“ಕಲೆಯೆಂಬುದು ಕಡಲಂತೆ, ಅಲೆ ಅಲೆಯ ಹಿತವು ಮರಳಿ ಮರಳಿ ಮೆರೆಯುತಿರಲಿ”!

ನಿನ್ನೆ ಬೆಂಗಳೂರಿನಿಂದ ಹೊರಟು ಇಂದು ಮುಂಜಾನೆ ಮಂಗಳೂರಿನ ‘ಜ್ಯೋತಿ’ಯಲಿ ಬಸ್ಸಿಳಿದು ಸೇರಿದ್ದು ಮಿತ್ರ ಡಾ|ಕೇಶವರಾಜ್ ಅವರ ಮನೆಯನ್ನು. ಬಸ್ಸಿನಲ್ಲಿ ನಿದ್ದೆಯನ್ನು ಬಿಗಿದಪ್ಪಿದ್ದು ಸಾಕಿದ್ದರೂ, ಮತ್ತೆ ದೇಹಕ್ಕೆ ಕೊಂಚ ವಿಶ್ರಾಂತಿ ಬೇಕೆನಿಸಿ, ಸೂರ್ಯ ಮೂಡುವ ಮೊದಲೇ ಎದ್ದಿದ್ದು ಇಂದಿನ ಮೊದಲ ದಿನಚರಿ. ಆದರೆ ವಿಪರ್ಯಾಸವೆಂಬಂತೆ ನಾನು ಬೇಗ ಎದ್ದಿದ್ದಕ್ಕೋ ಏನೋ ಆಗಸದಲಿ ಸೂರ್ಯ ನಗಲೇ ಇಲ್ಲ. ಆತನೂ ರಸಿಕ. ಮೋಡಗಳ ಜೊತೆ ಮರೆಯಾಗಿದ್ದ. ನನಗೂ ಖುಷಿ ಕೊಂಚ, ಮಳೆಯಂತೆ ಬೆವರಿಳಿಯದಿವತ್ತು ಎಂಬ ಸಂತಸ.

ಹೊರಬಿದ್ದು ಮಿತ್ರ ಕೇಶವರಾಜ್ ಮತ್ತು ಸಚಿನ್ ನಡ್ಕರವರ ವೇದಂ ಆಯು ಆಸ್ಪತ್ರೆಯಲಿ ಕೊಂಚ ಕಾಲಹರಣದ ಕಾಲಕ್ಕೆ ಹೊಟ್ಟೆ ಉಪಹಾರಕ್ಕಾಗಿ ಕಾದು ಕುಳಿತಿತ್ತು. ಹೋಟೇಲ್ ಶ್ರೀನಿವಾಸದ ‘ಕಾಷೀಹಲ್ವ’ದ ಜೊತೆ ಟೋಮ್ಯಾಟೊ ಆಮ್ಲೇಟಿನ ರುಚಿ ನಾಲಗೆಗೆ. ಬರವಣಿಗೆಯ ಬೆನ್ನುಹಿಡಿದವರಿಗೆ ಪುಸ್ತಕ ಕೇಂದ್ರವೊಂದಕೆ ಭೇಟಿ ನೀಡುವ ಆವಶ್ಯಕತೆ ಜೊತೆಗಿತ್ತು. ಮಂಗಳೂರಿನ ಪ್ರಸಿದ್ಧ ಪುಸ್ತಕ ಮಾರಾಟ ಮಳಿಗೆ “ಸಾಹಿತ್ಯ ಕೇಂದ್ರ”ದಲ್ಲಿ ನಮ್ಮ ಕೆಲಸ ಮುಗಿದ ನಂತರದ ಗಮನವೆಲ್ಲ ಇಂದಿನ ಪ್ರಮುಖ ಕಾರ್ಯಕ್ರಮ “ಕರಾವಳಿ ಖಾರ್ಟೂನಿಸ್ಟ್-ವ್ಯಂಗ್ಯಚಿತ್ರ ಪ್ರದರ್ಶನ.

ಮುಂದಿನ ನಡೆ ಬಲ್ಲಾಳ್ ಭಾಗಿನ ಪ್ರಸಾದ್ ಆರ್ಟ್ ಗ್ಯಾಲರಿಯತ್ತ.

ಕರಾವಳಿ ಮೂಲದ ಫೇಸ್ಬುಕ್ ಮಿತ್ರ ಮುಂಬೈನ “ಚಿತ್ರಮಿತ್ರ” ಹಾಗೂ “ಹರಿಣಿ” ಎಂದೇ ಜನಜನಿತರಾಗಿರುವ ಹರೀಶ್ಚಂದ್ರ ಶೆಟ್ಟಿಯವರ ಮುಂದಾಳತ್ವದಲ್ಲಿ ಏರ್ಪಾಡುಗೊಂಡಿದ್ದ ಕರಾವಳಿ ಕಾರ್ಟೂನಿಸ್ಟ್ ಬಳಗದ “ಕರಾವಳಿಯ ೨೯ ವ್ಯಂಗ್ಯ ಚಿತ್ರ ಕಲಾವಿದರ ವ್ಯಂಗ್ಯಚಿತ್ರ ಪ್ರದರ್ಶನ ಕಾಣುವ ಭಾಗ್ಯ ಸಿಕ್ಕಿತು. ಉಡುಪಿ ಜಿಲ್ಲೆಯ ಕಾಪು ಬಳಿಯ ಎಲ್ಲೂರು ಮೂಲದವರಾದ ಚಿತ್ರಮಿತ್ರ ಎಂಬ ಖ್ಯಾತಿಯ ಪ್ರಶಾಂತ್ ಶೆಟ್ಟಿ, ಹುಟ್ಟಿದ್ದು ಕರಾವಳಿಯಲ್ಲೇ ಆದರೂ, ವಾಸ ಮುಂಬೈ ನಗರ. ಹುಟ್ಟೂರಿನಲೊಂದು ತನ್ನ ಕಲಾಪ್ರದರ್ಶನದ ಉದ್ದೇಶವಿಟ್ಟುಕೊಂಡು, ಅದರ ಜೊತೆಗೆ ಆ ಕಲೆಯಲ್ಲಿ ಆಸಕ್ತಿಯಿರುವ ಶಾಲಾಮಕ್ಕಳಿಗೆ ತನ್ನ ಕೈಚಳಕದ ಮೂಲಕ ಚಿತ್ರ ಕಲೆಯ ಆಸಕ್ತಿಯನು ಬೆಳೆಸುವ ಇರಾದೆ ಮನಮೆಚ್ಚುವಂತಾದ್ದು. ಪ್ರದರ್ಶನ ನಾಲ್ಕಕ್ಕಾದರೂ, ಮುಂಜಾನೆ ಹನ್ನೆರಡ ಸುಮಾರಿನ ನಮ್ಮ ಭೇಟಿಯಲ್ಲಿ ನಾನು ಕಂಡದ್ದು ಶ್ರೀಯುತ ಹರಿಣಿಯವರ ಉತ್ಸಾಹ. ಇಪ್ಪತ್ತೊಂಬತ್ತು ವ್ಯಂಗ್ಯಚಿತ್ರಕಾರರ ಚಿತ್ರಗಳನ್ನು ಒಪ್ಪಓರಣವಾಗಿ ಜೋಡಿಸುವ ಕಾಯಕದಲ್ಲಿ ನಿರತರಾಗಿದ್ದರು. ಮಂಗಳೂರಿನ ಎಂ.ಸಿ.ಎಫ್ ಕಾರ್ಖಾನೆಯಲ್ಲಿ ಉದ್ಯೋಗಿಯಾಗಿರುವ ಹರಿಣಿಯವರು ನಿನ್ನೆ ರಾತ್ರಿಪಾಳಿ ಮುಗಿಸಿ ಮುಂಜಾನೆಯಿಂದಲೇ ಉತ್ಸುಕತೆಯಿಂದ ಚಿತ್ರಗಳನ್ನು ಗೋಡೆ/ಬೋರ್ಡುಗಳಿಗೇರಿಸುತಿದ್ದ ಸುಸ್ತಿನಲ್ಲೂ “ಕಲಾಪೋಷಣೆ”ಯ ತೃಪ್ತಿ ಅವರ ಮೊಗದ ಮಂದಹಾಸದಲಿತ್ತು. ಆ ಕ್ಷಣಕೆ ಜೊತೆಯಾದ ಮತ್ತೊಬ್ಬ ಕಲಾಮೇರು ಕುಂದಾಪುರದ ಸತೀಶ್ ಆಚಾರ್ಯ. ಪ್ರಸ್ತುತ ವ್ಯಂಗ್ಯಚಿತ್ರ ಫ್ರೀ ಲ್ಯಾನ್ಸರ್ ಆಗಿರುವ ಆಚಾರ್ಯ, ಈ ಹಿಂದೆ ಮಿಡ್ ಡೇ ಮುಂತಾದ ಪತ್ರಿಕೆಗಳಲ್ಲಿ ಮನ್ನಣೆ ಗಳಿಸಿದವರು. ಸದ್ಯ ಸಿಫಿ ಮೊದಲ್ಗೊಂಡು ಅನೇಕ ಅಂತರ್ಜಾಲ ತಾಣ ಹಾಗೂ ಪತ್ರಿಕೆಗಳಲ್ಲೂ ತಮ್ಮ ಕಲಾಛಾಪು ಮೂಡಿಸಿದವರು. ಇವರೆಲ್ಲರನೂ ಭೇಟಿಯಾಗುವ ಅವಕಾಶ ನನ್ನ ಪಾಲಿಗಂತೂ ಫೇಸ್ಬುಕ್ ಕೊಡಮಾಡಿಸಿದ್ದು ನಿಜ.

ಸಂಜೆ ನಾಲ್ಕೂವರೆ. ಪ್ರದರ್ಶನದ ಆರಂಭದ ಸುಸಮಯವದು. ಮುಂಜಾನೆ ನಾನು ಕರೆಮಾಡಿದಾಗ ಉಡುಪಿಯ ತುಳುಕೂಟದ ಕಾರ್ಯಕ್ರಮವೊಂದರಲ್ಲಿ ಭಾಗವಹಿಸಲು ತೆರಳುತ್ತಿರುವೆ, ಖಂಡಿತವಾಗಿಯೂ ಪ್ರಸಾದ್ ಆರ್ಟ್ ಗ್ಯಾಲರಿಯಲ್ಲಿ ಸಂಜೆ ನಾಲ್ಕು ಗಂಟೆಗೆ ನಿಮ್ಮನ್ನು ಕೂಡಿಕೊಳ್ಳುತ್ತೇನೆ ಪುಷ್ಪಣ್ಣ ಎಂಬ ಮಾತಿನಂತೆ ಮನೋಹರ ಮುಗುಳ್ನಗೆಯೊಂದಿಗೆ ಹಾಜರಿದ್ದರವರು ನನ್ನ ಆತ್ಮೀಯರಾದ, ಉದಯವಾಣಿ ದಿನ ಪತ್ರಿಕೆಯ ಸುದ್ದಿವಿಭಾಗದ ಮುಖ್ಯಸ್ಥರಾದ ಶ್ರೀಯುತ ಮನೋಹರ್ ಪ್ರಸಾದ್. ಶ್ರೀಯುತರು ಈ ಪ್ರದರ್ಶನವನ್ನು ಉದ್ಘಾಟಿಸಿ ಕಲಾವಿದರ ಈ ಕಲಾಪೋಷಣೆಯ ಕಾರ್ಯವನ್ನು ಶ್ಲಾಘಿಸಿ, ಅನುಪಮವೆಂದರು. ಸಮಾಜದ ಕೊಂಕನು ಕೊಂಕಿನಲೇ ತಿದ್ದುವ ಕಲೆಯಿದು. ಲೋಕದ ಸುದ್ದಿಯನು ಕೆಲವೇ ರೇಖೆಗಳಲಿ ನುಡಿವ ಕಲೆಯಿದು.

ಕಾರ್ಯಕ್ರಮದ ಮತ್ತೊಂದು ಆಕರ್ಷಣೆಯೆಂದರೆ ವಿಕಲಚೇತನೆ ಸುಧಾರತ್ನರವರ ಹಾಜರಿ. ತನ್ನ ಅಂಗವೈಕಲ್ಯವೆಂಬುದು ತನ್ನಾಸಕ್ತಿಯ ಚಿತ್ರಕಲೆಯನ್ನು ಕಲಿಯುವುದರಲ್ಲಿ ಎಲ್ಲೂ ತೊಡಕುಂಟು ಮಾಡಿಲ್ಲ ಎಂಬ ಮಾತು ಎಲ್ಲರಿಗೂ ಸ್ಪೂರ್ತಿ. ಗಾಲಿಕುರ್ಚಿಯಲೇ ತನ್ನ ತಾಯಿಯೊಡಗೂಡಿ ಈ ಕಾರ್ಯಕ್ರಮಕೆ ಬಂದ ಇವರ ಜಲವರ್ಣಚಿತ್ರಗಳೂ ಮನಸೂರೆಗೊಂಡಿದ್ದಂತೂ ನಿಜ. ಇಂತಹ ಮೇರುಸ್ಪೂರ್ತಿಗಳನ್ನು ಮಾತನಾಡಿಸುವ ಅವಕಾಶ ಕೂಡ ಸಿಕ್ಕಿದ್ದು ಖುಷಿ ಕೊಟ್ಟಿತ್ತು. ತನ್ನ ಶಾಲಾ ದಿನಗಳಲ್ಲಿ ಗುರುವರ್ಯರೋರ್ವರಿಂದ ಪ್ರೋತ್ಸಾಹಿಸಲ್ಪಟ್ಟ ಇವರ ಕಲೆ ಮಂಗಳೂರಿನ ದಾಯ್ಜಿವರ್ಲ್ಡ್ ಡಾಟ್ ಕಾಮ್ ಕೊಡಮಾಡಿದ್ದ ಪ್ರಶಸ್ತಿಗೆ ಕೂಡ ಭಾಜನವಾಗಿದೆ.

ಒಟ್ಟಿನಲಿ ಇಂದಿದ್ದುದು ಉತ್ಸುಕ ನನ್ನೊಳಗೂ, ವ್ಯಂಗ್ಯಚಿತ್ರ ಕಲಾವಿದನಲ್ಲದಿದ್ದರೂ ಆ ಕಲೆಯ ರಸ, ರುಚಿಯನ್ನು ಸವಿವ ಸಿಹಿಘಳಿಗೆ. ಹತ್ತು ಹಲವು ಮಿತ್ರ ಬಳಗವನು ಮುಖತಃ ಭೇಟಿಯಾಗುವ ಸುಸಂದರ್ಭ. ಲೇಖಕಿ ಅನು ಪಾವಂಜೆ, ಮತ್ತೋರ್ವ ವ್ಯಂಗ್ಯ ಚಿತ್ರ ಕಲಾವಿದ ಜಾನ್ ಚಂದ್ರನ್, ಭರತನಾಟ್ಯಕೋವಿದೆ ಸೌಮ್ಯ ಸುಧೀಂದ್ರರಾವ್ ದಂಪತಿ, ಫೋಟೋಗ್ರಾಫರ್ ಮಿತ್ರ ಅಶೋಕ್ ಕುಮಾರ್, ಕಲಾವಿದರಾದ ಕೆ, ಲಕ್ಷ್ಮೀನಾರಾಯಣ್, ಗಣೇಶ್ ಸೋಮಾಯಾಜಿ, ಕಲಾಪೋಷಕ ಪ್ರಸಾದ್ ಆರ್ಟ್ ಗ್ಯಾಲರಿಯ ಕೋಟಿಪ್ರಸಾದ್ ಆಳ್ವ ಅವರ ಒಡನಾಟಗಳು ಬೆಂಗಳೂರಿನ ಹಬೆಗೆ ಬೆಂದ ಮನಕೆ ಕರಾವಳಿಯ ಮಳೆಯಲಿ ಮಿಂದ ಅನುಭವ ನೀಡಿದುವು.

ಕುರ್ಚಿಯಲಿ ನಗುತಾ ಕೂತು ಹರಿಣಿಯವರ ಕುಂಚದಲಿ ನಾನೂ ನಕ್ಕೇ ಹೀಗೆ, “ಕಲೆಯೆಂಬುದು ಕಡಲಂತೆ, ಅಲೆ ಅಲೆಯ ಹಿತವು ಮರಳಿ ಮರಳಿ ಮೆರೆಯುತಿರಲಿ”!

FUN

Advertisements

ನಿಮ್ಮದೊಂದು ಉತ್ತರ

Fill in your details below or click an icon to log in:

WordPress.com Logo

You are commenting using your WordPress.com account. Log Out /  Change )

Google+ photo

You are commenting using your Google+ account. Log Out /  Change )

Twitter picture

You are commenting using your Twitter account. Log Out /  Change )

Facebook photo

You are commenting using your Facebook account. Log Out /  Change )

w

Connecting to %s