ಮಿತ್ರ ಮಿಶ್ರನ ಚಿತ್ರ ಚಿತ್ರಣ!

ಎರಡು ಸಾವಿರದ ಹದಿಮೂರನೇ ಇಸವಿ ಸೆಪ್ಟಂಬರ್ ಮಾಸದ ಇಪ್ಪತ್ತೊಂದನೆಯ ದಿನ. ಶನಿವಾರದ ರಾತ್ರಿ ಎಂಟರ ಸುಮಾರು ಬೆಂಗಳೂರಿನ ಯಲಹಂಕದಲ್ಲಿರುವ ಮಿತ್ರ ರವಿ ತಿರುಮಲೈ ಅವರ ಮನೆಯಲ್ಲಿ ಕೂತು ಸರಿಸುಮಾರು ಹತ್ತೊಂಬತ್ತು ವರ್ಷಗಳ ಹಿಂದಿನ ನೆನಪುಗಳನ್ನು ಮೆಲುಕು ಹಾಕುವ ಕ್ಷಣವೊಂದನ್ನು, ಈ ಫೇಸ್ಬುಕ್ ಕೊಡಮಾಡಿಸಿತ್ತು. ಆರನೇ ಮತ್ತು ಏಳನೇ ತರಗತಿಯಲ್ಲಿ, ನನ್ನೂರು, ಉಡುಪಿ ಜಿಲ್ಲೆಯ ಶಿರ್ವದ ಹಿಂದೂ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಸಹಪಾಠಿಯಾಗಿದ್ದ ಸುನಿಲ್ ಮಿಶ್ರ ಮಾತಿಗೆ ಸಿಕ್ಕಿದ್ದ. ಶಿರ್ವದ ಸಾರ್ವಜನಿಕ ಗಣೇಶೋತ್ಸವ ಸಮಿತಿಯು ಏರ್ಪಡಿಸುತ್ತಿದ್ದ ಚಿತ್ರ ಸ್ಪರ್ಧೆಯಲ್ಲಿ ತಪ್ಪದೇ ಭಾಗವಹಿಸುತ್ತಿದ್ದ ಈ ಮಿತ್ರ, ಇದೀಗ ಶಿಲ್ಪಕಲೆ, ಚಿತ್ರಕಲೆಯಲ್ಲಿ ತನ್ನದೇ ಆದ ಛಾಪನ್ನು ಮೂಡಿಸುತ್ತಿದ್ದಾನೆ ಎಂಬ ಮಾಹಿತಿಯನ್ನು ನನ್ನದೇ ಊರಿನ ಮತ್ತೋರ್ವ ಬರಹಗಾರ ಮಿತ್ರ ಅಶೋಕ್ ಕುಮಾರ್ ವಳದೂರು ತಿಳಿಸಿದ್ದರು. ಅಶೋಕ್ ಮೂಲಕವೇ ಕಳೆದ ಒಂದೆರಡು ತಿಂಗಳುಗಳ ಹಿಂದೆ ಸುನಿಲ್ ಬಗ್ಗೆ ಮಾಹಿತಿ ಸಿಕ್ಕಿದ್ದು. ಈ ಗೆಳೆಯ ಸುನಿಲ್ ಮಿಶ್ರ ಮಾತಿಗೆ ದಕ್ಕಿದ್ದು! 

ಏಳನೇ ತರಗತಿಯಲ್ಲಿ ನಾವು ಬೀಳ್ಕೊಂಡ ಬಳಿಕ ನಾನು ಶಿರ್ವದಲ್ಲೇ ಇರುವ ಹಿಂದೂ ಜೂನಿಯರ್ ಕಾಲೇಜು, ಬಳಿಕ ಅಲ್ಲಿಯೇ ಇರುವ ಮೂಲ್ಕಿ ಸುಂದರ್ ರಾಮ್ ಶೆಟ್ಟಿ ಕಾಲೇಜು ಸೇರಿದರೆ, ಸಹಪಾಠಿ ಸುನಿಲ್ ಶಿರ್ವದ ಸೈಂಟ್ ಮೇರಿಸ್ ಕಾಲೇಜಿನಲ್ಲಿ ನನ್ನಂತೆಯೇ ಬಡತನದಲ್ಲಿ ವಿದ್ಯಾಭ್ಯಾಸ ಮುಗಿಸಿ, ಇಂಜಿನಿಯರ್ ಓದು ಎನ್ನುವ ಮನೆಯವರ ಒತ್ತಾಯವನ್ನು ಬದಿಗಿಟ್ಟು ತನ್ನ ಆಸಕ್ತಿಯ ಚಿತ್ರಕಲೆಯನ್ನು ಕಲಿಯಬೇಕೆಂಬ ಆಸೆಯಲ್ಲಿ ಉಡುಪಿಯ ಚಿತ್ರಕಲಾ ಮಂದಿರದಲ್ಲಿ ಡ್ರಾಯಿಂಗ್ ಮಾಸ್ಟರ್ ಕೋರ್ಸ್ ಮುಗಿಸಿ, ಹಂಪಿಯಲ್ಲಿ ಫೈನ್ ಆರ್ಟ್ಸ್ ಡಿಪ್ಲೊಮ ಪಡೆದು, ಮೂಡಬಿದರೆಯ ಆಳ್ವಾಸ್ ಸಂಸ್ಥೆಯಲ್ಲಿ ನೌಕರಿ ಪಡೆದು, ನಾಲ್ಕು ವರ್ಷ ಕಾಲ ಅಲ್ಲಿ ಆರ್ಟ್ಸ್ ಟೀಚರ್ ಆಗಿ ಕೆಲಸ ನಿರ್ವಹಿಸಿ, ಆಳ್ವಾಸ್ ನುಡಿಸಿರಿ ಮೊದಲಾದ ಕಾರ್ಯಕ್ರಮದ ವೇದಿಕೆಯ ವಿನ್ಯಾಸಗಳಿಗೆ ತನ್ನ ಕಾಣಿಕೆಯನ್ನೂ ಇತ್ತು, ಚಿತ್ರಕಲೆಯಲ್ಲಿ ತನ್ನನ್ನು ತಾನು ತೊಡಗಿಸಿಕೊಂಡ. ಏತನ್ಮಧ್ಯೆ ರಾಜ್ಯಪ್ರಶಸ್ತಿ ವಿಜೇತ ಕಾರ್ಕಳದ ಗುಣವಂತೇಶ್ವರ ಭಟ್ ಅವರ ಮಾರ್ಗದರ್ಶನದಲ್ಲಿ ಶಿಲ್ಪಕಲೆಯನ್ನು ಕಲಿತು, ಎರಡು ಅಡಿಯ ಸುಂದರ ಸರಸ್ವತಿ ವಿಗ್ರಹವನ್ನು ರೂಪುಗಳಿಸಿ, ತಾನು ರಚಿಸಿದ ಮೊದಲ ಶಿಲ್ಪಾಕಲಾ ಮೂರ್ತಿಯಯನ್ನು ತನ್ನ ಬಳಿಯೇ ಉಳಿಸಿಕೊಳ್ಳಬೇಕೆಂಬ ಮಹದಾಸೆಯಿದ್ದರೂ, ಹಣಕಾಸಿನ ತೊಂದರೆಗಳಲ್ಲಿ ಸಿಕ್ಕು, ಸಲ್ಲದ ಬೆಲೆಗಳಿಗೆ ಮಾರಬೇಕಾದ ಸಂದರ್ಭ ಮತ್ತು ಅನಿವಾರ್ಯತೆಯ ನೋವನ್ನು ಸುನಿಲ್ ನನ್ನ ಬಳಿ ತೋಡಿಕೊಂಡಾಗ ಕಲೆಯ ಬೆಲೆ ಎಲ್ಲಿ ಹುಡುಕಬೇಕು? ಎನ್ನುವ ಪ್ರಶ್ನೆ ನನಗೆದುರಾದದ್ದಂತೂ ನಿಜ.

ತದನಂತರ ವೈಯಕ್ತಿಕ ಕಾರಣಗಳಿಂದ ಮೂಡಬಿದಿರೆ ಬಿಡಬೇಕಾಗಿ ಬಂದು, ಬೆಂಗಳೂರು ತಲುಪಿ, ವೈಟ್-ಫೀಲ್ಡಿನ ಇಮ್ಮಡಿಹಳ್ಳಿ ಮುಂತಾದೆಡೆ ಸರಕಾರಿ ಶಾಲೆಗಳಲ್ಲಿ ಡ್ರಾಯಿಂಗ್ ಶಿಕ್ಷಕ ವೃತ್ತಿಯನ್ನು ಮುಂದುವರಿಸಿದ ಸುನಿಲ್, ಆತ್ಮೀಯನಾಗಿ ಬೆರೆತಿದ್ದು ಮಾತಿನ ಮಲ್ಲ ಚಕ್ರವರ್ತಿ ಸೂಲಿಬೆಲೆಯವರೊಂದಿಗೆ. ಡಿಸೆಂಬರ್ ಇಪ್ಪತೈದು ಎರಡು ಸಾವಿರದ ಹನ್ನೆರಡರಂದು ಕಾರ್ಕಳದ ಶಾಸಕ ಸುನೀಲ್ ಕುಮಾರ್ ಮನೆಯಲ್ಲಿ ನಡೆದ “ಮಿಂಚಿನ ಮಾತಿಗೆ ಕುಂಚದ ಉತ್ತರ” ಎಂಬ ಅಭೂತಪೂರ್ವ ಕಾರ್ಯಕ್ರಮವೊಂದರಲ್ಲಿ, ಹಿರೇಮಗಳೂರು ಕಣ್ಣನ್ ಮತ್ತು ಚಕ್ರವರ್ತಿಯವರ ಮಾತುಗಳ ಮೋಡಿಗೆ ತನ್ನ ಕುಂಚದ ಕೈಚಳಕ ತೋರಿಸಿದ ಮೇರು ಹೆಗ್ಗಳಿಕೆಯನ್ನು ಸುನಿಲ್ ತನ್ನದಾಗಿಸಿಕೊಂಡದ್ದು ಮೆಚ್ಚತಕ್ಕ ಅಂಶ. ಬೆಂಗಳೂರಿನಲ್ಲಿ ಆತನ ಕಲಾಕೃತಿಗಳು ಸರಿಸುಮಾರು ಆರು ಪ್ರದರ್ಶನಗಳಲ್ಲಿ ಅರಳಿ ನಿಂತದ್ದು ಸಂತಸ ತರುವ ವಿಚಾರ. ಇದಲ್ಲದೇ, ಕೆ.ಕೆ.ಹೆಬ್ಬಾರ್ (ಕಟ್ಟಿಂಗೇರಿ ಕೃಷ್ಣ ಹೆಬ್ಬಾರ್ – ಕಟ್ಟಿಂಗೇರಿಯು ಶಿರ್ವದಿಂದ ಕೂಗಳತೆ ದೂರ), ಎಂ.ಎಫ್ ಹುಸೇನ್ ಮೊದಲಾದವರ ಕಲಾಕೃತಿಗಳು ಪ್ರದರ್ಶನಗೊಂಡ ಮುಂಬೈನ ಪ್ರತಿಷ್ಠಿತ “ಜಹಂಗೀರ್ ಆರ್ಟ್ ಗ್ಯಾಲರಿ”ಯಲ್ಲಿ ಮುಂಬರುವ ಎರಡು ಸಾವಿರದ ಹದಿನೆಂಟನೇ ಇಸವಿಯಲ್ಲಿ ಈತನ ಕಲಾಕೃತಿಗಳು ಪ್ರದರ್ಶನಗೊಳ್ಳಲಿವೆ ಎಂಬ ವಿಚಾರ ಕಲಾಭಿಮಾನಿಗಳೆಲ್ಲರಿಗೂ, ಕನ್ನಡಿಗರಾದ ನಮಗೂ ಸಂತಸ ಕೊಡದೇ ಇರದು ಎನ್ನುವುದು ನನ್ನ ಅನಿಸಿಕೆ.

ಕಲೆ, ಸಾಹಿತ್ಯ, ಸಂಗೀತವನ್ನು ಪ್ರೋತ್ಸಾಹಿಸಿ, ಉಳಿಸಿ ಬೆಳೆಸುವ, ಅದರೊಳಗೆ ಬೆರೆಯುವ ಮನಸುಗಳು ಕಡಿಮೆಯಾಗುತ್ತಿರುವ, ಕುಂಠಿತಗೊಳ್ಳುತ್ತಿರುವ ಬಗ್ಗೆ ತನ್ನ ಮನದ ಮೂಲೆಯಲೊಂದು ನೋವ ಎಳೆಯನ್ನು ಬಿಚ್ಚಿಟ್ಟ ಮಿತ್ರ ಸುನಿಲ್ ಮಿಶ್ರ, ಪ್ರಶಸ್ತಿಗಳ, ಹಿರಿಮೆ ಗರಿಮೆಗಳನ್ನು ಪಡೆಯಬೇಕೆಂಬ ಹಾರೈಕೆ ತನಗಿಲ್ಲ, ತಾನು ಮಾಡುತ್ತಿರುವ ಕಲಾಕೃತಿಗಳನ್ನು “ಮಾರ್ಕೆಟಿಂಗ್” ಮಾಡಕೊಳ್ಳಬೇಕು, ಅದರಿಂದ ಹೆಸರು ಪಡೆಯಬೇಕು ಎನ್ನುವ ಆಶಯವೂ ತನಗಿಲ್ಲ, ಯಾವುದೇ ಕೃತಿಗಳು ಜೀವಂತವಾಗಿರಬೇಕಾದರೆ, ಕಲಾರಸಿಕರನ್ನು ಖುದ್ದಾಗಿ ಆ ಕೃತಿ ಸೆಳೆಯುವಂತಿರಬೇಕು. ಅದೇ ಅದರ ಮಾರ್ಕೆಟಿಂಗ್ ಎನ್ನುತ್ತಾ, ಜೊತೆಗೆ ತಾನು ಮೆಚ್ಚುವ ಸಾಹಿತಿ ಎಸ್ ಎಲ್ ಭೈರಪ್ಪರವರನ್ನು ನೆನೆಯುತ್ತಾ, ನಾವು ನಮ್ಮ ಮಾತು ಮುಗಿಸಿದ್ದು ಮುಂದಿನ ನಮ್ಮ ನಡೆಯ ಬಗ್ಗೆ ಒಂದಿಷ್ಟು ಹಂಚಿಕೊಂಡು, ಬೆರೆತು ಬೆಳೆಯೋಣ ಎಂಬ ನುಡಿಯ ಚಿತ್ರಣದೊಂದಿಗೆ.

======

ಚಿತ್ರ:ಸುನಿಲ್ ಮಿಶ್ರ

Advertisements

One comment on “ಮಿತ್ರ ಮಿಶ್ರನ ಚಿತ್ರ ಚಿತ್ರಣ!

  1. Badarinath Palavalli ಹೇಳುತ್ತಾರೆ:

    “ಮಿಂಚಿನ ಮಾತಿಗೆ ಕುಂಚದ ಉತ್ತರ” ತುಂಬಾ ಒಳ್ಳೆಯ ಶೀರ್ಷಿಕೆ ಹೂವಪ್ಪ. ರಾಜ್ಯಪ್ರಶಸ್ತಿ ವಿಜೇತ ಕಾರ್ಕಳದ ಗುಣವಂತೇಶ್ವರ ಭಟ್ ಅವರ ಬಗ್ಗೆ ಕೇಳಿದ್ದೆ. ತಮ್ಮ ಮಿಶ್ರ ಅವರಲ್ಲಿ ಕಲಿತವರು ಎಂದು ಕೇಳಿ ಖುಷಿಯಾಯಿತು.

    ಯಾವುದ್ಯಾವುದನ್ನೋ ಸಲೀಸಾಗಿ “ಮಾರ್ಕೆಟಿಂಗ್” ಮಾಡುವ ಕಲೆ ಗೊತ್ತಿರುವ ಈಗಿನ ಕಾಲದಲ್ಲಿ, ಸುನಿಲ್ ಮಿಶ್ರ ಒಬ್ಬರು ಅಪರೂಪದ ಕಲಾವಿದ. ಇಂತಹ ಮಿತ್ರರನ್ನು ಪಡೆದ ನೀವು ಮಾನ್ಯರು.

    ನನಗೆ ಬಹಳ ನಾಟಿದ್ದು: “ಯಾವುದೇ ಕೃತಿಗಳು ಜೀವಂತವಾಗಿರಬೇಕಾದರೆ, ಕಲಾರಸಿಕರನ್ನು ಖುದ್ದಾಗಿ ಆ ಕೃತಿ ಸೆಳೆಯುವಂತಿರಬೇಕು. ಅದೇ ಅದರ ಮಾರ್ಕೆಟಿಂಗ್” ಎನ್ನುವ ಮಾತು.

ನಿಮ್ಮದೊಂದು ಉತ್ತರ

Fill in your details below or click an icon to log in:

WordPress.com Logo

You are commenting using your WordPress.com account. Log Out /  Change )

Google+ photo

You are commenting using your Google+ account. Log Out /  Change )

Twitter picture

You are commenting using your Twitter account. Log Out /  Change )

Facebook photo

You are commenting using your Facebook account. Log Out /  Change )

w

Connecting to %s