ಸ್ವತಂತ್ರವೇ?

ಮೋಡದೊಳಗಿನ ಹನಿ ಬಸಿರಾಗಿ
ಮಳೆ ಯಾದೊಡೆ
ಕುಂಡದೊಳಗಿನ ಗಿಡ ಚಿಗುರಾಗಿ
ಎಲೆ ಮೂಡಿದೊಡೆ
ಬಳ್ಳಿ ತಾ ನಕ್ಕು ಮರವಸುತ್ತಿ
ಹೂವ ಅರಳಿಸಿ ದೊಡೆ
ಮರ ತಾ ಗಾಳಿ ನುಂಗಿ
ಹಣ್ಣ ಮಾಗಿಸಿ ದೊಡೆ
ಸ್ವತಂತ್ರವೇ ಮಳೆ, ಎಲೆ, ಹೂವು, ಹಣ್ಣು ?
Advertisements

ಹೆಣ್ಣು – ಕಾಮ

ಓ ಗಂಡೇ,
ಹೆಣ್ಣೆoದೊಡೆ
ನಿನ್ನಕ್ಷಿಯಲಿ ಕಾಮವೇಕೆ?
ಕ್ಷಣದಲಿ ಬರಲಾರಳೇ
ನಿನ್ನ ಮೆದುಳಂಚಿನಲಿ
ಹಡೆದವಳು….
ಅವಳೂ ಹೆಣ್ಣಲ್ಲವೇ?

ನೋವು

ನಿನ್ನೆದೆಯ ಮೇಲೆ ಹಸಿರು ಹುಲ್ಲ ಬಸಿರಾಗಿಸಲು
ನೀರ ತೊಯ್ದವ ಆ ಮಳೆರಾಯ,
ನಿನ್ನೆದೆಯ ಮೇಲೆ ಬಳ್ಳಿ ಹೂವರಳಿಸಲು
ಸ್ಪರ್ಶಗೈದವ ಆ ದುಂಬಿ
ನಿನ್ನೆದೆಯ ಮೇಲೆ ಮರಗಿಡಗಳ ಸಾಲು
ಮರುಜನ್ಮನೀವುದು ಆ ಹಕ್ಕಿ
ಎಲ್ಲ ನಿನ್ನೆದೆಯ ಮೇಲೆ ತಾಯಿ
ನಗುವ ಕಂದನ ನೋಡು
ತಾ ನಗುತಿಹ, ನೀನೇನ ಪಡೆದೆ
ಬರಿಯ ಬಸಿರಿನ ಬೇನೆ…

ಸ್ನೇಹ ಸುಮಧುರ

ಇಂದೊಂದೆ ದಿನವಿರದಿರಲಿ
ಈ ನಮ್ಮ ಸ್ನೇಹ ಪಯಣ
ನೂರೆಂಟು ಸಹಸ್ರಾರು ಮೈಲು
ಗಡಿರೇಖೆ ದಾಟಿ, ಮೆಟ್ಟಿನಿಲಲಿ
ದ್ವೇಷ ಸಂಕೋಲೆಯ ಕಳಚಿ
ಪ್ರೀತಿ ಮಮತೆಯ ಬೆಳೆಸಿ
ಅನತಿ ದೂರವ ಸಾಗೋಣ
ಅನಂತಾನಂತ ವಾಗೋಣ

ಓ ಮೋಡವೇ,

ಓ ಮೋಡವೇ,
ಓಡದಿರು ನೀ ತೇಲುವ ಗಾಳಿಯ ಮುತ್ತಿಗೆ
ಹನಿಸು ನೀ ಎರಡು ಹನಿ ಸೋನೆಯ
ಬರಡಾಗಿಸದಿರು ನನ್ನ ಹಸಿರೆದೆಯ
ಭೂರಮೆ ನಾನು ಭುವನ ಸುಂದರಿ
ತಂಪಾಗಿಸು ನಿನ್ನ ಪ್ರಿಯತಮೆಯ!!

ಕಷ್ಟ-ಸುಖ

ಹುಣ್ಣಿಮೆಯ ಭಾನು ಚಂದಿರನ ನಗು
ತಾರೆಗಳಿವೆ ತೋಟದಲಿ, ಭುವಿಯೆಲ್ಲ ತಿಳಿ ಬೆಳಕು,
ನಾಳೆ ಪಾಡ್ಯ, ಮಂದ ಚಂದ್ರಮ, ಹುಣ್ಣಿಮೆಯ ತವಕ
ಮತ್ತದೇ ಕೃಷ್ಣ ಪಕ್ಷ, ಕಪ್ಪಾಗುತಿದೆ ದಿನ ಕಳೆದಂತೆ
ಅದೇ ಏಕಾದಶಿಯ ನೋವು, ಆತಂಕದ ಅಮಾವಾಸ್ಯೆ,
ಬಿದಿಗೆ, ತದಿಗೆ, ಚತುರ್ಥಿ, ಕೃಷ್ಣ ಕಳೆದು ಶುಕ್ಲ,
ಬೆಳದಿಂಗಳ ಪೌರ್ಣಮಿ,..ಭುವಿ ಶ್ರಂಗಾರ…

ಸುಖ?

ನೀರವ ಮೌನ, ಮಧ್ಯ ರಾತ್ರಿಯ ನಿದ್ದೆಯ ಗುಂಗು
ನಾನೊಬ್ಬ ಇರುಳು ಕವಿ, ಕೊರಗುತಿದೆ ಚಾಪೆ
ವಿರಹವೇದನೆಯೇನೋ ತಾಳ್ಮೆಯಿಲ್ಲ?
ಮತ್ಸರವೋ ಪೆನ್ನ ಮೇಲೆ, ನನಗೋ
ಉತ್ಸಾಹಃ ಕಣ್ ತಂಪು, ನಿಟ್ಟುಸಿರು
ಖಾಲಿ ಹಾಳೆಯ ಮಾನ ಭಂಗ,
ಕವನವಿಲ್ಲದಿದ್ದರೂ, ಶಾಯೀ ಖಾಲಿ
ಪೆನ್ನು ಸುಸ್ತು………