ಬಸ್ಸಿನೊಳಗಣ ಬುಸುಗುಡುವ ಗೊರಕೆಗಳು ಮತ್ತು ಚಾಲನೆಯಲ್ಲಿರುವ ಬಸ್ ಇಂಜಿನ್ನಿನ ಸದ್ದು – ಒಂದು ತುಲನಾತ್ಮಕ ಅಧ್ಯಯನ”!

ವರ್ಷಕ್ಕೆ ಹತ್ತು-ಹದಿನೆಂಟು ಬಾರಿಯಾದರೂ ಬೆಂಗಳೂರಿನಿಂದ ಉಡುಪಿಗೋ, ಹುಬ್ಬಳ್ಳಿಗೋ ಪ್ರಯಾಣ ಮಾಡುವವನು ನಾನು. ಮೊದಲೆಲ್ಲ ಖಾಸಗಿ ಕ್ಯಾರೇಜುಗಳು ನನ್ನ ಜೀವವನ್ನೂ ಸೇರಿದಂತೆ, ಸರಿಸುಮಾರು ನಲ್ವತ್ತು-ನಲ್ವತ್ತೈದು ಜೀವಗಳನ್ನು ಸೀಟಿನ ಮೇಲಿಟ್ಟುಕೊಂಡು, ಮುನ್ನೂರೈವತ್ತು ಜೀವಗಳಿಗಿಂತಲೂ ಮಿಗಿಲಾದ ಭಾರಗಳನ್ನು ತನ್ನ ತಲೆಯ ಮೇಲೆ ಹೊತ್ತುಕೊಂಡು ಊರಿನ ದಾರಿ ತೋರಿಸುತ್ತಿದ್ದವು. ಸಮಯ ಪರಿಪಾಲನೆಯ ಮಟ್ಟಿಗೆ ಈ ಖಾಸಗಿ ಬಸ್ಸುಗಳಿಗೂ ನಮ್ಮ ರಾಜಕಾರಣಿಗಳಿಗೂ ಬಹಳ ಹತ್ತಿರದ ನಂಟು. ಎಲ್ಲೋ ಒಂದೆರಡು ರಾಜಕಾರಣಿಗಳು ಸಮಯಪರಿಪಾಲಕರಾಗಿ ನಮಗೆ ಗೋಚರಿಸುವಂತೆ, ಕೆಲ ಕ್ಯಾರೇಜುಗಳು ನಿಗದಿತ ಸಮಯಕ್ಕೆ ಚಾಲೂ ಆಗುವುದುಂಟು! 

ಈಗೀಗ ನನ್ನದೇ ಸ್ವಂತ ಅಂದರೆ, ನನ್ನನ್ನೂ ಸೇರಿ ನಿಮ್ಮಂತವರೆಲ್ಲ ತೆರಿಗೆ ಕಟ್ಟಿ, ಅರ್ಧ ಅವರಿವರು ನುಂಗಿ ನೀರುಕುಡಿದು, ಉಳಿದುದರಲ್ಲಿ ಸರಕಾರವೆಂಬ ಮಾಲಿಕ ಕೊಂಡುಕೊಂಡ ಬಸ್ಸುಗಳಲ್ಲೇ ಪಯಣಿಸುವುದೇ ಅಭ್ಯಾಸವಾಗಿದೆ. ಕಟ್ಟಿದ ತೆರಿಗೆಗೆ ಋಣ ಪಡೆಯುವುದು ಎಂಬಂತೆ, ವರ್ಷದಲ್ಲಿ ಕೆಲವು ಸೀಟನ್ನಾದರೂ ಬಿಸಿ ಮಾಡುವ ಅಥವಾ ‘ವಾಯುದಾಳಿ’ ನಡೆಸಿ ಭಗ್ನಗೊಳಿಸುವ ಇರಾದೆಯು ಕೊಂಚಮಟ್ಟಿಗಿದ್ದರೂ ಬಸ್ಸಿನ ಒಂದು ಕಿಟಕಿಯಾದರೂ ನನ್ನ ಕಾಸಿನದ್ದೇ ಎಂದು ಹೆಮ್ಮೆಪಡಬಹುದು ಕೂಡ ಎಂಬುದೇ ಈ ನಡೆಯ ಹಿಂದಿನ ಉದ್ದೇಶ. ಅದಲ್ಲದೇ ಸಮಯ ಪಾಲನೆಯಲ್ಲಿ ದೂರದೂರಿಗೆ ಚಲಿಸುವ ಕೆ.ಎಸ್.ಆರ್.ಟಿ.ಸಿ ಬಸ್ಸುಗಳು, ಸ್ವರಚಿತ ಕವನ ಸಂಕಲನ ಬಿಡುಗಡೆ ದಿನ ವೇದಿಕೆ ಮೇಲೆ ಕಾಣಸಿಗುವ ನನ್ನಂಥ ಕವಿ ಮಹಾಶಯರಂತೆ, ನಿಗದಿತ ಸಮಯಕ್ಕಿಂತ ಮೊದಲೇ ಬಸ್-ಸ್ಟಾಂಡಿನಲ್ಲಿರುತ್ತವೆ! ನಂತರದ ಅವು ಹೊರಡುವುದು, ಪುಸ್ತಕ ಮಾರಾಟವಾಗುವ ಹಾಗೇ ತಡವಾಗಿಯಾದರೂ, ಬೇಗ ಹೊರಡುತ್ತವೆ!

ಎಲ್ಲ ಘಳಿಗೆಯಲ್ಲೂ ಬಸ್ಸುಗಳನ್ನೇ ದೂರಿ ಪ್ರಯೋಜನವಿಲ್ಲ. ಈಗ ನಾನು ನಿಮ್ಮನ್ನು ಹತ್ತಿಸಿದ ಬಸ್ಸು ಹೊರಟು ನಿಂತಿದೆ. ನಿರ್ವಾಹಕ ಮತ್ತು ಚಾಲಕ ಮಹಾಶಯನ ಸಂಸ್ಕೃತ ಪಠಣ ಶುರುವಾಗುವುದೇ ಇಲ್ಲಿಂದ. ಬಾಯಿಯಲ್ಲಿ ಸೀಟ್ ಹನ್ನೆರಡರ ಗಿರಾಕಿಯನ್ನು, ದೈನಂದಿನ ದರ್ಬಾರಿನಲ್ಲಿ, ಮಹಾರಾಜ ಸಿಂಹಾಸನವನ್ನು ಸ್ವೀಕರಿಸುವ ಮೊದಲು ಹೊಗಳುಭಟರು ಕೊಂಡಾಡುವಂತೆ ಉಘೇಉಘೇ ಎನ್ನುತ್ತಾರೆ. ಹನ್ನೆರಡು ನಂಬರಿನ ಪ್ರಯಾಣಿಕ ಮಹಾರಾಜರನ್ನು ನಿರ್ವಾಹಕ ಸಂಪರ್ಕಿಸಲಾಗಿ ‘ಇಲ್ಲೇ ಇದ್ದೇನೆ, ಐದು ನಿಮಿಷ, ಟ್ರಾಫಿಕ್ ಇದೆ, ಬಂದೆ’ ಎಂಬ ಟೆಲಿಫೋನ್ ಮಾಹಿತಿಯೊಂದನ್ನು ರವಾನಿಸುತ್ತಾರೆ. ಆ ಮಹಾರಾಜರ ಆಗಮನಕ್ಕಾಗಿ ಉಳಿದ ನಲವತ್ತು ಮಹಾಪ್ರಜೆಗಳು ಕಾದಿರಬೇಕಾದದ್ದು ಅನಿವಾರ್ಯ. ಐರಾವತದಂಥ ಹವಾನಿಯಂತ್ರಿತ ಬಸ್ಸುಗಳಾದರೆ, ಅದೂ ಎಪ್ರಿಲ್ ಮೇ ತಿಂಗಳಾದರೆ. ಚಾಲಕ ಕಾಸ್ಟ್-ಕಂಟ್ರೋಲ್ ಎಕ್ಸ್ಪರ್ಟ್ ಆಗಿದ್ದರೆ, ಒಳಗೆ ಏಸಿಯಿಲ್ಲದೇ ಕೂತ ನನಗೂ, ತಂದೂರಿಯಲ್ಲಿ ರೋಸ್ಟ್ ಆಗುವ ಕಬಾಬಿಗೂ ವ್ಯತ್ಯಾಸವಿರುವುದಿಲ್ಲ!

ಹನ್ನೆರಡರವರು ಬಂದು ಕೂರುತ್ತಿದ್ದಂತೆ, ಪಕ್ಕದ ಹನ್ನೊಂದರಲ್ಲಿನ ಜೀವವೊಂದರ ತಕರಾರು ಬಸ್ಸಿನಲ್ಲಿ ಹಾಕಲ್ಪಟ್ಟ(ಹಾಕಿದ್ದರೆ) ಟೀವಿಯ ದನಿಗಿಂತಲೂ ಮಧುರವಾಗಿ ಕೇಳಲಾರಂಭಿಸುತ್ತದೆ. ಯಾವುದೋ ಸಿನೆಮಾ ಶೂಟಿಂಗ್ ನಡೆಯುವಂತೆ ಕಂಡರೂ ರಾಜಸಭೆಯಲ್ಲಿ ಅನ್ಯರನು ಕರೆಸಿ ಸಭಾನರ್ತಕಿಗವಮಾನವಾಗುವ ಕಥೆಯಲ್ಲಿ ಬುಸುಗುಡುವ ನರ್ತಕಿ ರಣಚಂಡಿಯಂತೆ ಆಗಿ, ಸಾಫ್ಟ್-ವೇರ್ ಲಾಂಗ್ವೇಜಿನ ಅರ್ಥವಾಗದ ಇಂಗ್ಲಿಷ್ ವಾಕ್ಯಗಳ ಮಹಾಪ್ರಯೋಗಗಳು, ಇತಿಹಾಸ ಪುಸ್ತಕಕ್ಕಿಂತ ಡಿಕ್ಷನರಿಯ ನೆನಪು ತರುತ್ತವೆ. ಆನ್ಲೈನ್ ಬುಕಿಂಗ್ ನಲ್ಲಿ ಮಹಿಳಾ ಮೀಸಲಾತಿ ಸೀಟುಗಳಿದ್ದರೂ ಕೆಲವೊಮ್ಮೆ ಆ ಕೆಟಗರಿಗೆ ಸೇರದ ಜೀವಗಳು ಮೀಸಲಾತಿಯಲ್ಲಿ ಒಳಸೇರುವುದು ರೇಶನ್ ಅಂಗಡಿಯ ಅಕ್ಕಿಯಲ್ಲಿನ ಕಲ್ಲಿನಂತೆ ವಿಶೇಷವೇನಲ್ಲ ಬಿಡಿ. ಪೂರ್ತಿ ತುಂಬಿರುವ ಬಸ್ಸಿನಲ್ಲಿ, “ನಾನೇನು ಮಾಡಲಯ್ಯ? ಬುಕ್ ಮಾಡಿದವರು ನೀವಯ್ಯ, ಸೀಟಾಯ್ಕೆ ನಿಮ್ಮದಯ್ಯ” ಎಂಬ ದೀನ ಮೋರೆಯ ವಚನವೊಂದನ್ನು ಹಾಡುತ್ತಾರೆ ನಮ್ಮ ಕಂಡಕ್ಟರಣ್ಣ! ಅಲ್ಲಿಗೆ ಈ ಇಪ್ಪತೊಂದನೇ ಶತಮಾನದಲ್ಲೂ ”ಲಿಂಗಬೇಧ ಆಸನ ಪ್ರಹಸನ”ವೊಂದು ಸಮಾಪ್ತಿ! ಪಕ್ಕದವನ ಮುಸು ಮುಸು ಮೂತಿಯನು ಕಂಡು ಮುದುಡಿ ಕುಳಿತುಕೊಂಡರೆ ಹನ್ನೊಂದು ನಂಬರ್ ಸೀಟಿನ ಆ ಅಕ್ಕನ ನಿದ್ರಾಹೀನ ಇರುಳ ಸೊಬಗನೆಂತು ಬಣ್ಣಿಸಲಿ? ನನಗೆಚ್ಚರವಿದ್ದರೆ ತಾನೇ ನಿಮಗೆ ಬಣ್ಣಿಸುವುದು!

ಎಲ್ಲೋ ಕಹಳೆ ಊದಿ ಯುದ್ದಕ್ಕೆ ಕರೆಕೊಟ್ಟಂತೆ “ಹತ್ತು ನಿಮಿಷ, ಟೈಮಿದೆ, ಬೇಗ ಬನ್ನಿ” ಎಂಬ ಕರೆಯಾನಾಲಿಸಿದಾಗ, ಕೆಳಗಿಳಿದು ಪೆಟ್ರೋಲ್ ಬಂಕಿನಲಿ ಟ್ಯಾಂಕರ್ ಖಾಲಿಯಾಗುವಂದದಿ ಸಿಕ್ಕ ಸಿಕ್ಕ ರಹಸ್ಯ ಸ್ಥಳದಲ್ಲಿ ಡೌನ್-ಲೋಡ್ ಆಗಿಬಿಡುತ್ತವೆ ಕೆಲವರ ರಾತ್ರಿ ಲೋಡ್-ಗಳು ನನ್ನನ್ನೂ ಸೇರಿ! ಅಬ್ಬಾ ಸಮಾಧಾನವೆಂದು ಬಸ್ಸಿನವರೇ ಕೊಟ್ಟ ‘ಬಾಟಲಿ’ (ಹೆಚ್ಚಿನವರು ಕುಡಿಯುವ ನೀರು ಮನೆಯಿಂದ ತಂದಿರುತ್ತಾರೆ!) ನೀರಿನಲಿ ಕೈತೊಳೆದು, ನಿದ್ರೆಯ ಮುಖಕ್ಕೊಂದಿಷ್ಟು ನೀರೆರಚಿಕೊಂಡು, ಮನಸ್ಸಿದ್ದರೆ ಪಕ್ಕದ ಹೋಟೇಲಿನಲ್ಲೋ, ಹೋಟೆಲಿಲ್ಲದಿದ್ದರೆ ”ಕೈ ಚಾ-ಚು ಕೆಫೆ”(ಇದು ಚೈನೀಸ್ ಕೆಫೆ ಅಲ್ಲ, ಗಾಡಿ ‘ಚಾ’ದಂಗಡಿಗೆ ನನ್ನದೇ ಕನ್ನಡ ಪದ)ಯಲ್ಲಿ ಸಿಪ್ ಚಹಾವೇರಿಸಿದರೆ ಮರುಭೂಮಿಯಲಿ ಒಯಸಿಸ್ ಕಂಡ ಒಂಟೆಗೆ ಹರುಷವಾದಂತೆ ಹದಿನೈದು ಘಂಟೆಯಲ್ಲವಾದರೂ ಬಾಕಿ ಉಳಿದ ನಾಲ್ಕು ಗಂಟೆಗಳ ಪಯಣಕ್ಕೊಂದು ಕಿಕ್ ಕೊಟ್ಟಂತೆ. ಇನ್ನೂ ಈ ಮೊದಲೇ ಹೇಳಿದಂತೆ “ಎಲ್ಲ ಕಡೆಯೂ ದೇವರಿದ್ದಾನೆ, ಆತ ನನ್ನನ್ನು ನೋಡುತ್ತಿದ್ದಾನೆ” ಎಂದು ತಿಂದ ಬಾಳೆಹಣ್ಣಿನ ಸಿಪ್ಪೆ ಎಸೆಯಲಾಗಲಿಲ್ಲ ಎಂಬ ಕೊರಗಿನೊಡನೆ ಆ ”ಪಾರ್ಕಿಂಗ್” ಜಾಗ ಕಂಡುಕೊಳ್ಳಲಾಗದವರು ಅನ್ಲೋಡ್ ಮಾಡಲಾಗದೇ, ಮುಂಜಾನೆ ತನಕ ಲೋಡ್ ಗಾಡಿ ಅಲ್ಲಲ್ಲ, ಲೋಡೆಡ್ ‘ಬಾಡಿ’ಯನೇ ಸೀಟಿಗೊರಗಿಸಿ ಕೂರುವ ಪ್ರಮೇಯ ಕೆಲವರಿಗಂತೂ ಇದೆ! 

ಬ್ರೇಕ್ ಹತ್ತು ನಿಮಿಷ! ಕೆಲವರಿಗಂತಿದು ಒಂದರ್ಧ ಘಂಟೆ ಎನ್ನುವ ವಿಸ್ತಾರ ಕಾಲಮಾನ, ಅಂಥವರ ಲೆಕ್ಕಾಚಾರವೇ ಬೇರೆ. ಬಸ್ಸಿನಿಂದ ಕೆಳಗಿಳಿಯಲು ಹತ್ತು, ಅದಕ್ಕಿದಕೆ ಹತ್ತು, ವಾಪಸ್ಸು ಬಸ್ಸು ಹತ್ತಲು ಹತ್ತು ಎಂಬಂತೆ ಪತ್ತೆಯಿಲ್ಲದಾಗುವ ಒಂದೆರಡು ಮಂದಿ ಪ್ರತೀ ಪಯಣದಲೂ ಬೆನ್ನು ಬಿಡದ ಬೇತಾಳನಂತೆ ಪ್ರತ್ಯಕ್ಷರಾಗಿ ಬಿಡುತ್ತಾರೆ. ಕೊನೆಗೆ ತಳುಕುತ್ತಾ ಬಳುಕುತ್ತಾ ಸೊಂಟದಿಂದ ಕೆಳಗಿಳಿದ ಜೀನ್ಸೋ, ಹಿಮ್ಮಡಿಯಿಂದ ಸಾಕಷ್ಟು ಮೇಲಿರುವ ಲೆಗ್ಗಿನ್ಸೋ, ಬರ್ಮುಡಾನೋ ತೊಟ್ಟು ಪಕ್ಕದಲಿನ ಕಾಫೀ ಡೇ ಅಂಗಳದಿಂದ ಮೆಲ್ಲ ಮೆಲ್ಲನೆ ಬಂದು ಫುಟ್ ಬೋರ್ಡನೇರಿ ಆಂಗ್ಲದಲ್ಲೇ “ಓಹ್ ನೋ.. ಸಾರಿ” ಎನ್ನುವಾಗ ಚಾಲಕ “ಗೇರ್” ಹಾಕುವ ಪರಿಯೇ ತಿಳಿಸುತ್ತದೆ, “ಎನಿಥಿಂಗ್ ಕ್ಯಾನ್ ಹ್ಯಾಪನ್ ಓವರ್ ಕಾಫೀ”!, ಡ್ರೈವರ್ ಕೊಡುವ ಎಕ್ಸಿಲರೇಟರ್ ಜೊತೆ “ಇಟ್ ಎಕ್ಸಿಲರೇಟ್ಸ್ ದ ಜರ್ನಿ” ಅಂಥಾ ಹೊಸ ಡೈಲಾಗನ್ನು ನಾನು ಸೇರಿಸಬೇಕಿಲ್ಲ!

ಪಕ್ಕದ ಸೀಟಿನವರ ಮೂಗಂತೂ ಗೊರಕೆಯ ಬಾನ್ಸುರಿವಾದನ ಶುರುವಿಟ್ಟುಕೊಂಡರೆ ಶಿವರಾತ್ರಿಯಲ್ಲಿ ಶಿವನನ್ನು ನೆನೆಯುತ್ತಾ ಕೂರುವಂತೆ ಜಾಗರಣೆ ಕೂರದೆ ಬೇರೆ ಗತಿಯೇ ಇಲ್ಲ! ಪ್ರಯಾಣದಲಿ ನಿದ್ದೆ ಮಾಡುವ ಅಭ್ಯಾಸವಿರದಿದ್ದರೆ, ತಹರೇವಾರಿ ಗೊರಕೆಗಳ ಬಗ್ಗೆ ಅಧ್ಯಯನವೊಂದನ್ನು ನಡೆಸಿ ಎಂಬಿಎ ಪ್ರಾಜೆಕ್ಟೋ ಅಥವಾ ಪಿ.ಹೆಚ್.ಡಿಯೋ ಮಾಡಿದರೆ ಯಾವ ವಿಶ್ವವಿದ್ಯಾನಿಲಯವೂ ಸಮ್ಮತಿ ಸೂಚಿಸದೇ ಇರದು ಎನ್ನುವುದು ನನ್ನ ಅಭಿಮತ. “ಬಸ್ಸಿನೊಳಗಣ ಬುಸುಗುಡುವ ಗೊರಕೆಗಳು ಮತ್ತು ಚಾಲನೆಯಲ್ಲಿರುವ ಬಸ್ ಇಂಜಿನ್ನಿನ ಸದ್ದು – ಒಂದು ತುಲನಾತ್ಮಕ ಅಧ್ಯಯನ” ಎನ್ನುವ ಪ್ರಬಂಧ ಶೀರ್ಷಿಕೆ ನಿಮಗೆ ಉಚಿತವಾಗಿ ನಾನು ನೀಡಬಲ್ಲೆ. 

ಇನ್ನು ನನ್ನದೇನಿದ್ದರೂ ಊರು ತಲುಪುವ ಉತ್ಸಾಹ. ನಿದ್ರೆಯೋ, ಅವನಿದ್ರೆಯೋ! ಡ್ರೈವರ್ ನಿದ್ರೆ ಮಾಡದಿದ್ದರೆ ಸಾಕೆನ್ನುತಾ ಸೀಟಿಗೊರಗಿ ಮಲಗುತ್ತೇನೆ ಸಂತಸದಿಂದ, ಗೊರಕೆ ಹೊಡೆಯುವೆನೋ ಇಲ್ಲವೋ ನನಗೇನೂ ಚಿಂತೆ ಇಲ್ಲ! 

ಅಂದಹಾಗೆ, ಇಷ್ಟರೊಳಗೆ ನಿಮಗೆ “ಗೊರಕೆ ಗೌರವ” ಡಾಕ್ಟರೇಟ್ ಸಿಕ್ಕಿದ್ದರೆ ನನ್ನನ್ನೆಬ್ಬಿಸಿ! ಅಲ್ಲಿಯ ತನಕ ನನ್ನ ಈ ಬಸ್ಸು…ರೈಯ್ಯಾಆಆಅ… ರೈಟ್ ಪೋಯಿ!

Advertisements

2 comments on “ಬಸ್ಸಿನೊಳಗಣ ಬುಸುಗುಡುವ ಗೊರಕೆಗಳು ಮತ್ತು ಚಾಲನೆಯಲ್ಲಿರುವ ಬಸ್ ಇಂಜಿನ್ನಿನ ಸದ್ದು – ಒಂದು ತುಲನಾತ್ಮಕ ಅಧ್ಯಯನ”!

 1. sharada.m ಹೇಳುತ್ತಾರೆ:

  ತಡವಾಗಿಯಾದರೂ, ಬೇಗ ಹೊರಡುತ್ತವೆ!
  ”ಲಿಂಗಬೇಧ ಆಸನ ಪ್ರಹಸನ”ವೊಂದು ಸಮಾಪ್ತಿ!
  ಬ್ರೇಕ್ ಹತ್ತು ನಿಮಿಷ! ಕೆಲವರಿಗಂತಿದು ಒಂದರ್ಧ ಘಂಟೆ ಎನ್ನುವ ವಿಸ್ತಾರ ಕಾಲಮಾನ
  ಇಂತಹ ಕೆಲ ವಾಕ್ಯಗಳ ಪ್ರಯೋಗ ಚೆನ್ನಾಗಿದೆ.
  ವಿಡಂಬನೆ ಚೆನ್ನಾಗಿದೆ..

 2. Palavalli Badarinath ಹೇಳುತ್ತಾರೆ:

  ಬದರಿ ನೀನೋ ಮಹಾನ್ ರೈಲ್ ಇಂಜನ್ ಎನ್ನುವ ಗೆಳೆಯರ ಮಾತು ಈಗ ನೆನಪಾಯಿತು. ಹ್ಹಹ್ಹಹ್ಹ…

ನಿಮ್ಮದೊಂದು ಉತ್ತರ

Fill in your details below or click an icon to log in:

WordPress.com Logo

You are commenting using your WordPress.com account. Log Out /  Change )

Google+ photo

You are commenting using your Google+ account. Log Out /  Change )

Twitter picture

You are commenting using your Twitter account. Log Out /  Change )

Facebook photo

You are commenting using your Facebook account. Log Out /  Change )

w

Connecting to %s