ಶೂನ್ಯದೊಳಗೊಂದು ಘಳಿಗೆ!


ಸುಣ್ಣ ಹಚ್ಚಿದ ಮೇಲ್ಛಾವಣಿಗೆ ಅಂಟಿಕೊಂಡ ಫ್ಯಾನು ಕೂಡ ನನ್ನ ಉಸಿರಿನ ಬಿಸಿಯನ್ನು ಇನ್ನಷ್ಟೂ ಹೆಚ್ಚಿಸಿತ್ತು. ಹೊರಗೆ ಸೂರ್ಯ ಸುಡುತ್ತಿದ್ದನೇನೋ. ಆ ಬಿಸಿಯ ಸೆಳೆತಕೆ ನನ್ನ ಕಣ್ಣುಗಳಂತೂ ಒಂಬತ್ತು ತಿಂಗಳ ಹಿಂದಿನ ನೆನಪ ಸುಖವನ್ನು ಕೆದಕುತ್ತಾ ಮೆದುಳಿಗೆ ನನ್ನ ಬಗ್ಗೆಯೇ ಅಸಹ್ಯದ ಸಂದೇಶಗಳನ್ನು ರವಾನಿಸುತ್ತಿದ್ದಂತೆ ಭಾಸವಾಗುತಿತ್ತು. ಪಕ್ಕದಲ್ಲಿ ಮಲಗಿದ್ದ, ನಿನ್ನೆಯಷ್ಟೇ ಕಣ್ಣು ಬಿಟ್ಟ ಪುಟ್ಟ ಕಂದನ ತಲೆಯನ್ನು ನೇವರಿಸಿದೆ. ಅಳು ಉಕ್ಕಿ ಬಂದತ್ತಿತ್ತು. ಬೆಳೆದು ಅಪ್ಪನೆಲ್ಲಿ ಎಂದು ಕೇಳಿದರೇ? ಉತ್ತರ ಹುಡುಕುವ ಪ್ರಯತ್ನದಲ್ಲಿ ಮನಸು ಹಳೆಯ ನೆನಪುಗಳನ್ನು ಕೆದಕತೊಡಗಿತ್ತು.

 *

ನೆನಪು – ಒಂದು
ಅಂದು ಶುಕ್ರವಾರ. ನನ್ನ ತೋಳುರಹಿತ ಟೀಶರ್ಟ್ ಮತ್ತು ಬ್ಲೂ ಜೀನ್ಸ್ ಬಹುಷಃ ನನಗರಿವಿಲ್ಲದಂತೇ ನನ್ನ ರೂಪಕ್ಕೊಂದು ಮೆರುಗು ಕೊಟ್ಟಿರಬಹುದೆಂದು ನನಗನಿಸಿದ್ದು ವಿವೇಕನ ‘ನೀನು ಸೆಕ್ಸಿಯಾಗಿ ಕಾಣುತ್ತಿದ್ದೀಯೇ’ ಎನ್ನುವ ಉದ್ಗಾರಕ್ಕೆ. ಆ ಉದ್ಗಾರದೊಳಗಿನ ಬಿಸಿಗಳು ಅವನ ಕಣ್ಣುಗಳಲ್ಲಿ ಕೊಂಚ ತುಂಟತನದ ಹಬೆಯುಕ್ಕಿಸಿದ್ದನ್ನು ನಾನು ಗಮನಿಸಿದ್ದೆ. ‘ಸುಮ್ನಿರೋ ಗೂಬೆ’ ಎಂದವಳೇ ಕೈಯಲ್ಲಿನ ಬೂಸ್ಟ್ ಕಪ್ಪಿಗೆ ತುಟಿಯನ್ನಿತ್ತು ಮುತ್ತು ಕೊಡಲೆತ್ನಿಸಿದ್ದೆ. ಆದರೂ ಮನಸು ‘ಸೆಕ್ಸೀ’ ಪದದ ಮೆಲುಕು ಹಾಕಿತ್ತು. ಬೂಸ್ಟ್ ಎಲ್ಲೋ ಗಂಟಲಲ್ಲಿ ಸಿಕ್ಕಿಕೊಂಡಂತಾಯ್ತು. ಮೆದುಳು ಕಿಟಾರನೇ ಕಿರುಚಿಕೊಂಡ ಅನುಭವ. ಸಾವರಿಸಿ ವಿವೇಕನ ಕಣ್ಣುಗಳನೊಮ್ಮೆ ಗಮನಿಸಿದೆ. ಕಣ್ರೆಪ್ಪೆ ಕದಲಿಸದೆ ನೇರವಾಗಿ ನೆಟ್ಟು ಬಿಟ್ಟಿದ್ದ ಆತ ನನ್ನ ಟೀಶರ್ಟಿನ ಎದೆ ಭಾಗದಲಿ ಬರೆದ ಸಾಲುಗಳಲಿ. ಅವು ಹೀಗಿದ್ದವು “ಟುಡೇ ಈಸ್ ಯುವರ್ ಡೇ, ಎಂಜಾಯ್ ಇಟ್”!.
‘ನಡೀಲೇ ಗೂಬೆ’ ನನ್ನ ಬಾಯಿಂದ ಹೊರಟ ಸುಮಧುರ ರಾಗಕ್ಕೆ ನಿದ್ದೆಯಿಂದೆದ್ದವನಂತೆ ಕ್ಷಣ ಗಾಬರಿಯಲಿ ಎದ್ದು ನಿಂತ ವಿವೇಕ, ಮತ್ತೆ ಮಾತಿಗೆ ಶುರು. ‘ಬರ್ತಿಯೇನೇ ಸಾಯಂಕಾಲದ ಪಾರ್ಟಿಗೆ? ಇಲ್ಲವೆನಲಾಗಲಿಲ್ಲ ನನಗೆ. ಹೋಗಲೇಬೇಕಾದ ಅನಿವಾರ್ಯತೆ ಅದು. ನನ್ನ ಟೀಮ್ ಲೀಡರ್ ಪುರುಷೋತ್ತಮಮನ ಬ್ಯಾಚಲರ್ ಪಾರ್ಟಿ ಅದು. ‘ಹೌದು ಕಣೋ’ ಎಂದೆ. ‘ಸರಿ ಹಾಗಾದ್ರೆ, ಕಾರ್ ತಂದಿದ್ದೀನಿ ಜೊತೆಗೆ ಹೋಗೋಣ’. ಮನಸು ಮಾತ್ರ ಅವನ ಕಾರಿನ ಗ್ಲಾಸಿಗೆ ಅಂಟಿಸಿದ್ದ ದಟ್ಟ ಸನ್-ಫಿಲ್ಮ್ ಬಗ್ಗೆ ಯೋಚನೆ ಮಾಡತೊಡಗಿತ್ತು!
**

ನೆನಪು – ಎರಡು
ತಲೆ ಧಿಮ್ಮೆನುತಿತ್ತು. ಯಾಕೇ ಹೀಗೆ. ಒಮ್ಮೆಲೆ ಎದ್ದು ಕುಳಿತೆ. ಕೋಣೆ ತಣ್ಣಗಿತ್ತು. ಮೈಯನೊಮ್ಮೆ ಮುಟ್ಟಿಕೊಂಡೆ. ಬರಿಯ ಚರ್ಮ ಸೋಕಿ ಕಿಟಾರನೇ ಕಿರುಚುವ ಮನಸಾದಾರೂ ಎಲ್ಲಿರುವೆನೆಂಬ ಅರಿವಿಲ್ಲದೆ ನಾಲಗೆ ನಡುಗುತಿತ್ತು. ಸ್ವಿಚ್ ಗಾಗಿ ಪರದಾಡಿದೆ.ಮೂಲೆಯಲ್ಲಿ ಬಿದ್ದ ಟೀಶರ್ಟ್ ಜೀನ್ಸ್ ಗಳನ್ನು ದೇಹಕ್ಕೆ ಸಿಗಿಸಿಕೊಳ್ಳುವಾಗ ಕೈಕಾಲು ಎತ್ತಲಾಗದಷ್ಟು ನೋವೆಣಿಸಿತು. ಕಣ್ಣು ಮಾತ್ರ ಹನಿ ಉದುರಿಸುತ್ತಲೇ ಇತ್ತು. ಆ ನೋವಿನಲ್ಲೂ ಅದು ವಿವೇಕನ ಮನೆಯೆಂಬುದು ಅರಿವಾಗಲು ಹೆಚ್ಚು ಹೊತ್ತು ಹಿಡಿಯಲಿಲ್ಲ. ಹುಚ್ಚು ಧೈರ್ಯದಲಿ ಕೋಣೆಯಿಂದ ಹೊರಬಂದಾಗ ವಿವೇಕ ಪುಟ್ಟಮಗುವಿನಂತೆ ಮಲಗಿದ್ದ. ರಾತ್ರಿಯ ಅಮಲು ಇನ್ನೂ ಆತನಿಗೆ ಇಳಿದಂತಿರಲಿಲ್ಲ.
ನನ್ನ ಹೃದಯ ಮಾತ್ರ ಪಶ್ಚಾತ್ತಾಪ ಪಡುತಿತ್ತು! ಮನಸು ನಿರ್ಧಾರಗಳ ತೊಳಲಾಟದಲ್ಲಿತ್ತು – ಆತ್ಮಹತ್ಯೆಯೇ? ತಾಯ್ತನವೇ?

***
ನೆನಪು – ಮೂರು
ವಿವೇಕ ಮಾತಾನಾಡುತ್ತಲೇ ಇದ್ದ. ನಾನು ಯಾವುದಕ್ಕೂ ಸೊಪ್ಪು ಹಾಕುತ್ತಿರಲಿಲ್ಲ. ನನಗೆ ಗೊತ್ತಿರುವ ಎಲ್ಲಾ ಅವಾಚ್ಯಗಳು ನನ್ನ ನಾಲಗೆಯ ಮೇಲೆ ಬಂದು ನಿಂತಿದ್ದು ಅದೇ ಮೊದಲು. ಆತನ ಕಣ್ಣಾಲಿಗಳು ಮಾತ್ರ ಇನ್ನಿಲ್ಲದಂತೆ ನೀರಸುರಿಸತೊಡಗಿದ್ದವು. ಕೊನೆಗೊಂದು ಮಾತು ವಿವೇಕನ ಬಾಯಿಂದ ಹೊರಬಿತ್ತು. ‘ನೀನು ಕುಡಿದು ತೂರಾಡುತ್ತಿದ್ದೆ ನನ್ನಂತೇ. ಪುರುಷೋತ್ತಮ ನಮ್ಮಿಬ್ಬರನು ನನ್ನ ಮನ್ಗೆ ಡ್ರಾಪ್ ಮಾಡಿದ್ದ. ಅಷ್ಟು ನೆನಪಿದೆ ನನಗೆ. ಧಸಕ್ಕೆಂದಿದ್ದು ಎದೆ ಮತ್ತು ಮನಸ್ಸು ಜೊತೆಗೆ. ಕುಸಿದಿದ್ದೆ!

****

ವಾಸ್ತವ!

ಇಂದು ತಾಯಿಯಾಗಿದ್ದೆ ಅಪ್ಪನಿಲ್ಲದ ಮಗುವಿಗೆ. ಒಂಟಿ ಜೀವ. ನನ್ನ ಕ್ಷಣಿಕದಮಲಿಗೆ ಕುಡಿಯೊಡೆದ ಮೊಗ್ಗೊಂದು ಅಳುವಾಗ ಪುರುಷೋತ್ತಮನ ಮುಖ ಆಸ್ಪತ್ರೆಯ ಗೋಡೆಗಳ ಮೇಲೆ ಮೂಡಿದಂತಾಯಿತು!

Advertisements

ದೀಪ್ತಿ – ೮

ನಿನ್ನೆಗಳ ಕುಂದುಗಳಿಗಂಜಿ ಇಂದಿನ ಬಾಳ ಗಂಜಿಯೊಳು

ಕಲ್ಲುಗಳನ್ನಿಟ್ಟು ಹಲ್ಲು ಮುರಿಯ ಹೊರಟೆಯೇಕೆ ಗುರುವೇ, 

ನಾಳೆಯೊಳು ಬರಿಯ ನಾಲಗೆ ನುಂಗುವಂತಾಗದಿರಲೆಂದನೀ ಶಿರ್ವಜ್ಞ!

ಉಕ್ತಿ – ೭

ನಾನು ಮೌನಿಯಾಗುವುದು ನನ್ನ ಮನಸಿನ ತೊಳಲಾಟದ ವೇದನೆಗಲ್ಲ. ಅನ್ಯರು ನನ್ನ ಬಗ್ಗೆ ತಮ್ಮ ಮನಸಿನ ಕುಹಕಗಳನ್ನು ಹೊರಗೆಡಹಿದಾಗ ಅವರ ಮನಸ್ಸುಗಳನ್ನು ತಣ್ಣಗಿರಿಸಲು!

ದೀಪ್ತಿ – ೭

ಮನದೊಳಗೆ ಮಣ್ಣ ತುಂಬಿ ಕಣ್ಣೊಳಗೆ ಕಾಮ ಹರಿಸಿ

ಕಿಚ್ಚು ಕೆಂಡದುಂಡೆಯ ಕರುಳೊಳಗಿಟ್ಟು ಕಂಡವರನು

ಕೆಸರ ಕಳೆಯಂತೆ ಕಂಡು ಉಸಿರುಗಟ್ಟಿಸಬೇಡವೆಂದನೀ ಶಿರ್ವಜ್ಞ!!

ಪ್ರಶ್ನೆ?

ಓ ಹುಡುಗೀ,
ನಿನಗೊಂದು ಪ್ರಶ್ನೆ,

ನಿನ್ನಂತೇ
ಆ ಕೋಗಿಲೆಯೂ
ವಸಂತದಲಿ
ಮಾತ್ರ
ಚಿಗುರುವ
ಮಾವಿನಮರದಲಿ
ಕೂತು
ಉಲಿಯುತ್ತದೆ……

ನಾ
ತೆಂಗಿನಂತೆ
ನಳನಳಿಸುತ್ತಿದ್ದರೂ
ನನ್ನ ಹಸಿರ ಒಲವ
ರೆಂಬೆಗಳು
ಮಾತ್ರ
ರಾಗವಿಲ್ಲದೇ
ಬರಿದು ಯಾಕೆ?