ಮಕ್ಕಳಿರಲವ್ವ ಮನೆ ತುಂಬಾ. ಮನತುಂಬಾ!

ಮಕ್ಕಳಿರಲವ್ವ ಮನೆ ತುಂಬಾ ಅನ್ನುವ ಹಾರೈಕೆಗಳ ಮನಸುಗಳು ಎಲ್ಲೋ ಮೂಲೆಗೆ ಸರಿದು ನಿಂತು ಕಾಲವೇ ಆಗಿದೆ. ಇಂದಿನ ಸಾಫ್ಟ್-ವೇರ್ ಯುಗದಲ್ಲಿ ಮದುವೆಯಾದ ಐದಾರು ವರ್ಷದ ಬಳಿಕವೂ “ಮಗು”ವಿನ ಬಗ್ಗೆ ಏನಾದರೂ ಚಿಂತೆ ಮಾಡಿದ್ದೀರೋ ಅನ್ನುವ ಪ್ರಶ್ನೆ ಕೇಳುವ ನೈಜ ಪರಿಸ್ಥಿತಿ ಇಂದು ನಮ್ಮೆದುರಲ್ಲಿ. ಮಕ್ಕಳೆಂದರೆ ಸ್ವರ್ಗ. ಇನ್ನೂ ಮದುವೆಯಾಗದ ನನಗೂ ಮಕ್ಕಳ ಜೊತೆ ಕಾಲ ಕಳೆಯುವುದೆಂದರೆ ಅದು ಎಲ್ಲಿಲ್ಲದ ಸಂತಸ. ಯಾರ ಮನೆಗೆ ಹೋದರೂ ಅವರ ಮನೆಯಲೊಂದು ಮಗುವಿದ್ದರೆ ಅದನ್ನೆತ್ತಿಕೊಳ್ಳದೆ, ಮುದ್ದಾಗಿ ಅದರೊಡನೆ ನಗದಿದ್ದರೆ ನನ್ನ ಆ ಭೇಟಿಗೂ ಸಾರ್ಥಕ್ಯವಿಲ್ಲವೆನಿಸಿಬಿಡುತ್ತದೆ. ದೂರದ ಹುಬ್ಬಳ್ಳಿಗೆ ಹೋದಾಗಲೆಲ್ಲ ನನ್ನ ಹೆಚ್ಚಿನ ಸಮಯ ನಾನು ಕಳೆಯುವುದು ಮುದ್ದಿನ ಸೊಸೆ ಶೈನಿಯೊಡನೆ. ನಾನು ಜೊತೆಗಿರುವಾಗ ಅಮ್ಮನ ಮಡಿಲನ್ನೂ ಮರೆತು ನನ್ನೆದೆಯಲ್ಲೇ ನಿದ್ದೆ ಹೋಗುತ್ತಾಳೆ ಅವಳೂ. ನನಗೂ ಅದೊಂಥರ ಖುಷಿ. ಕಲ್ಮಶವಿಲ್ಲದ ಮನಸ್ಸಿನ ಜೊತೆ ಇದ್ದು ನನ್ನ ಮನದ ಕಲುಷಿತವೆಲ್ಲ ತೊಳೆದು ದೂರ ಸರಿದ ಅನುಭವ ಕೂಡ. 

ಇದೇ ಅನುಭವವೊಂದು ನನ್ನ ಪಾಲಿಗಿಂದು ದೊರಕಿದ್ದು ಮಿತ್ರನೊಬ್ಬನ ಮನೆಯಲ್ಲಿ. ಅದೂ ಈ ವಾಣಿಜ್ಯನಗರಿ ಬೆಂಗಳೂರಿನಲ್ಲಿ. ತಾನು ಸಾಫ್ಟ್-ವೇರ್ ಇಂಜಿನಿಯರ್ ಎಂಬ ಹಮ್ಮಿಲ್ಲದೇ, ಸಿಗುವ ಸಂಬಳ ತಿಂಗಳಿಗೆ ಲಕ್ಷದ ಮೇಲಿದ್ದಾಗ್ಯೂ, ತಾನು ಬದುಕಲೊಂದು ಕೋಟಿ ಮೌಲ್ಯದ ಅಪಾರ್ಟ್ಮೆಂಟ್ ಬೇಕೆನ್ನುವ ಅಭಿಲಾಷೆಯನ್ನೋ, ಸ್ವಾರ್ಥವನ್ನೋ ಬದಿಗೊತ್ತಿ ಆತ ಬದುಕುತ್ತಿರುವುದು ಒಂದೈದು ಮಕ್ಕಳೊಡನೆ. ಮಕ್ಕಳು ತನ್ನ ರಕ್ತವನ್ನು ಹಂಚಿಕೊಂಡಿಲ್ಲದಿದ್ದರೂ, ತಾನು ಅವುಗಳ ಉಸಿರಿಗೊಂದಿಷ್ಟು ಬೆನ್ನೆಲುಬಾಗಿ ನಿಂತಿದ್ದೇನೆ ಎನ್ನುವ “ಮುಗ್ಧ” ಮನಸ್ಸಿನವರು ಆತ. ತನ್ನ ಬಿಡುವಿನ ಸಮಯದಲ್ಲೆಲ್ಲ ತಾನು ಸಾಕುವ ಮಕ್ಕಳೊಡನೆ ತಾನೂ ಮಗುವಾಗುವ ಆತನನು ನಾನಿಂದು ಕಂಡಾಗ ಯಾವ ತಂದೆ, ತಾಯಿಗೂ ಕಡಿಮೆಯಿರದ ಒಲವಲ್ಲಿ ತುಂಬಿತುಳುಕುತಿತ್ತು. 

ನಾನಿಂದಲ್ಲಿ ಕಾಲಿಟ್ಟಾಗ ಅನಾಥಾಶ್ರಮ ಎಂದು ನನಗೆ ಆ ಮನೆಯನ್ನು ಕರೆಯುವ ಮನಸ್ಸಾಗಲೇ ಇಲ್ಲ. ಅದೂ ತುಂಬಿದ ಮನೆಯಂತಿತ್ತು. ಕೆಲಸದವರನ್ನು ಬಿಟ್ಟರೇ ಬೇರೆ ಯಾವ ಹೆಂಗರುಳಿನ ಕುರುಹೂ ಅಲ್ಲಿರಲಿಲ್ಲ. ಕೌತುಕದಿಂದ ನನ್ನ ಅನುಮಾನವನ್ನು ಪ್ರಶ್ನೆಯ ರೂಪದಲ್ಲಿ ನನ್ನ ಮಿತ್ರರಿಗಿಟ್ಟಾಗ ಆತನೊಳಗಡಗಿದ್ದ ನೋವಿನ ಎಳೆಯೊಂದರ ಪರಿಚಯ ನನಗಾಗಿತ್ತು. ಮೋಹದ ಬಲೆಯಲ್ಲಿ ಮುಳುಗಿ ಪ್ರೇಮಿಸಿ ಮದುವೆಯಾದ ಮೂರೇ ತಿಂಗಳಲ್ಲಿ ಡೈವೋರ್ಸ್ ಪಡೆದ ‘ಕೈಹಿಡಿದವಳೆನ್ನುವವಳು’ ಬಾಳ ದಾರಿಯಿಂದ ಸರಿದು ನಿಂತ ಮೇಲೆ ತಾನು ಆರಿಸಿಕೊಂಡಿದ್ದು ಈ ನಿರ್ಧಾರವನ್ನೆನ್ನುವಾಗ ಆತನ ಕಣ್ಣಂಚಿನಲೂ ಕಿರು ಹನಿಯೊಂದು ಮೂಡದಿರಲಿಲ್ಲ. ಆ ನೋವ ನಡುವಿನಲೂ ತನಗೆ ಮಕ್ಕಳಿಲ್ಲವೆಂಬ ಕೊರಗು ಎಲ್ಲೂ ಕಾಡಿಲ್ಲ, ಕೈಹಿಡಿದವಳಿಲ್ಲ ಎನ್ನುವ ಮೋಹದ ಎಳೆಯ ಕೊರತೆಯೂ ಎಲ್ಲೂ ಕಂಡಿಲ್ಲ ಎನ್ನುವ “ಸಂತುಷ್ಟಿ”ದಾಯಕ ಜೀವನ ನಡೆಸುವ ಆತನ ಮೇರು ಮನಸ್ಸಿನ ಈ ಪ್ರಯತ್ನಕ್ಕೆ ನನ್ನ ಮನಸ್ಸೂ ಕರಗದಿರಲಿಲ್ಲ. ಮಕ್ಕಳೊಡಗೂಡಿ ಒಂದಷ್ಟು ನಲಿದು ಕುಣಿದು, ಅವರೊಡನೆ ಸ್ಲೇಟು ಹಿಡಿದು ಒಂದಿಷ್ಟು, ಬರೆದು ಓದಿ ಮರಳಿದೆ ಮನೆಗೆ. 

ಮತ್ತೇ ನೆನಪಾಗುತ್ತಿದೆ ಮಕ್ಕಳಿರಲವ್ವ ಮನೆ ತುಂಬಾ. ಮನತುಂಬಾ!

Advertisements

2 comments on “ಮಕ್ಕಳಿರಲವ್ವ ಮನೆ ತುಂಬಾ. ಮನತುಂಬಾ!

  1. ಬದರಿನಾಥ ಪಳವಳ್ಳಿಯ ಕವನಗಳು ಹೇಳುತ್ತಾರೆ:

    ತುಂಬಾ ಮನಸ್ಸಿಗೆ ತಟ್ಟುವ ಬರಹ ಸಾರ್. ಅನಾಥಾಶ್ರಮಕ್ಕೆ ಭೇಟಿ ಕೊಟ್ಟು, ಮಕ್ಕಳ ಕೂಡ ನಲಿವು ಹಂಚಿಕೊಂಡ ನಿಮ್ಮ ನಿರ್ಮಲ ಮನಸಿಗೆ ಶರಣು.

  2. suguna mahesh ಹೇಳುತ್ತಾರೆ:

    ನಿಮ್ಮ ಸ್ನೇಹಿತರಿಗೆ ನಾವು ಶರಣು…!!! ಮಕ್ಕಳು ಅನಾಥರಲ್ಲ ನಿಮ್ಮ ಸ್ನೇಹಿತರೇ ಅವರ ತಂದೆ-ತಾಯಿ ಎರಡೂ… ಮದುವೆಯೊಂದೇ ಅಲ್ಲದೇ ಜೀವನದ ಮತ್ತೊಂದು ದಾರಿ ಇದೆ ಎಂದು ತೋರಿಸಿಕೊಟ್ಟಿದ್ದಾರೆ ಇವರು ಎಲ್ಲರಿಗೂ ಮಾದರಿ… ಶುಭವಾಗಲಿ ಅವರ ಮನಸ್ಸು ಮನೆ ಸದಾ ಹಸಿರಾಗಿರಲಿ… ನೋವು ದೂರಾಗಲಿ ನಗು ಆವರಿಸಲಿ ಎಂದು ಆಶಿಸುತ್ತೇನೆ.
    ಸಾಧ್ಯವಾದರೆ ಆ ಸ್ನೇಹಿತರ ಪೋಟೋ ಹಂಚಿಕೊಳ್ಳಲು ಸಾಧ್ಯವಾದರೆ ನೋಡಿ.

ನಿಮ್ಮದೊಂದು ಉತ್ತರ

Fill in your details below or click an icon to log in:

WordPress.com Logo

You are commenting using your WordPress.com account. Log Out /  Change )

Google+ photo

You are commenting using your Google+ account. Log Out /  Change )

Twitter picture

You are commenting using your Twitter account. Log Out /  Change )

Facebook photo

You are commenting using your Facebook account. Log Out /  Change )

w

Connecting to %s