ಬ್ಯಾಚುಲರ್ ಮನದ ಕೋಣೆಗಳಲ್ಲಿ!

ಬ್ರಹ್ಮಚಾರಿ ನಾನು. ಹಾಗಂದ ಮಾತ್ರಕ್ಕೆ ಹಾಗೆಯೇ ಉಳಿಯುತ್ತೇನೆನ್ನುವ ಊಹೆ ಮಾಡದಿರಿ. ಮದುವೆಯಾಗುವ ಯೋಜನೆಗೆ ರೂಪುರೇಷೆ ಕೊಡಲು ಶುರುಮಾಡಿ ‘ಲೋಕಪಾಲ’ ಮಸೂದೆಯಂತೆ ಹಲವು ವರ್ಷಗಳೇ ಸಂದಿವೆ. ಇರಲಿ ಬಿಡಿ. ಮುಂದೊಂದು ದಿನ ಅತಿ ಸನಿಹದಲ್ಲಿ ಅಂಕಿತ ಬೀಳಬಹುದು ಎನ್ನುವ ಆಶಾವಾದ ನನ್ನಲ್ಲಿದೆ. ಇನ್ನೂ ಆಗಲಿಲ್ಲವಲ್ಲ ಎನ್ನುವ ಚಿಂತೆ ಕೂಡ ನನ್ನ ಬಳಿ ಸುಳಿದಿಲ್ಲ. ಅದಕ್ಕೋಸ್ಕರ ಉಪವಾಸ ಕೂತವನೂ ಅಲ್ಲ.ಉಪವಾಸ ಕೂರಲು ಸೂಕ್ತ ಮೈದಾನ ಸಿಕ್ಕದಿರುವುದೂ ಕಾರಣ ಎನಬಲ್ಲೆ. ಮೈದಾನವಿರದಿದ್ದರೇನಂತೆ ಮನೆಯಲ್ಲೇ ಕೂರಬಹುದಲ್ಲವೆಂದರೆ ಹೊಟ್ಟೆಪಾಡಿಗೋಸ್ಕರ ಬಂದು ಈ ಬೆಂಗಳೂರಿನ ನನ್ನ ಪುಟ್ಟ ಮನೆಯಲ್ಲಿರುವುದು ನಾನೊಬ್ಬನೇ! ಬೇಡಿಕೆ ಕೇಳುವವರಾರು?

ಒಬ್ಬನೇ ಇದ್ದರೆ ಅದು ಮನೆಯೇ? ಎನ್ನುವ ಪ್ರಶ್ನೆ ನಿಮಗೆ ಉದ್ಭವವಾಯಿತೋ ಇಲ್ಲವೋ ಗೊತ್ತಿಲ್ಲ. ಆಗಿರಬಹುದೆಂದುಕೊಂಡೇ ನಾನು ಮಾತು ಮುಂದುವರಿಸುತ್ತಿದ್ದೇನೆ. ಸಾಮಾನ್ಯವಾಗಿ ಬೆಂದಕಾಳೂರಿನಲ್ಲಿ ಒಬ್ಬನೇ ಮನೆ ಬಾಡಿಗೆಗೆ ಪಡೆದುಕೊಂಡು ವಾಸ ಮಾಡುತ್ತಿದ್ದರೆ ಅದು ಮನೆಯಾಗುವುದಿಲ್ಲ. ಬ್ಯಾಚುಲರ್ ಭಾಷೆಯಲ್ಲಿ ಅದು ‘ರೂಮು’! ಮೂಗು ಮುರಿಯದಿರಿ ಏನನ್ನು ಕೊರೆಯಲು ಹೊರಟಿದ್ದಾನೆ ಈತನೆಂದು. ನಾನು ಈ ‘ರೂಮು’ಗಳ ಬಗ್ಗೆಯೇ ಹೇಳಬೇಕೆಂದುಕೊಂಡಿದ್ದು ಕಳೆದ ತಿಂಗಳು ನನ್ನ ಗೆಳೆಯನೊಬ್ಬನ ‘ರೂಮು’ ಎಂಬ ‘ಅರಮನೆ’ಗೆ ಭೇಟಿಕೊಟ್ಟಾಗ!

ಬಾಗಿಲಲ್ಲಿ “ಮೂಗುಮುಚ್ಚಿಕೊಂಡು ಒಳಗೆ ಬನ್ನಿ” ಎಂಬ ಬೋರ್ಡಿರದಿದ್ದರೂ, ನನ್ನ ಮನಸು ಹೊಸ್ತಿಲ ಬಾಗಿಲ ಬಳಿ ಕಾಲಿಗಂಟಿದ ‘ಚ್ಯುಯಿಂಗ್-ಗಮ್ಮಿನ’ ರಂಗೋಲಿ ಸ್ಪರ್ಶಕ್ಕೆ ಬಲಗಾಲಿಟ್ಟು ಒಳಕ್ಕೆ ಧಾವಿಸುವ ನಿರ್ಧಾರ ಮಾಡಿತ್ತು. ಇರಲಿ. ಈ ಮನಸ್ಸೇ ಹಾಗೆ. ಎಲ್ಲವನ್ನೂ ಕೆಲವೊಮ್ಮೆ ಹೊರಹಾಕುವುದಿಲ್ಲ. ಮೂವತ್ತು ದಿನವಾದರೂ ಹೊರಚೆಲ್ಲದ ಕಸದಬುಟ್ಟಿಯಲಿ ಹುಳಗಳು ಹಾಡುಹೇಳಲು ಶುರುಮಾಡದ ಹೊರತು ಆ ಕಸವನ್ನು ಹೊರಹಾಕಲು ಹೇಗೆ ಮನಸ್ಸಾಗುವುದಿಲ್ಲವೋ ಹಾಗೆ.

ಬಹುಷಃ ಈಗ ಆ ವಾಸನೆ ನಿಮ್ಮ ಮೂಗಿಗೂ ಬಡಿದಿರಬೇಕೆಂದು ಕೊಳ್ಳುತ್ತೇನೆ. ವಾಸನೆಯೆಂದರೆ ಅದೊಂದು ಭಾವ. ಈ ಭಾವದಲ್ಲಿ ಎರಡು ವಿಧ. ಸುವಾಸನೆ ಮತ್ತು ದುರ್ವಾಸನೆ. ಎರಡನೆಯ ವಿಧದ ಭಾವವೆಂದರೆ ಬ್ಯಾಚುಲರ್ ಮನಗಳಿಗೆ ಬಹು ಹತ್ತಿರವೇನೋ. ಆರು ವರ್ಷದವಾದರೂ ಹೊಸತರಂತೆ ಇದ್ದ ನನ್ನ ಗೆಳೆಯ ಮಲಗುವ ಹಾಸಿಗೆಯ ಹತ್ತಿ ನನ್ನ ಮನವನ್ನೊಮ್ಮೆ ಕರ್ನಾಟಕದ ಲಂಡನ್ ಎಂದೇ ಪ್ರಸಿದ್ಧವಾದ ದಾವಣಗೆರೆಯ ಹತ್ತಿ ಮಂಡಿಗಳನ್ನು ನೆನಪಿಸತೊಡಗಿತ್ತು ನನಗೆ!

ಕೂತೆ. ಗೋಡೆಗಂಟಿದ ಸ್ಟೂಲೊಂದು ನನ್ನ ಕಡುನೀಲಿ ಬಣ್ಣದ ಜೀನ್ಸ್ ಪ್ಯಾಂಟಿನ ಹಿಂದೆ ಮೂರಿಂಚು ಧೂಳು ಮೆತ್ತಿಸಿದ್ದು ನನಗರಿವಾದದ್ದು ಕೂತವನಿಗೆ ಏನೋ ಚುಚ್ಚಿದಂತಾಗಿ ಎಡಗೈ ಕಿರುಬೆರಳಲ್ಲಿ ನನ್ನದೇ ದೇಹದ ಭಾಗವೊಂದನ್ನು ನಾನು ಯಾರಿಗೂ ತಿಳಿಯದಂತೆ ಮೆಲ್ಲಗೆ ಅಮುಕಿಕೊಂಡಾಗ! ಆ ಸುಖವೇನು ಬಲ್ಲಿರೇ? ಬಣ್ಣಿಸಲಸಾಧ್ಯ! ಮೆತ್ತಿಸಿಕೊಂಡವನೇ ಬಲ್ಲ!

ಅಲ್ಪಸ್ವಲ್ಪ ಕವಿತೆ ಕಾವ್ಯಗಳ ಅರಿವಿರುವ ನನಗೆ ನನ್ನ ಗೆಳೆಯನ ಮನೆಯ ಮೂಲೆಯಲ್ಲಿ ಬಲೆಕಟ್ಟಿಕೊಂಡ ಜೇಡಗಳೇ ಕ್ಷಣಕೆ ಪ್ರತಿಮೆಯಾಗುವಂತೆ ಭಾಸವಾದುವು. ಆತ ಪರೋಪಕಾರಿಯೆನಿಸಿದ್ದಲ್ಲದೇ ಜೇಡಗಳ ವಾಸವಿಲ್ಲದ ಬಲೆಗಳೂ ನನ್ನ ಕಣ್ಣಿಗೆ ಬಿದ್ದು ಅವನ ಮನೆಯೇ ಒಂದು ಅದ್ಭುತ ಸಂಗ್ರಹಾಲಯದಂತೆ ನನಗನಿಸಿತು!

ನನ್ನ ಕವಿಮನ ಹನಿರಾಗ ಹೊರಡಿಸಲು ಇನ್ನೇನು ಬೇಕು?
ಹುಡುಗೀ,
ನಿನ್ನ ನೆನಪುಗಳು
ಜೇಡರ ಬಲೆಯಂತೆ
ನೇತು ಬೀಳುತ್ತವೆ
ನನ್ನ ಮನದ ಗೋಡೆಗಳಿಗೆ!

ಹುಡುಗೀ,
ನೆಲಕ್ಕಂಟಿದ ಧೂಳುಗಳಂತೆ
ಅಂದು ನೀನಿತ್ತ ಮುತ್ತುಗಳು
ಮತ್ತೆ ಮತ್ತೇ ಮುಟ್ಟಿ
ಮೆತ್ತಿಸಿಕೊಳ್ಳುತ್ತೇನೆ ನನ್ನ
ಮನವೆಂಬ ಕಿರುಬೆರಳಿಗೆ!

ಕವಿಸಮಯ ಅನ್ನೋದು ಇದೇ ಇರಬೇಕು. ಮನೆಯ ಮುಂದೆ ನೀರು ಸೋಕಿಸದೆ ಮೂರು ವರ್ಷ ಕಳೆದರೂ, ರಂಗೋಲಿಯ ಕಾಣದ ಹೊಸ್ತಿಲು ಅಳುತ್ತಿದ್ದರೂ, ಮೂರಿಂಚು ಧೂಳಿನಲಿ ತನ್ನ ಕಿರುಬೆರಳು ಮಣ್ಣಾದರೂ ತನ್ನ ಗೆಳತಿಯ ನೆನಪುಗಳನ್ನು ಕವಿಮನ ಬಳಸಿಕೊಳ್ಳುತ್ತದೆ!

ಇನ್ನೇನು ಬೇಕೆನದಿರಿ, ಮೂಲೆಯಲಿ ತಲೆ ಮೇಲಾಗಿ ನಿಂತ ಪೊರಕೆಯೊಂದು ನನ್ನನ್ನೆ ಅಣಕಿಸಿದಂತಾಗಿ ಹೀಗೂ ಊಹಿಸಿಕೊಂಡೆ;

ಹುಡುಗೀ,
ಕಸಗಳು ಹೀಗೆ ಬಿದ್ದಿರಲಿ
ಬಿದ್ದಿರಲಿ ಎನ್ನ ಕಾಲಡಿ
ಗುಡಿಸಲಾರೆ ಭಯವಿದೆಯೆನಗೆ
ನೀನಂದಿತ್ತ ಹೆಜ್ಜೆಗಳು
ಕೊಚ್ಚಿ ಹೋದಾವು!

ಇನ್ನೂ ಹೆಚ್ಚಿಗೆ ಊಹಿಸಬೇಕೆನುವ ಮನಸ್ಸಾದರೂ ತಟ್ಟನೆ ಗೆಳೆಯನ ಶೂ ಸ್ಟ್ಯಾಂಡಿನಲ್ಲಿದ್ದ ಆರು ವರ್ಷ ಹಳೆಯ ಸಾಕ್ಸೊಂದು ಮೆತ್ತಗೆ ನನ್ನ ಹನಿಗಳನ್ನು ಆಸ್ವಾದಿಸತೊಡಗಿದಂತೆನಿಸಿತು.

ಹನ್ನೆರಡು ಸಾವಿರ ಪಾವತಿಸಿದ ಜಿಮ್-ನಲ್ಲಿ ಸಿದ್ಧಗೊಂಡ ತೋಳುಗಳಲ್ಲಿ ಆತ್ಮೀಯ ಗೆಳೆಯ ಆಲಿಂಗಿಸಿದಾಗ, ನಾನೂ ‘ಕಾರ್ಪೋರೇಟ್’ ಶೈಲಿಯಲ್ಲಿ ‘ಅದ್ದೂರಿ’ ನಮನಗಳನ್ನು ಸಲ್ಲಿಸಿ ಅಲ್ಲಿಂದ ಮೃದುಮನಸ್ಸಿನೊಡನೆ ಕಲ್ಪನೆಯ ಗೆಳತಿಯನ್ನು ಮತ್ತಷ್ಟು ನೆನೆಸಿಕೊಂಡು ಪುಟ್ಟ ನ್ಯಾನೋದಲ್ಲಿ ನನ್ನ ಮುದ್ದಿನ ‘ರೂಮು’, ಕ್ಷಮಿಸಿ ರೂಮಲ್ಲ, “ಮನೆ”ಕಡೆ ಹೆಮ್ಮೆಯಿಂದ ಸಾಗಿದೆ ನಾನು ಮನೆ ಮುಂದೆ ಹಬ್ಬದ ದಿನ ಹಾಕುವ ರಂಗೋಲಿಯನು ನೆನೆಯುತ್ತಾ!

 

 

 

Advertisements

ಮೃಷ್ಟಾನ್ನ!

ನನ್ನ ಜೊತೆ ಕಚೇರಿ ಕೆಲಸ ಮಾಡುವುದಷ್ಟಕೇ ಸೀಮಿತ ಬಾಳಿನ ಈ ಕೆಲವು ಬಂಧಗಳು.

ಆಕೆ ಯಾರೋ…!

ಅವಳ ಅನಾರೋಗ್ಯ ಇಂದು ದಿಗಿಲುಗೆಡಿಸಿದಾಗ ನನ್ನ ನ್ಯಾನೋ ಕಾರಿನ ಪುಟ್ಟಚಕ್ರಗಳು ತಿರುಗಿ ನಿಂತಿದ್ದು ಮಾರತ್ತಹಳ್ಳಿಯ ಒಂದು ಆಸ್ಪತ್ರೆಯ ಬಾಗಿಲ ಬಳಿ!

ವೈದ್ಯರ ಶುಶ್ರೂಷೆಗಳ ಬಳಿಕ ಆಸ್ಪತ್ರೆಯ ಕೊಠಡಿಗಳಲ್ಲಿ ಆರೈಕೆ, ಎಳನೀರ ಸೇವೆಗೈದು ಅವಳನ್ನು ಮನೆತನಕ ಬಿಟ್ಟು ಬಂದವಗೆ ಹೊಟ್ಟೆ ತಾಳ ಹಾಕುತ್ತಿತ್ತು ಮುಂಜಾನೆ ಎಂಟಕ್ಕೆ ತಿಂದ ಪಾಲಕ್ ಪನೀರ್ ದೋಸೆ ನೀರಾಗಿ ಕರಗಿತ್ತೇನೋ ನನ್ನ ಹೊಟ್ಟೆಯಲಿ!

ಆ ಹೆಣ್ಣು ಜೀವಕೆ ಸಂಕಷ್ಟದಲಿ ನೆರವಾದೆನಲ್ಲ ಎನ್ನುವ ಮನದ ತೃಪ್ತಿಯಲಿ ಬರಿಯ ಮೊಸರು ಬೆರೆಸಿದ ಮುಂಜಾನೆ ಬೇಯಿಸಿದ ಅನ್ನವೂ ಮೃಷ್ಟಾನ್ನವಾಗಬಹುದೆಂದು ಅರಿವಿಗೆ ಬಂತಿಂದು ಹಸಿವೆಯಲಿ ಕಣ್ಣುಮಂಜಾದಂತೆ ಸಾಯಂಕಾಲದ ಸೂರ್ಯನೂ ಮಂಜಾಗುತ್ತಿದ್ದ ಘಳಿಗೆಯಲಿ ಊಟದ ತಟ್ಟೆಯೆಂದೆತ್ತಿದ ಒಂದು ಮುಷ್ಠಿ ಅನ್ನ!

ಆ ಸೋದರಿ ಸಮಾನ ಹೆಣ್ಣುಮಗಳ ‘ಮಾತುಗಳಿಲ್ಲದ ಕಣ್ಣಂಚಿನ ಧನ್ಯವಾದಗಳು’ ಸಾಕೆನಗೆ ಈ ಬಾಳ ತಟ್ಟೆಯಲಿ ಸವಿದುಣ್ಣಲು ಮೃಷ್ಟಾನ್ನವ!

ಮೃಷ್ಟಾನ್ನವಾಗಲು ಅನ್ನಕೆ ತುಪ್ಪ ಸುರಿಯಬೇಕಾಗಿಲ್ಲವೆನಿಸಿ ನಿಮಗೆಲ್ಲ ಉಣಬಡಿಸುವ ಮನಸ್ಸಾಯಿತು ಈಗ!