ಪವರ್ ಆಫ್ ಅಟಾರ್ನಿ ಕತೆಗಳು!

ಅಂದು ಆಷಾಢ ಮಾಸದ ಮೊದಲ ದಿನ…

ನೀವು ಬಾಡಿಗೆ ಮನೆಯಲ್ಲಿರುವವರು, ನೀವ್ಯಾಕೆ ಕೊಡುತ್ತೀರಿ? ಓನರ್ ಆದ ನಾನು ಯಾವತ್ತೂ ಆ ಬಗ್ಗೆ ತಲೆಕೆಡಿಸಿಕೊಳ್ಳುವುದಿಲ್ಲ. ಬೇಕಾದ್ರೆ ಆ ಮನೆಯವರು ಹಾಕಿಸಿಕೊಳ್ಳಲಿ ಬಿಡಿ
ಅವರ ಮನೆಯೆದುರಿಗೆ ತಾನೇ ಆ ಕಂಬ ಇರೋದು!

ಸರಿ ಸರ್…
——
ಅಂದು ಶ್ರಾವಣ ಮಾಸದ ಮೊದಲ ದಿನ.

ಅಂಬುಲೆನ್ಸ್ 108 ರ ಚೀರಾಟದ ಸದ್ದು ಆ ಕಾಲನಿಯಲ್ಲಿ.
——————
ಸರ್ ಬಾಡಿಗೆ ತಗೊಳ್ಳಿ.
ಬೇಗ ಕೊಟ್ಟಿದ್ದಕ್ಕೆ ಥ್ಯಾಂಕ್ಸ್
ಪರ್ವಾಗಿಲ್ಲ ನಿಮ್ಮ ಅರ್ಜೆನ್ಸಿ ನನಗೆ ಅರ್ಥ ಆಗುತ್ತೆ!

ಅಳ್ಬೇಡಿ ಸರ್ ಪ್ಲೀಸ್, ಅತ್ರೆ ಅವರೇನು ವಾಪಾಸ್ ಬರ್ತಾರ?

… ಇಲ್ಲ. ಐಯಾಮ್ ಹೆಲ್ಪ್ ಲೆಸ್, ಒಂದ್ ಹೆಲ್ಪ್ ಮಾಡ್ತೀರ?…
ಏನ್ಸಾರ್ ಮಾಡ್ಬೇಕು, ಹೇಳಿ…
ಕೆಪಿಟಿಸಿಎಲ್ ಜೊತೆ ಮಾತಾಡಿ ಈ ಕಂಪೆನ್ಸೇಶನ್ ಕ್ಲೈಮ್ ಬೇಗ ಮಾಡ್ಸಿ..

ಸರಿ ಸಾರ್ ನಾನು ನಿಮ್ಮ ಟೆನೆಂಟ್ ಆದ್ರೂ ಈ ಕೆಲ್ಸ ಮಾಡ್ಸಿ ಕೊಡ್ತೀನಿ! ಕೊಡಿ ಆ ಪೇಪರ್ ಕೊಡಿ!
======

Advertisements

ಸಂಸ್ಕಾರ!

ಪ್ರಿಯಮಿತ್ರ ಶಿವಮೊಗ್ಗೆಯಲ್ಲಿ ಅಸುನೀಗಿದ್ದ. ಆಗಷ್ಟ್ ತಿಂಗಳ ಜಿರಾಪತಿ ಮಳೆ. ಸುಡಲು ಕಟ್ಟಿಗೆ ಹುಡುಕುತ್ತಾ ಹೊರಟೆ. ಹಸಿ ಕೊರಡುಗಳೆರಡು ಸಿಕ್ಕವು.

ಇನ್ನೇನು ಅಂತ್ಯಸಂಸ್ಕಾರ. ಚಟ್ಟಕ್ಕೆ ಕೊಳ್ಳಿಯಿಡಬೇಕು. ಮೊಬೈಲ್ ರಿಂಗಣಿಸಿತು. 

ಇನ್ನೋರ್ವ ಮಿತ್ರ ಕರೆ ಮಾಡಿದ್ದ. ಏ ಬರ್ತ್ ಡೇ ಕಣೋ.. ನಾವು ನಿನ್ನನ್ನು ಮಿಸ್ ಮಾಡ್ಕೋತ್ತಿದ್ದೀವಿ. 

ಕ್ಯಾಂಡಲ್ ಆರಿಸ್ತಾ ಇದ್ದೀವಿ… 

ಕ್ಷಣ ನಕ್ಕು ಕೊಳ್ಳಿಯಿಟ್ಟೆ ಶವಕ್ಕೆ. ಬೆಂಕಿ ನುಂಗಲಾರಂಭಿಸಿತು ಈತನ ದೇಹವನು!

ಕಾಲ!

ಹನ್ನೆರಡು ವರ್ಷಗಳ ಹಿಂದಿನ ನೆನಪು. ಅಂದು ಅಮ್ಮ ಮತ್ತು ನಾನು ಆ ಬಿಸಿಲ ಧಗೆಯಲ್ಲಿ ಹರಿದ ಚಪ್ಪಲಿಯ ಜೊತೆ ಪಾದಗಳನ್ನುರಿಸಿಕೊಂಡು ಬರುತ್ತಿರುವಾಗ ಆತನ ಕಾರು ರಸ್ತೆಯ ಧೂಳುಗಳನ್ನೆಲ್ಲ ನಮ್ಮ ಉಸಿರಿನೊಳಗೆ ತುರುಕಿತ್ತು. ಕಾರಿನೊಳಗೆ ಕೂತಿದ್ದ ಆತನ ಅಮ್ಮನ ಕುಹಕದ ಕಣ್ಣಿನ, ವ್ಯಂಗ್ಯದ ನಗುವಿಗೆ ಬಿಸಿಲೂ ತಣ್ಣಗಾಗಿತ್ತು!
***
ಕಾಲ ಉರುಳಿದೆ ಪ್ರಳಯವಿಲ್ಲದೇ…
***
ಮೊನ್ನೆ ಊರಿಗೆ ಬಂದಾಗ, ಆ ಬಿರುಬಿಸಿಲಿನಲ್ಲಿ ಆತನ ಅಮ್ಮ ಒಬ್ಬರೇ ನಡೆದು ಬರುತ್ತಿರುವುದನ್ನು ಗಮನಿಸಿ ಕಾರು ನಿಲ್ಲಿಸಿದೆ!
***
ನನ್ನಮ್ಮನ ಚಹಾದ ಆತಿಥ್ಯ ಸ್ವೀಕರಿಸಿದವರೇ ಅತ್ತುಬಿಟ್ಟರು. ‘ಅವ ನನ್ನ ಪಾಲಿಗೆ ಸತ್ತಂತೆ’ ಎನ್ನುವ ಅವರ ಮಾತು ಮಾತ್ರ ನನ್ನ ಕಿವಿಯಾಳಕ್ಕೆ ಇಳಿದಿತ್ತು!
***
ಹೊರಗೆ ಅದೇ ಬಿಸಿಲಿತ್ತು! ಧೂಳು ಮಾತ್ರವಿರಲಿಲ್ಲ!

ಸಾರ್ಥಕ್ಯ!

ಅದೊಂದು ಫೈವ್ ಸ್ಟಾರ್ ಹೋಟೆಲ್!

ಆತ ಔತಣಕೂಟ ಏರ್ಪಡಿಸಿದ್ದ. ಬಂದವರು ತಿಂದು ತೇಗಿ ಹಸ್ತಲಾಘವ ನೀಡಿ ಅವನನ್ನು ಅಭಿನಂದಿಸುತ್ತಿದ್ದರು. ಆತ ಹಿರಿಹಿಗ್ಗಿದ್ದ ತನ್ನ ಔತಣಕೂಟ ಸಾರ್ಥಕ್ಯವಾಯಿತೆಂದು.

ಅಳಿದುಳಿದ ಕಬಾಬ್, ಬಿರಿಯಾನಿಗಳು ಕಸದ ಬುಟ್ಟಿಯ ಹೊಟ್ಟೆ ಸೇರಿತ್ತು. 

ರಾತ್ರಿ ಹನ್ನೊಂದುವರೆ. 

ಪಾರ್ಕಿಂಗ್-ನಲ್ಲಿದ್ದ ಕಾರುಚಾಲಕನಿಗೆ ಕರೆ ಮಾಡಿ ಕಾರು ಮನೆಗೆ ಹೊರಡಿಸು ಅಂದ.

ಕಾರುಚಾಲಕನ ಹೊಟ್ಟೆಯಲ್ಲಿ ಹುಳಗಳು ಹಸಿವಿನಿಂದ ಅರಚುತ್ತಿದ್ದುದು ಕಾರಿನ ಓಟದ ಸದ್ದಿನ ಜೊತೆ ಲೀನವಾಗಿತ್ತು!

ಬರುವವರು?

ಆರೋಗ್ಯ ಸರಿಯಿರಲಿಲ್ಲ. 
ಮನೆಗೆ ಬಂದವಳು ಕ್ಷಣಕೆ ಬರಲೇ ಎಂದು ಹೊರಟು ನಿಂತಳು.

ಮೊಬೈಲು ರಿಂಗಣಿಸಿತು! ಸುದ್ದಿಯರುಹಿದೆ. 
ಹೊರಟು ನಿಂತಳು ಅಮ್ಮ ಬೆಂಗಳೂರಿಗೆ ಬರಲೇ ಎಂದು!

ಆತ್ಮೀಯತೆಯ ಎರಡು ಕತೆಗಳು!

ಕಥೆ ಒಂದು!
“ಕಾಫೀ ಬೇಕಾ” ಎಂದವರು ಕೇಳಿದರು. ನಾನು ಬೇಡ ಎಂದೆ! ದಿನಕ್ಕೆ ಆರು ಕಾಫೀ ಕುಡಿಯುವವನಿಗೆ ಹೊಟ್ಟೆ ತೊಳಸಿ ಬಂದಿತ್ತು!
=======
ಕಥೆ ಎರಡು!
ಒಂಟಿ ಬದುಕು! ನಿನ್ನೆ ದೀಪಾವಳಿ. ಪಕ್ಕದ ಮನೆಯಲಿ ವಾಸವಿರುವ ನನ್ನ ಮನೆ ಮಾಲೀಕ ಕಜ್ಜಾಯ ತಿಂದ್ರಾ ಸಾರ್ ಅಂದ. ಮನೆಯೊಳಗೆ ಹೊಕ್ಕು ಒಣ ಅನ್ನಕ್ಕೆ ಮಜ್ಜಿಗೆ ಬೆರೆಸಿ ತಿಂದೆ. ಸಿಹಿಯಾಗಿತ್ತು!