ಋಣ?

ಕೇಳು ಚಂದಿರ,
ನಿನಗೊಂದು ಪ್ರಶ್ನೆ;

ಬೆಳದಿಂಗಳನಿತ್ತು
ಹೊಗಳಿಸಿಕೊಂಡಿದ್ದೀಯ,
ಆ ಭಾಸ್ಕರನಿಗೆಂದಾದರೂ
ಲೆಕ್ಕ ತೋರಿಸಿದ್ದೀಯ?

Advertisements

ಚೇತನ

ದೇಶಕ್ಕೆ ಸದ್ಗತಿ ಕೋರುವ
ಆತ್ಮಗಳನ್ನು ಹುಡುಕುತ್ತಿದ್ದೇನೆ…

ಛೆ ಛೆ…

ಓ ಬುದ್ಧ ಇದು ಸಮಂಜಸವಲ್ಲ,
ನನ್ನ
ಸಾಸಿವೆ ಗಾತ್ರದ ಪ್ರಯತ್ನಗಳನು
ಹತ್ತಿಕ್ಕದಿರು,
ಚೇತನ ಕುಂದಿಹೋದೀತು!?

ಹೊಸಮಳೆ!

ಹೊಸಮಳೆಗೆ ಕಪ್ಪೆಗಳು ವಟಗುಟ್ಟುವುದು ಸಹಜ. ಇದು ಮಳೆಗಾಲದ ಆರಂಭದ ಸೂಚನೆ ಕೂಡ. ಬಿಸಿಲಿನಿಂದ ನೊಂದ ಬುವಿಯು ಮಳೆಯ ಆ ಒಲವ ಸಿಂಚನದಲ್ಲಿ ಮಿಂದು ಮುಂದೆ ಹಸಿರ ಸೀರೆಯುಡುವುದಂತೂ ದಿಟ. ಸವಿಯುವ ಕಿವಿ ನಮ್ಮದಾಗಿರಬೇಕು; ಆ ಕಪ್ಪೆಗಳು ವಟಗುಟ್ಟುವುದಕ್ಕಾಗಲಿ, ಹಸಿರು ಕಂಗೊಳಿಸುವುದಕ್ಕಾಗಲಿ.

—> ಹೂವರಸ

ಬಲಿ?

ಒಂದರಮೇಲೊಂದರಂತೆ
ಬಂದೆದುರು ನಿಲುವಾಗ
ಎದೆಗುಂದು ತ್ತಿಲ್ಲ,

ನಿಂತ ಸಂಕಟಗಳೇ ಇದೋ
ನೀವು ನನ್ನನು ನುಂಗುವ
ಮೊದಲು ನನ್ನನುಭವದ ಹಸಿವಿಗೆ
ನಿಮ್ಮ ನು ಬಲಿಕೊಡುತಿದ್ದೇನೆ!

 

1111

ಜಗತ್ತು!

ಮೊನ್ನೆ ಕಬ್ಬನ್ ಪಾರ್ಕಿನ ಕಲ್ಲುಬೆಂಚಿನಲಿ ಮೊಲೆ ಹಾಲುಣಿಸುತ್ತಿದ್ದವಳ ಕಂಡು ಮೀಸೆಯಡಿಯಲ್ಲಿ ನೀರುಸುರಿಸಿಕೊಂಡಿದ್ದ ನೀಲಿಕಣ್ಣೊಂದು ಇಂದು ಅಮ್ಮನ ದಿನದಂದು ಪತ್ರ ಬರೆಯುತ್ತಿದೆ…

ಅಮ್ಮಾ, ನೀನೆಂದರೆ…

ನನಗೆ ಜಗತ್ತು!

ಚಾಳೀಸು!

ಎಂ.ಜಿ ರೋಡಿನಲಿ ನಿಂತ
ಹೇ ಮಹಾತ್ಮನೇ,
ನಿನಗೆ ಕನ್ನಡಕ ಕೊಟ್ಟ
ಡಾಕ್ಟರರ ಮೊಬೈಲ್ ನಂಬರ್ ಕೊಡು,
ನನಗೊಂದು ಚಾಳೀಸು ಬೇಕಾಗಿದೆ!

ನನ್ನ ದೇಶದ ತುಂಡುಡುಗೆಯುಟ್ಟ
ನಿರ್ಗತಿಕರ ಅಂದ ನೋಡುವ ಬಯಕೆ ಎನಗಿದೆ!