ನಡೆಯಲೊಂದನುಭವವು!

ಪ್ರಯಾಣವೆನ್ನುವುದು ಪ್ರತೀಸಲವೂ ಸುಖಕರವಾಗಿರಬೇಕು ಎನ್ನುವ ಆಶಯ ನನ್ನ ಮನದಾಳದೊಳಗಿಟ್ಟುಕೊಂಡು, ನಗು ಮೊಗದಲ್ಲೇ ಹೊರಟು ನಿಲ್ಲುತ್ತೇನೆ ಹೆಚ್ಚಿನ ಸಂದರ್ಭಗಳಲ್ಲಿ. ಇಂದು ಮುಂಜಾನೆ ಏಳಕ್ಕೆ ಬೆಂಗಳೂರಿನ ಮೈಸೂರು ರಸ್ತೆ ಬಸ್ ತಂಗುದಾಣದಿಂದ ಮಡಿಕೇರಿಗೆ ಐರಾವತವೆಂಬ ಅಂಬಾರಿ ಏರಿ ಕೂತಾಗಲೂ ಆ ನಗು ಮೊಗವೇ ಇದ್ದರೂ ನಾನು ಮಡಿಕೇರಿಯತ್ತ ಹೊರಟ ಉದ್ದೇಶದ ತೃಪ್ತಿ ನನ್ನ ಮನದೊಳಗಿನ್ನಷ್ಟು ಮಂದಹಾಸ ತಂದಿರಿಸಿತ್ತು. ಬಸ್ಸು ಹೊರಟ್ಟಿದ್ದಾಯ್ತು. ರಾಮನಗರ, ಮದ್ದೂರು, ಮಂಡ್ಯ, ಶ್ರೀರಂಗಪಟ್ಟಣ, ಮೈಸೂರು ತಲುಪುವ ತನಕವೂ ಮುದನೀಡಿದ್ದು ಬಸ್ಸಿನಲ್ಲಿ ಪ್ರದರ್ಶಿಸಲ್ಪಟ್ಟ ದಿಗಂತ್ ಅಭಿನಯದ ‘ಮನಸಾರೆ, ಚಿತ್ರ.

 ತದನಂತರ ನಿದ್ದೆ ಮಾಡುವ ಉತ್ಕಟ ಹಂಬಲವಿದ್ದರೂ ಹಲವು ಮೊಬೈಲ್ ಕರೆ, ತಾಕಲಾಟಗಳ ಮಧ್ಯೆಯೂ ಕಣ್ಣುಗಳ ಮುಖಾಂತರ ನನ್ನ ಓದುಗ ಮನದಾಳಕ್ಕಿಳಿದದ್ದು ಉಷಾ ನವರತ್ನರಾಮ್ ಅವರ ‘ನಿಕ್ಷೇಪ ಎನ್ನುವ ಸಾಮಾಜಿಕ ಕಾದಂಬರಿ. ಭಗ್ನ ಅವಶೇಷವಾಗಿ ಹೋದ ಒಂದು ವೈಭವದ, ಶ್ರೀಮಂತಿಕೆಯ ರಹಸ್ಯದ ಹಿಂದಿನ ಸತ್ಯ, ಸುಳ್ಳುಗಳ ನಡುವೆ, ಮತ್ತದರ ಸುತ್ತಮುತ್ತಲಿನ ಪರಿಸರ, ಜನಜೀವನದ ಮನಸ್ಥಿತಿ ಸುತ್ತ ಹೆಣೆದ ಕತೆಯದು. ಆಸಕ್ತಿದಾಯಕವಾಗಿತ್ತು ದಾರಿಯುದ್ದಕೂ. ಇನ್ನೇನು ಈ ಕಾದಂಬರಿ ಮುಗಿಸಬೇಕೆಂದಾಗ ಬಸ್ಸು ಕುಶಾಲನಗರದ ತಂಗುದಾಣದಲ್ಲಿತ್ತು.

ಅಲ್ಲೊಂದು ಅಚ್ಚರಿ, ಸರಿಸುಮಾರು ಐವತ್ತರ ಗಡಿದಾಟಿದ ವ್ಯಕ್ತಿ, ನಮ್ಮ ಬಸ್ಸಿನೊಳಗೆ ಬಂದು ಏನೋ ಮನವಿ ಮಾಡುತ್ತಿದ್ದರು. ವ್ಯಕ್ತಿಯ ಬಟ್ಟೆಬರೆಗಳಲ್ಲಿ ಶಿಸ್ತು ಕಂಡರೆ ಭಿಕ್ಷುಕರಲ್ಲವೆನುವ ಪ್ರಮಾಣಪತ್ರವನ್ನು ಮನಸ್ಸು ನೀಡಿಯಾಗಿತ್ತು, ಮಾತು ಕೇಳಿಸದಿದ್ದರೂ ಮುಖಭಾವವನ್ನು ಕಂಡರೆ, ಆ ಮೊಗದಲ್ಲಿ ಚಿಂತೆಯ ಲಕ್ಷಣ ಮನೆಮಾಡಿದ್ದು ಸ್ಪಷ್ಟ. ಸರಿ ವಿಚಾರಿಸಿದರೆ ದೂರದ ಬೆಳಗಾವಿಯಿಂದ ಬಂದು ಇಲ್ಲಿ ತಮ್ಮೆಲ್ಲಾ ಹಣ, ಇತರೇ ವಸ್ತುಗಳನ್ನು ಕಳೆದುಕೊಂಡು ವಾಪಾಸು ಹೋಗಲಾಗದೇ ಚಡಪಡಿಸುತ್ತಿದ್ದಾರೆಂಬ ಮಾಹಿತಿ ಕೊಟ್ಟ ವ್ಯಕ್ತಿಗೆ, ಬಸ್ಸಿನಲ್ಲಿದ್ದ ಸುಮಾರು ಹದಿನೈದು ಮಂದಿ ಇಪ್ಪತ್ತು ರೂಪಾಯಿಗಳನ್ನಿತ್ತೆವು. ಈ ಘಟನೆಯ ಸತ್ಯಾಸತ್ಯತೆಯನ್ನು ಪರಿಶೀಲಿಸುವ ಅವಶ್ಯಕತೆ ಆ ಕ್ಷಣದಲ್ಲಿ ನಗಣ್ಯವೆನಿಸಿ, ಆ ವ್ಯಕ್ತಿಯ ಮೊಗದಲ್ಲಿ ಕಂಡ ಕಿರು ಧನ್ಯಭಾವವಷ್ಟೇ ನಮ್ಮಲ್ಲೂ ಸಂತೃಪ್ತಿಯ ನಗೆ ಚೆಲ್ಲಿತ್ತು!

ತಲುಪಿದ್ದಾಯ್ತು ಕೊಡಗಿನ ಹೃದಯಭಾಗವನ್ನು. ಮಡಿಕೇರಿ ಪಟ್ಟಣವನ್ನು. ಹೊಸಪಯಣದಲೊಂದು ಹೊಸ ಅನುಭವವನ್ನು ಹೊತ್ತು ದಿನದ ಮಟ್ಟಿಗೆ ಉಳಿದುಕೊಳ್ಳಲೊಂದು ಸೂರನರಸುತ್ತಾ ಲಾಡ್ಜ್ ಕೋಣೆಯೊಂದರಲ್ಲಿ ಮುಖಕ್ಕೊಂದಿಷ್ಟು ತಣ್ಣೀರೆರಚಿಕೊಂಡದ್ದಾಯ್ತೀಗ. ಇನ್ನು ಹೊಟ್ಟೆ ಕೇಳೀತೆ. ಬೆಳಗಿನಲ್ಲಿಳಿಸಿದ್ದ ಪೊಂಗಲ್ಲೆಲ್ಲಿ ಮಂಗಮಾಯವಾಗಿತ್ತೋ ನಾನರಿಯೆ. ತಣ್ಣಗಾಗಿಸಬೇಕುದರವನು. ಮೆಲ್ಲನುಂಡು ಮುಂದಿನ ಗುರಿಯತ್ತ ನಡೆ.

 ಆ ನಡೆಯಲೂ ಒಂದಿಷ್ಟನುಭವಗಳೆನೆನಗಾಗಬಹುದೆನುವಾಕಾಂಕ್ಷೆಯಲೆದುರು ನೋಡುವೆ!

Advertisements

ನಿಮ್ಮದೊಂದು ಉತ್ತರ

Fill in your details below or click an icon to log in:

WordPress.com Logo

You are commenting using your WordPress.com account. Log Out /  Change )

Google+ photo

You are commenting using your Google+ account. Log Out /  Change )

Twitter picture

You are commenting using your Twitter account. Log Out /  Change )

Facebook photo

You are commenting using your Facebook account. Log Out /  Change )

w

Connecting to %s