‘ಪ್ಯಾರಾ’ಕ್ಕೊಂದೇ ವಾಕ್ಯವು – ಸುಮಧುರ ‘ಸರ್ವಸ್ವ’ದ ಛಾಯಾಗೀತವು’!

ಶಿಶಿರ ಋತು, ಕುಂಭ ಮಾಸದ ತೃತೀಯ ದಿನ, ಮಾಘ ಕೃಷ್ಣಪ್ಪಕ್ಷದ ಪಾಡ್ಯ, ಪ್ರೇಮಿಗಳ ದಿನದ ಮರುದಿವಸ ಅಂದರೆ ಫೆಬ್ರವರಿ ಹದಿನೈದರ ಅಪರಾಹ್ನ ಮೂರೂವರೆ ಘಂಟೆಯ ಸರಿಸುಮಾರಿಗೆ ಬೆಂಗಳೂರಿನ ಭಾಗವೇ ಎಂದೆನಬಹುದಾದ ವೈಟ್-ಫೀಲ್ಡಿನ ಇಮ್ಮಡಿಹಳ್ಳಿ ರಸ್ತೆಯಿಂದಾರಂಭಗೊಳಿಸಿದ ನನ್ನ ಮತ್ತು ನನ್ನ ಮಡದಿಯ ನ್ಯಾನೋ ಪಯಣವು, ಮಾರತಹಳ್ಳಿಯಲ್ಲಿ ಮಿತ್ರರಾದ ಅತ್ರಾಡಿ ಸುರೇಶ ಹೆಗ್ಡೆಯವರೊಡಗೂಡಿ ಮತ್ತು ಅವರ ಸೋದರಳಿಯ ಚಿನ್ಮಯರನು ಹಳೆವಿಮಾನ ನಿಲ್ದಾಣ ರಸ್ತೆಯಲಿ ಸೀಟಿಗೇರಿಸಿಕೊಂಡು, ಅರಿಯದ ದಾರಿಯಲೂ ಜಿಪಿಎಸ್ ಪರಮಾತ್ಮನ ಕೃಪಾಕಟಾಕ್ಷದಿಂದ ಹನುಮಂತನಗರದ ‘ಕೆಂಗಲ್ ಹನುಮಂತಯ್ಯ ಕಲಾಸೌಧ’ವನ್ನು ತಲುಪಿದಾಗ ಅದೇ ಸಂಜೆ ಐದು!

ಐದಾದರೂ ಸೂರ್ಯ ಮುಳುಗುತಿದ್ದನೋ ಇಲ್ಲವೋ ಆಕಾಶ ನೋಡುವ ಅವಕಾಶ ಸಿಗದಿದ್ದರೂ ಆ ಘಳಿಗೆಯಲ್ಲಿ ‘ಥಟ್ ಅಂತ’ ಸಿಕ್ಕ ಡಾ.ನಾ.ಸೋಮೇಶ್ವರರ ಜೊತೆ ಸೇರಿ ಪ್ರಿಯ ಮಿತ್ರ ಎಂ.ಎಸ್.ಪ್ರಸಾದ್ ಅವರ ಮುಂದಾಳತ್ವದಲ್ಲಿ ಪಕ್ಕದ ಕೋಟ ಶಿವರಾಮಕಾರಂತ ರಸ್ತೆಯಂಚಿನಲ್ಲಿರುವ ‘ಗಣೇಶ ಭವನ’ದೆಡೆಗೆ ಅಡಿಯಿಟ್ಟು ಚಹವೋ ಕಾಫಿಯೋ ಹೀರುವ ಮಹಾಯೋಜನೆಯು, ಶಟ್ಟರೆಳೆದು ಭವನವು ಬಂದಾಗಿದ್ದರಿಂದಾಗಿ, ತಿರುವು ಪಡೆದುಕೊಂಡು ಎಡಪಕ್ಕದ ಅ.ನ.ಸುಬ್ಬರಾಯ ರಸ್ತೆಯಂಚಿನ ‘ಸುಬ್ರಮಣ್ಯ ಸ್ಟೋರ್’ನ ಫ್ಲಾಸ್ಕ್ ಸ್ಟೋರ್ಡ್ ಚಹಾವನ್ನು ಸಣ್ಣ ಸಣ್ಣ ಕಪ್ಪುಗಳಲ್ಲಿ ಹೀರುವಲ್ಲಿಗೆ ಮುಕ್ತಾಯಗೊಂಡಿತ್ತು.

ತದನಂತರ ಮರಳಿ ಕಲಾಸೌಧದಾವರಣದಲಿ ಕೂರಲು ಜಾಗವಿರದಿದ್ದರೂ ಪಕ್ಕದ ದಂಡೆಗೋ, ಕಬ್ಬಿಣದ ದಂಡಿಗೋ ಒರಗಿ ನಿಂತು ಒಂದಷ್ಟು ಹರಟೆ, ಅರ್ಥ ಅನರ್ಥಕೋಶಗಳ ಅನಾವರಣವಾಗುತ್ತಿರುವಾಗ್ಗೆ, ಆಗಮಿಸ ಹತ್ತಿದ (ಹತ್ತಿದ ಬಳಸಲು ಕಾರಣವಿದೆ, ಅಲ್ಲಿನ ಮೆಟ್ಟಿಲು ಹತ್ತಿದವರಿಗೆ ಗೊತ್ತಾಗಬಹುದು) ಹತ್ತು ಹಲವು ಫೇಸ್ಬುಕ್ ಮಿತ್ರರು ಮಾತಿನಾಲಿಂಗನದೊಳೋ, ಕೈಯ್ಯಕುಲುಕುವಿಕೆಯೊಳೋ ಕಿಲಕಿಲನಾದವನೆಬ್ಬಿಸುತ್ತಿರಲು, ಕತ್ತಲಾಗುತ್ತಿರುವ ಕಾಲಮಾನದಲ್ಲೂ ನನ್ನಂತವರ ಹಲ್ಲುಗಳು ಅವರಿವರ ಕುತ್ತಿಗೆಗೆ ಜೋತುಬಿದ್ದ ಕ್ಯಾಮೆರಕ್ಕೋ, ಕಿಸೆಯೇರಿ ಬಿಸಿಯೋ, ಕಿವಿಯೇರಿ ಬ್ಯುಸಿಯೋ ಆಗಬೇಕಾಗಿದ್ದ ಮೊಬೈಲು ಕ್ಯಾಮೆರಕ್ಕೋ ಕ್ಲಿಕ್ಕೆಂದು ಪಾಡ್ಯದಾಗಸದಲ್ಲಿ ಬೆಳದಿಂಗಳಲಿಲ್ಲದಿದ್ದರೂ ಮಿತ್ರತ್ವದ ನಂಟುಗಳ ಹೊಳಪನೊಂದಿಷ್ಟು ಹೊರಸೂಸಿದ್ದವೆಂದರೆ ತಪ್ಪಾಗಲಾರದೇನೋ!
ಆ ಆವರಣದಲಿ ಏರ್ಪಾಡಾಗಿದ್ದ ಚಹಾ ಪಾನೀಯವನ್ನು ಮತ್ತೊಮ್ಮೆ ನಾಲಗೆಯೊಳು ಸವಿದು, ಗಂಟಲಲಿಳಿಸಿ ರಂಗದತ್ತ ಮುಖಮಾಡಿ ಅಡಿಯಿಡುತ ಏಳರ ಸವಿಸಮಯದಲಿ ”ಟಿಕೆಟಿಗೊಂದು ತೂತನು ಕೊರೆದು ಬಾಗಿಲನು ತೆರೆವವರನು’ ದಾಟಿ ಆಸೀನರಾಗಿ ಛಾಯಾಗೀತವನಾಲಿಸಲು ಸನ್ನದ್ಢವಾಗಿ ಕುಳಿತಿರಲು ವೇದಿಕೆಯೇರಿದ ಮೃದುಮನದ ಮಿತ್ರ ಸುನಿಲ ರಾಯರು ನಿರೂಪಣೆಯಾರಂಭಿಸಲು ಅಂತೂ ಕಾರ್ಯಕ್ರಮಕ್ಕೊಂದು ವಿದ್ಯುಕ್ತ ಚಾಲನೆ ಸಿಕ್ಕಿ ‘ಸರ್ವಸ್ವ’ದ ಸೋಮಯಾಜಿ ನಾಗರಾಜರ ಬೆರಳುಗಳಲಿ ಬೆಳಕುಗಳು ನರ್ತನಗೊಳ್ಳುವ ನಡುವಿನಲೂ, ‘ಗಾಯಕಿಯರ ನಿರುದ್ಯೋಗಿ ಗಂಡಂದಿರ ಸಂಘದ'(ಸ್ವ-ಬಿರುದು) ಸಂ-ಚಾಲಕ ಛಾಯಾ’ಪತಿ’ ಪದ್ಮಪಾಣಿ ಜೋಡಿದಾರರ ಮಧ್ಯಾಂತರ ‘ಪಂಚ್’ ಸಾಲುಗಳೊಂದಿಗೆ, ಇಂಡೋ ಚೈನಾ, ಟೈಟಾನಿಕ್ ಶಂಕರಾಭರಣಂ, ಮಂಡ್ಯ ಮೆಲೋಡಿ (ಮೇಲೋಡಿ?), ‘ಯಹ್ ಮೇರೇ ವತನ್ ಕೇ ಲೋಗೋ” ಗೀತೆಯ ಕನ್ನಡ ತುಣುಕು ಮೊದಲಾದ ವೈವಿಧ್ಯಮಯ ಗೀತೆಗಳ ಪ್ರಸ್ತುತಿ ಬಿ.ಆರ್.ಛಾಯ ಅವರ ಅತ್ಯದ್ಭುತ ಕಂಠಸಿರಿಯಲ್ಲಿ, ಅದರ ಜೊತೆಗೆ ಹೆಚ್.ಕೆ.ರಘು, ವಿಕ್ರಮ್, ಸಂದೀಪ್ ಇವರುಗಳ ಧ್ವನಿಲಾಲಿತ್ಯಗಳು ಶನಿವಾರದ ಸಂಧ್ಯಾಕಾಲಕ್ಕೆ ಕರ್ಣಾನಂದವನ್ನುಂಟು ಮಾಡಿದ್ದು ನಮ್ಮ ಪಾಲಿಗಂತೂ ಸತ್ಯ!

ಈ ಸುಂದರ ಆಯೋಜನೆಯ ನಡುವೆಯೂ, ತನ್ನ ಮೊಟ್ಟಮೊದಲ ಕೃತಿಯಾದ ‘ಮೈಕೆಲ್ ಕೆ ಕಾಲಮಾನ’ (ನೋಬೆಲ್ ಪುರಸ್ಕಾರ ಪಡೆದ ದಕ್ಷಿಣಾಆಪ್ರಿಕಾದ ಲೇಖಕ ಕುಟ್-ಸೀಯವರ ‘ದ ಲೈಫ್ ಅಂಡ್‌ ಟೈಮ್ಸ್‌ ಆಫ್‌ ಮೈಕೆಲ್ ಕೆ’ ಕಾದಂಬರಿಯ ಕನ್ನಡ ಅನುವಾದ)ವನ್ನು ಸುನಿಲ್ ರಾವ್ ಬಿಡುಗಡೆಗೊಳಿಸುವಾಗ ಅತೀ ಭಾವುಕರಾದಂತೆ ಕಂಡರೂ, ವೇದಿಕೆಯೇರಿದ ಇಂದಿರಾ ಲಂಕೇಶ್, ವೀಣಾ ಬನ್ನಂಜೆ, ಜಯಲಕ್ಷ್ಮಿ ಪಾಟೀಲ್, ರೇಖಾರಾಣಿ, ಬಿ.ಆರ್.ಛಾಯಾ ಪಂಚ-ಮಹಿಳಾಮಣಿಗಳ ಅಮೃತಹಸ್ತದಲಿ ಕೇವಲ ‘ಐದುನಿಮಿಷ’ ‘ಕಾಲಮಾನ’ದಲ್ಲಿ ಕಾಲ ಕೊಳ್ ಯಾ ಕಾಲ ಕೊಲ್ ಆಗದೆ, ಯಾರ ‘ಮೈಗೆಲ್ಲೂ’ ಇರಿದಂತೆಯೂ ಅನಿಸದೆ ಚೊಕ್ಕವಾಗಿತ್ತು!

ಕೊನೆಯದಾಗಿ ಒಂದೇ ವಾಕ್ಯದಲ್ಲಿ ಹೇಳುವುದಾದರೆ ಸುಮಧುರ ‘ಸರ್ವಸ್ವ’ದ ಛಾಯಾಗೀತವು’ ಕಳೆದ ಶನಿವಾರದ ಸವಿಗಾನವಾಗಿತ್ತು ಅನ್ನುತ್ತಾ ಇಂತಹ ಕಾರ್ಯಕ್ರಮಗಳು ಇನ್ನಷ್ಟು ಮೂಡಿಬರಲಿ ಎನ್ನುವ ಆಶಯದೊಂದಿಗೆ ಅದರ ಹಿಂದಿನ ಶ್ರಮಿಕರಿಗೆ, ಕೈಜೋಡಿಸಿದ ಎಲ್ಲರಿಗೂ ವಂದನೆಗಳು, ನಮನಗಳು!
=====
ಚಿತ್ರಕೃಪೆ: ರಾಘವ್ ಶರ್ಮ

chaya1
Advertisements

ನಿಮ್ಮದೊಂದು ಉತ್ತರ

Fill in your details below or click an icon to log in:

WordPress.com Logo

You are commenting using your WordPress.com account. Log Out /  Change )

Google+ photo

You are commenting using your Google+ account. Log Out /  Change )

Twitter picture

You are commenting using your Twitter account. Log Out /  Change )

Facebook photo

You are commenting using your Facebook account. Log Out /  Change )

w

Connecting to %s