಲ್ಪದೊಡೆಯನ ಹೆಚ್ಚಿನ ಮಾತಿನ ಇಚ್ಛೆ ಓದುಗನ ಮನವನ್ನು ಸಂಭಾಷಣೆಗಳಿಂದ ಹಾರಿಸಿಬಿಡಬಹುದು ಎನ್ನುವ ಭಯ ಕೂಡ ನನಗೆ ಕಾಡದಿರಲಿಲ್ಲ. ಏನೇ ಇರಲಿ ‘ಪ್ರಥಮಚುಂಬನಂ ದಂತಭಗ್ನಂ’ ಅಲ್ಲವೇ ಅಲ್ಲ ಎನ್ನುವ ಪ್ರಮಾಣಪತ್ರ ಕೊಡಬಹುದಾದರೂ ಅತಿ ಕಿರಿಯನಾಗಿ ನಾನದಕ್ಕೆ ಹೆದರಿದರೂ, ಕೊಡದೇ ಇರಲಾರೆ.

ಕೊನೆಯದಾಗಿ, ನಾನು ಹೇಳಬಹುದಾದ ಮಾತೆಂದರೆ ಇದೊಂದು ಪ್ರೇಮಕಾದಂಬರಿಯಾಗಿ ನಿಲ್ಲಲ್ಲಿಲ್ಲ ಎನ್ನುವ ಸತ್ಯ ಮತ್ತು ಪ್ರೀತಿ ಮಾಡಬಾರದು ಮಾಡಿದರೆ ಜಗಕೆ ಹೆದರಬಾರದು ಎನ್ನುವ ವಾಸ್ತವಿಕತೆಯ ನೆಲೆಗಟ್ಟಿನಲ್ಲಿ, ಸುಶಿಕ್ಷಿತ ವಾತಾವರಣದಲ್ಲೂ ಅಂತರ್ಧರ್ಮೀಯ ತೊಳಲಾಟವನ್ನು ಹೊಡೆದೋಡಿಸಿ, ಗುಣಾತ್ಮಕ ಅಂಶಗಳನ್ನು ಮನಸ್ಸಿನಲ್ಲಿ ಉಳಿಸಿಕೊಳ್ಳುವಲ್ಲಿ ಸಫಲ ನಾನು ಹೇಳಹೊರಟ “ಸಂಕಲ್ಪ”.
=============
ಪ್ರವೀಣ ಕುಲಕರ್ಣಿ ಯವರೇ,

ನಮನಗಳು ನಿಮಗೆ. ನಿಮ್ಮ ಬರಹ ತಾಳ್ಮೆಗೆ. ಪ್ರೀತೀಶ ಕಾವ್ಯನಾಮದಿಂದ ಕನ್ನಡ ಸಾಹಿತ್ಯಲೋಕಕ್ಕೆ “ಸಂಕಲ್ಪ”ವೆಂಬ ಕಾದಂಬರಿಯ ಕೊಡುಗೆಯಿತ್ತದ್ದಕ್ಕೆ.
[ಮೇಲಿನ ಮಾತುಗಳು ನನ್ನ ಅನಿಸಿಕೆಗಳಷ್ಟೇ. ಏನಾದರೂ ತಪ್ಪಾಗಿದ್ದಲ್ಲಿ ಕ್ಷಮೆಯಿರಲಿ]

http://prawinn.blogspot.in/2012/07/blog-post.html

https://www.facebook.com/praveen823

====
ಈ ಮೇಲಿನ ಅನಿಸಿಕೆಯ ಆಡಿಯೋ ತುಣುಕು ನನ್ನದೇ ಧ್ವನಿಯಲ್ಲಿ “ಸೌಂಡ್ ಕ್ಲೌಡ್” ಮುಖೇನ ನಿಮಗಾಗಿ
http://soundcloud.com/spchauta/sankalpa?utm_source=soundcloud&utm_campaign=share&utm_medium=blogger&utm_content=http://soundcloud.com/spchauta/sankalpa