ಸಾತ್ವಿಕರು?

ಪಕಳೆಗಳೆಂದೂ
ಬಂಡಾಯವೇಳಲಿಲ್ಲ,
ಮಕರಂದವ
ಹೀರುವ
ದುಂಬಿಗಳ ತುಳಿತಕೂ!

Advertisements

ಚಿಲಿಪಿಲಿ!

ಚಿಗುರಿ ಹಸಿರಾಗಿ
ಮೆರೆದೊಣಗಿ
ನೆಲಕ್ಕೊರಗಿ
ಮಣ್ಣಾಗಳಿವ ಮೊದಲೆನ್ನ
ಜೀವ ತಳೆವ
ಚಿಲಿಪಿಲಿಯನಾಲಿಸಲು
ಅನುವಿರಲಿ ಆತ್ಮೀಯನೆ!

Photo: ಚಿಗುರಿ ಹಸಿರಾಗಿ
ಮೆರೆದೊಣಗಿ
ನೆಲಕ್ಕೊರಗಿ
ಮಣ್ಣಾಗಳಿವ ಮೊದಲೆನ್ನ
ಜೀವ ತಳೆವ
ಚಿಲಿಪಿಲಿಯನಾಲಿಸಲು
ಅನುವಿರಲಿ ಆತ್ಮೀಯನೆ!

ನಡುಕ?

ಗೂಡುಕಟ್ಟಿ ಬೆಚ್ಚಗಿದ್ದೇನೆ
ಒಳಗೊಳಗೆ,
ಶೀತಗಾಳಿಗೊಂದಿಷ್ಟೂ 
ಮೂಗು ತಾಕಿಸದೆ,
ಚಳಿಗಲ್ಲ, ಬೆದರಿ
ಬಿಳಿಯ ತೊಗಲೊಳಗಿನ
ಕೆಂಪುನೆತ್ತರು ತೋರದಿರಲೆಂದು!

ನಾಲಗೆಯ ನೋವ-ನ(ನಾ)ಲಿಸುತಾ!

ಬದುಕೆಂದರೆ ಹಾಗೆ, ಕೆಲವೊಮ್ಮೆ ಮೌನವಾಗಿಸಿಬಿಡುತ್ತದೆ, ಮಾತೇ ಆಡದಂತೆ ಮೂಕನನ್ನಾಗಿಸಿ ಬಿಡುತ್ತದೆ, ಅಕ್ಷರಶಃ ನಿಜ!

ಹೀಗೆ ಒಮ್ಮೆ ಮೌನವಾಗುವ ಪರಿಸ್ಥಿತಿ ಬಂದಾಗ ದೂರದಲ್ಲಿರುವವರ ಜೊತೆ ವಾಟ್ಸ್ ಆಪ್, ಹ್ಯಾಂಗ್-ಔಟ್, ಚಾಟ್ ಆನ್ ಗಳಂಥ ಆಪ್-ಗಳ ಮುಖೇನವೋ ಅಥವಾ ಫೇಸ್ಬುಕ್ ಮೂಲಕ ಚಾಟ್ ಮಾಡಬಹುದಾದರೂ ಪಕ್ಕದಲ್ಲೇ ಇರುವ ಹೆಂಡತಿಯ ಜೊತೆ? ಈ ಸಂಭಾಷಣೆ…ನಮ್ಮ ಈ ಮೌನ ಸಂಭಾಷಣೆ, ಅತಿ ಮೌನ, ಕಡು ಸೈಲೆಂಟ್! ತುಟಿ ಬಿಚ್ಚದೆ , ಹಲ್ಲು ಕಿರಿಯದೆ ಬರಿ ಮೌನ ಸಂಭಾಷಣೆ! ಮದುವೆಯಾದ ತಿಂಗಳೊಂದರಲ್ಲಿ ಹೆಂಡತಿಯ ಪ್ರತೀ ಮಾತಿಗೆ ‘ಹ್ಮೂಂ’ಕಾರಗಳ ಜೊತೆ, ಅದು ಕೊಡಲೆ? ಇದು ತರಲೇ? ಎಂಬ ಪ್ರಶ್ನೆಗಳಿಗೆ ಕೋಲೇ ಬಸವನಾದ ಅತೀ ನೋವಿನ ಘಳಿಗೆಯಿದು. ಮೊನ್ನೆ ಜ್ವರ ಬಂದಾಗ ನನಗೆ ಸಿಕ್ಕ ಹೊಸ ಡಾಕ್ಟರೊಬ್ಬರು ಕೊಟ್ಟ ‘ಆಂಟಿಬಯೋಟಿಕ್’ಗೆ ಮಾತು ಹೊರಬಾರದಂತೆ ನಾಲಗೆಯೆಲ್ಲ ಬೆಂದು, ವಾಚಾಳಿಯಾಗಿದ್ದ ನನ್ನ ಬಾಯಿ ‘ಶಟರ್’ ಹಾಕಿ, ಲೋಕಪಾಲ್ ಮಸೂದೆಗೆ ಧರಣಿ ಕೂತಂತೆ ಕೂತಿತ್ತು! ಇದು ನನ್ನ ಮೌತಲ್ಸರೋಪಖ್ಯಾನದ ಅಲ್ಪ ಆರಂಭ!

ಮೊನ್ನೆ ಮೊನ್ನೆ ಅದಾರೋ ಫೇಸ್ಬುಕ್ ಆತ್ಮೀಯ ಮಿತ್ರರು ನನ್ನನ್ನು ‘ದೂರ್ವಾಸ’ ಮುನಿ ಎಂದು ನಾಮಕರಣ ಮಾಡಿದ ಮೇಲಂತೂ ನಾನು ಹೆಚ್ಚು ಕೆಂಪಾಗಿದ್ದೇನೆ ಅನಿಸಿತ್ತು, ಅದಕ್ಕನುರೂಪವೆಂಬಂತೆ ಈಗ ನಾಲಗೆ ಹೊರಹಾಕಿ ತಪ್ಪುತಪ್ಪಾಗಿ ಕನ್ನಡ ನುಡಿಯನು ಬರೆದು ಮೊಂಡಾಗಿಸಿದವರನು ಚೆಂಡಾಡಿ, ನುಂಗಿ, ನೀರು ಕುಡಿಯದೇ ಹಾಗೇ ಹೊರಚಾಚಿದರೆ ಹೇಗೆ ಕಾಣಬಹುದೋ ಹಾಗೇ ಹೊರಬೀಳುವ ರಕ್ತಸಿಕ್ತವಾದಂತ ಜಿಹ್ವೆ! ಅಮೇರಿಕಾ ರಕ್ಷಣಾ ಪಡೆಯವರು ಅದೆಲ್ಲೋ ಕ್ಷಿಪಣಿ ದಾಳಿ ಮಾಡಿದ ತರ ಅನ್ನುವುದಕ್ಕಿಂತಲೂ ಪರದೇಶದಲ್ಲಿ ನಮ್ಮ ಕ್ರಿಕೆಟಿಗರು ‘೦’ ಎಂಬ ರನ್ ಗಳಿಕೆ ಪಡೆದಾಗ ಕಾಣುವ ಸ್ಕೋರ್ ಬೋರ್ಡ್-ನಂತೆ ಅಲ್ಲಲ್ಲಿ ಒಂದಿಪ್ಪತ್ತೈದು ‘ತೂತು’ ಬಿದ್ದಿದ್ದವು ಸಾಲುಸಾಲಾಗಿ! ನೋವೂ ಅಷ್ಟೇ, ಆ ಶೂನ್ಯ ಗಳಿಸಿದವರಿಗಿಂತಲೂ, ಶೂನ್ಯವನು ಕಂಡು ಮರುಗುವ ಮನಸ್ಥಿತಿ ನನ್ನದು, ನಾಲಗೆಯದಲ್ಲ. ಅದಕ್ಕಿನ್ನೂ ಚಪಲ ಅಲ್ಲಿಲ್ಲಿ ಹೊರಳಾಡಬೇಕೆಂದು ಬಾಯೊಳಗೆ ನೀರೂರಿಸುತ!

ಚಪಲವೆಂದಾಗ ನೆನಪಾಯ್ತು, ಬೆಂದರೂ ಈ ನಾಲಗೆ ಸುಮ್ಮನಿರುತ್ತದೆಯೇ? ಹೇಮಂತದ ಚಳಿ ಬೇರೆ, ಕುರುಂಕುರುಂ ತಿಂಡಿ ಬೇಕೆಂದರೂ ತಿನ್ನುವುದು ಹೇಗೆ? ಮೌನದಲೇ ಒಂದು ಚಿಂತೆ! ಈ ಕಾಯಿಲೇಗೇನು ಮದ್ದು? ನಮ್ಮ ಮಿತ್ರ ಬಳಗದಲ್ಲೆಲ್ಲರೂ ‘ಸರ್ವರೋಗ ಚಿಕಿತ್ಸಕರು’ ಎನ್ನುವುದಂತೂ ದಿಟ! ಒಬ್ಬೊಬ್ಬರದು ಒಂದೊಂದು ಸಲಹೆ! ಆಯುರ್ವೇದಿಂದಾರಂಭಗೊಂಡು ಸೀಬೆ ಎಲೆ ಜಗಿತ, ಜೀರಿಗೆ ಕಷಾಯ, ದಾಳಿಂಬೆ ಸಿಪ್ಪೆ ಕಷಾಯ, ಎಳನೀರು, ಗುಲ್ಕಂದ್ ಸ್ವಾಹದಿಂದ ಹಿಡಿದು ಝೈಟೀ ಜೆಲ್, ಸ್ಮೈಲ್, ಬಿಕಾಂಪ್ಲೆಕ್ಸ್ ಕ್ಯಾಪ್ಸೂಲ್ಸ್-ಗಳ ತನಕ ಮದ್ದುಗಳನ್ನಿಡಲು ಒಂದು ಕಮರ್ಷಿಯಲ್ ಕಾಂಪ್ಲೆಕ್ಸೇ ಬೇಕಾದ ಪಟ್ಟಿ ಬೆಳೆದಿತ್ತು! ಇತ್ತಲಿಂದ ಗಸಗಸೆ ಪಾಯಸ, ರಾಗಿಗಂಜಿ, ಬಾರ್ಲೀ ನೀರು, ಒಣಕೊಬ್ಬರಿ ಜೊತೆ ಸಕ್ಕರೆ, ಕೊನೆಗೆ ಮಿತ್ರರೋರ್ವರು ‘ಬೀರುಕುಡಿಯಿರಿ ನೋವಮರೆಯಿರಿ’ ಎಂದು ‘ಸರ್ವರೋಗಕ್ಕೆ ಸಾರಾಯಿ ಮದ್ದು’ ಎಂದು ಪಠಿಸಿಯೇ ಬಿಟ್ಟರು! ಏನೇ ಅಗಲಿ ನೋವಿನಲೂ ಒಂದು ಸುಖ ಇದ್ದೇ ಇರುತ್ತದೆ ಅನ್ನುವುದಂತೂ ದಿಟ! ಸೀಬೆ ಎಲೆಯೋ, ಬಾರ್ಲೀ ನೀರೋ? ನೋವಿನಲೂ ಜಗಿಯುವ ಅಲಿಯಾಸ್ ನುಂಗುವ ಕ್ಷಣಕೆ ಬೀರಿನ ನೆನಪು, ಆಹಾ ಏನು ಸುಖ!

ಅಂತೂ ಮಾತನಾಡಲಾಗದ ಈ ಶುಭ ಸಂಜೆಯಲಿ ನಾಲಗೆಯ ನೋವ ನಾನಾಲಿಸುತಾ, ಸಿಹಿಸಿಹಿಯಾದ ಗಸಗಸೆಯ ಪಾಯಸವನ್ನು ಬಾಯಿಮುಚ್ಚಿಕೊಂಡು (ಅಂದರೆ ಹೆಂಡತಿಯೊಡನೆ ಏನೂ ಮಾತನಾಡದೇ) ಸವಿಯುತಾ ಅಲ್ಸರೋಪಖ್ಯಾನವನು ನಿಮ್ಮ ಮುಂದಿಡುತ್ತಿದ್ದೇನೆ.

ಸಿಹಿಯಾಗಿದ್ದರೆ ಸವಿಯಿರಿ. ನೋವಾದರೆ ಅದರೊಳಗೂ ಸುಖ ಪಡೆಯಿರಿ!

ಸುಭಗ!

ನಿಮಿಷದ ಮುಳ್ಳು ಸಾವಿರದ ನಾಲ್ಕುನೂರ ನಲುವತ್ತು ಬಾರಿ ತಿರುಗುವಾಗಲೂ ‘ಸುಭಗ’ನೆನಿಸಿಕೊಳ್ಳುವುದು ಸುಲಭವಲ್ಲ. ಕೆಲವೊಮ್ಮೆ ನನ್ನೊಳಗಿನ ‘ಸೆಲ್’ಗಳು ವೀಕ್ ಆಗಿ ಸುಭಗತನದ ಮುಳ್ಳುಗಳನ್ನು ನಿಲ್ಲಿಸಿಬಿಡುತ್ತವೆ!

—>ಹೂವರಸ!