ನಗುವ ಕಂಡವರಿಹರು ಸಾಸಿವೆಯೊಳಗೆ!

ಇಂದು ಮುಂಜಾನೆ ಹನ್ನೊಂದರ ಸರಿಸುಮಾರು ಒಂದಷ್ಟು ನಗು ಹೊತ್ತ ಮುಖಗಳ ನಡುವೆ ರಶ್ಮಿಸಮೇತನಾಗಿ ಈ ಪುಷ್ಪನು ಹತ್ತು ಹಲವು ಫೇಸ್ಬುಕ್ ಮಿತ್ರರೊಡನೆ ಮಾತನಾಡುತ ಚಾಮರಾಜಪೇಟೆಯಲ್ಲಿರುವ ಕನ್ನಡ ಸಾಹಿತ್ಯ ಪರಿಷತ್ತಿನ ಶ್ರೀ ಕೃಷ್ಣರಾಜ ಪರಿಷನ್ಮಂದಿರದ ಪ್ಲಾಸ್ಟಿಕ್ ಕುರ್ಚಿಗೊರಗಿರಲು, ವೇದಿಕೆಯ ಮೇಲೆ ತನ್ನ ಚಾಳೀಸು ಸರಿಪಡಿಸುತ್ತ ಮಾನಿನಿಯರಂತೆ ಮಂದದನಿಯೊಳು ಮಿತ್ರ ಸುನಿಲ್ ರಾವ್ ವೇದಿಕೆಯ ಪೋಡಿಯಮ್ಮನ್ನಲಂಕರಿಸಿ ಸುಸ್ವಾಗತದ ಸತ್ವಯುತ ಒಗ್ಗರಣೆಯಾರಂಭಗೊಳಿಸಿ, ನಡುವೆ ನೆಲ್ಸನ್ ಮಂಡೆಲಾರನು ನೆನೆಯುತಾ, ಮರುಕ್ಷಣಕೆ ‘ಅಮಿತಾನಂದ’ದ ಮಧುರನಾದನೊಂದಿಗೆ ವಿಭಾ ರಾಗವು ಆ ಒಗ್ಗರಣೆಗೊಂದಿಷ್ಟು ಕೊತ್ತಂಬರಿ ಸೊಪ್ಪಿನ ಘಮವನ್ನು ಪಸರಿಸಿತ್ತು! 

ಹೌದು, ಕಳೆದೆರಡು ಮೂರು ವರುಷಗಳಿಂದ ಬೆಂಗಳೂರಿನಲ್ಲಿ ಹಲವು ಪುಸ್ತಕ ಲೋಕಾರ್ಪಣೆ ಕಾರ್ಯಕ್ರಮಗಳಲ್ಲಿ ಭಾಗವಹಿಸಿದ್ದೆನಾದರೂ ಇಂದು ಬಿಡುಗಡೆಗೊಂಡ ಭಾರತಿ ಬಿ.ವಿ ಅವರ “ಸಾಸಿವೆ ತಂದವಳು” ಸಮಾರಂಭದಲ್ಲಿದ್ದ ಸಕಾರತ್ಮಕ ಅಂಶಗಳು ಇತರೆಲ್ಲಕ್ಕಿಂತ ಭಿನ್ನವಾಗಿತ್ತು ಎಂದರೆ ನನ್ನ ಮಟ್ಟಿಗೆ ಅತಿಶಯೋಕ್ತಿಯಂತೂ ಅಲ್ಲ. ಇದೊಂದು ಪುಸ್ತಕ ಬಿಡುಗಡೆ ಸಮಾರಂಭ ಅನ್ನುವುದಕ್ಕಿಂತಲೂ, ‘ಸಾಸಿವೆ ತಂದವರಿಗೆ’ ಕರುಣೆಯ ‘ಪಾತ್ರೆ’ಯಾದವರ ಸಮ್ಮಿಳನವೆಂದೆನಬಹುದೇನೋ! ಸೋತುಸುಣ್ಣವಾಗಬೇಕಿದ್ದವರನ್ನು ಪ್ರತಿ ಹಂತದಲ್ಲೂ ಮಮತೆಯ ಹಸ್ತಚಾಚಿ ಮೇಲೆತ್ತಿದವರ ಮುಖಗಳು ಅಲ್ಲಿ ಕಾಣುತ್ತಿದ್ದುದಂತೂ ನಿಜ! ಡಾಕ್ಟರ್ ಶ್ರೀನಾಥರ ಸವಿನುಡಿ, ನೇಮಿಚಂದ್ರರ ನೇವರಿಸುವ ಮಮತೆ, ಜಯಂತ ಕಾಯ್ಕಿಣಿಯವರ ಜೀವನ ಜೋಕಾಲಿಗಳ ಉಲಿಗಳ ನಡುವೆ ಭಾರತಿ ಬಿ.ವಿ, ರೇಖಾರಾಣಿಯವರ ಅರ್ಬುದನಿರೋಧ ಹೋರಾಟದ ವಿರುದ್ಧ ಪಡೆದ ಜಯದ ಜೈಕಾರಗಳು ಮೊಳಗಿದ್ದವು! 

ಮನಮರುಗಿಸಿದ ರೇಖಾರಾಣಿಯವರ ಪತಿ ಅಶೋಕ್ ಕಶ್ಯಪರ ಮಾತು, ನಡುವೆ ಮುಕ್ತವಾಗೊಂದೆರಡು ಮುತ್ತನುದುರಿಸಲು ಮೇಲೇರಿದ ಕರಿಕೋಟಿನ ಸಿ.ಎಸ್.ಪಿ ಅಲಿಯಾಸ್ ಟಿ.ಎನ್.ಎಸ್, ಕೊನೆಯದಾಗಿ ಬುದ್ಧವೃತ್ತಾಂತವನು ನೆನೆದ ಸಂತೋಷ್ ಕುಮಾರ್ ಮೆಂಹಂದಳೆಯವರ ಮಾತುಗಳು ಸಾಸಿವೆ ಗಾತ್ರದ ಮಟ್ಟಿಗೂ ಯಾರಿಗೂ ಅತಿಯೆನಿಸಲಿಲ್ಲ. ಕಾರ್ಯಕ್ರಮಕ್ಕೊಂದು ಮೇರು ಎನುವಂತೆ, ನಗುಮುಖದ ಸಹಜ ಧರ್ಮದಲ್ಲೇ ಮಂಕುತಿಮ್ಮನನು ನೆನೆದ ಕುಮುದವಲ್ಲಿ ಅರುಣ್ ಮೂರ್ತಿ ಹಾಗೆಯೇ ಅಂಜಲಿ ಹಳಿಯಾಳ್, ಜೊತೆಯಲಿ ಅನಿಲ್ ಕುಲಕರ್ಣಿ ಹಿಂದಿಹಾಡಿಗೊಂದು ದನಿಕೊಟ್ಟಿದ್ದು ಸಾಸಿವೆ ತಂದವಳ ಬಿಡುಗಡೆಯ ಭಾಗ್ಯ ನೋಡಲು ಬಂದವರು ಮರೆಯಲುಂಟೇ?

“ಬದುಕಿನಲ್ಲಿ ನಮಗೆ ಯಾವುದರ ಬೆಲೆಯೂ ಇರುವಾಗ ಗೊತ್ತಾಗುವುದೇ ಇಲ್ಲ, ಅದು ಇಲ್ಲದಾಗಿನ ಕಾಲದಲ್ಲಿ, ಇದ್ದಾಗ ಎಷ್ಟು ಚೆಂದವಿತ್ತು ಎಂದನಿಸುತ್ತದೆ-ಇದು ”ಸಾಸಿವೆ ತಂದವಳು”, ಭಾರತಿಯವರ ಜೀವನೋತ್ಸಾಹ ಚರಿತೆಯ ಪುಟ ೫೪ರಿಂದ ಆಯ್ದ ಸಾಲುಗಳಿವು. ೨೯ದಿನಗಳ ಕಾಲ ಸ್ನಾನ ಮಾಡಲಾಗದ ಪರಿಸ್ಥಿತಿಯಲ್ಲಿದ್ದ ಲೇಖಕಿಗೆ ಸ್ನಾನ ಮಾಡುವ ಅವಕಾಶ ಸಿಕ್ಕಾಗ ಮನದಾಳದಿಂದೆದ್ದ ಮಾತಾದರೂ ಬರಿಯ ಅಷ್ಟಕ್ಕೆ ಸೀಮಿತವಾಗದದು. ಅದು ಸರ್ವಕ್ಕೂ ಅನ್ವಯ! ಆದರೆ ಸಾಸಿವೆ ತಂದವಳೊಳಗಿನ ಸತ್ವವನರುಹಲು ಸೂಕ್ತವಲ್ಲವೆಂದರಿತು ಇಲ್ಲಿಗೆ ಒಗ್ಗರಣೆಯನ್ನು ನಿಲ್ಲಿಸುತ್ತಿದ್ದೇನೆ. 

ನಗಬೇಕಿದೆ ಬುದ್ಧನಂತೆ ಸಾಸಿವೆಯನೋದುತಾ ನಾಳೆಯೊಳಗೆ!

https://www.facebook.com/spchauta/posts/10152122744128674

Advertisements

ನಿಮ್ಮದೊಂದು ಉತ್ತರ

Fill in your details below or click an icon to log in:

WordPress.com Logo

You are commenting using your WordPress.com account. Log Out /  Change )

Google+ photo

You are commenting using your Google+ account. Log Out /  Change )

Twitter picture

You are commenting using your Twitter account. Log Out /  Change )

Facebook photo

You are commenting using your Facebook account. Log Out /  Change )

w

Connecting to %s