ಹೀಗ್ಯಾಕೆ?

ಓ ಕೋಗಿಲೆಯೇ,
ಈ ವಸಂತಕೆ
ತಳಿರುಗಟ್ಟಿ
ಹೂಬಿಟ್ಟ
ಮಾವಿನಲಿ
ಕೂತು
ನೀ ಹಾಡುವ
ಕಾಮಕುಹೂವಿನಿಂಚರಕ್ಕಿಂತ
ಅಂಗಳದ
ತೆಂಗಿನ
ಒಣಗರಿಯ
ಮೇಲಿನ
‘ಕಾಕಾ’ರಾಗದ
ಒಲವಕರ್ಕಶಕೆ
ಕಿವಿಯೊಡ್ಡುತ್ತದೆ
ನನ್ನ ಮನಸ್ಸು!

Advertisements

ಶ್ರಮ!

ಗೆಳತೀ,
ನಿನ್ನ ಮರೆಯಲು
ಶ್ರಮಿಸುತ್ತೇನೆ
ಬರಹದೊಳಗೆ ಅವಿತು!

ಮತ್ತೆ ನಿನ್ನದೇ ನೆನಪನ್ನು
ಬರಹದೊಳಗಿಟ್ಟು
ವಿ-ಶ್ರಮಿಸುತ್ತೇನೆ!

ಬೇಕವಳೆನಗೆ!

ಮತ್ತದೇ
ಪ್ರೀತಿಯ
ಕರೆ
ತಬ್ಬಿಕೋ
ಬಾ,
ಇನಿಯ
ಅಪ್ಪಿಕೋ
ಎನ್ನುತ್ತಾಳೆ
ಕತ್ತಲ
ಕೋಣೆಯಲಿ
ಕಣ್ಣು
ಮುಚ್ಚಿಸುತ್ತಾಳೆ!

ನಾನೋ
ಬಹು
ರಸಿಕ
ಏಳು
ತಾಸಿನ
ತನಕ
ದಿನವೂ
ಬೇಕವಳೆನಗೆ

ಬಿಡಲಾರೆ
ನಿದಿರಾದೇವಿಯ!

ಕತ್ತಲ ಹಾಡು!

ಬೆಳಕಿಲ್ಲದ
ಕೋಣೆಯಲಿ
ಕೂತು
ನಾ
ಗುನುಗುನಿಸುವ
ಗಾನಕೆ
ನೀನಿಲ್ಲವಲ್ಲ
ನನ್ನ
ಜತೆ
ಗೆಳೆಯ,
ನೀನಿದ್ದಿದ್ದರೆ
ನಾ
ಗುನುಗುನಿಸುತ್ತಿರಲಿಲ್ಲ;
ಬೆಳಕು
ಹಾಡುತಿತ್ತೇನೋ
ಕತ್ತಲ
ಕಸಿದು!

ಸುಖದ ಗುಟುಕು!

ಕಾಫಿ ನಾಲಗೆಗೆ ಜತೆಗಾತಿ,
ರುಚಿಯ ಪ್ರೀತಿಯ ಉಣಬಡಿಸಿ
ಜಠರ ನೇವರಿಸುತ್ತಾಳೆ
ಚಿಂತೆಗೂಡಿನ ಮನಸ ನೋವ ಮರೆಸಿ!

ಮರೆಯುತ್ತೇನೆ ನಿನ್ನೆಯ
ನಿನ್ನೊಲವ ಗುಟುಕಿನಲಿ
ನಿನ್ನೊಲವ ಬಿಸಿ ಆರಿದರೂ
ನನಗದುವು ಕಹಿಯಾದೀತು
ಹೀರಿ ಬಿಡುವೆ ತಣ್ಣಗಿರಲಿ
ನನ್ನ ತನುವೆಂಬ ಸ್ವಾರ್ಥ!

ಬೆಳಕ ಜೊತೆ ನಗುವ ನಯನ
ನಾ ಸುಖಿಯು ನಾ ಸುಖಿಯು
ನೀ ಅನುದಿನವೂ ತಣಿಸಿ ನಿಂತೊಡೆ!